ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನಾ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಸಂಸದ ಡಿ. ಕೆ. ಸುರೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸುವ ಕನಿಷ್ಠ ಸೌಜನ್ಯ ಇಲ್ಲ. ನಿಮ್ಮ ಕ್ಷುಲ್ಲಕ ರಾಜಕಾರಣವು ಸಂವಿಧಾನಾತ್ಮಕ ಶಿಷ್ಟಾಚಾರವನ್ನು ಮರೆಮಾಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರ ವಿರುದ್ಧ ಕಿಡಿಕಾರಿದ್ದಾರೆ.
ಈ ರಾಷ್ಟ್ರೀಯ ಹೆದ್ದಾರಿಯ ಬಹುಭಾಗವು ನಾನು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾದುಹೋಗಿದೆ. ಇಲ್ಲಿನ ಜನತೆ ನನ್ನನ್ನು ತಮ್ಮ ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಆದರೆ ನಿಮ್ಮ ಕ್ಷುಲ್ಲಕ ರಾಜಕಾರಣವು ಸಂವಿಧಾನಾತ್ಮಕ ಶಿಷ್ಟಾಚಾರವನ್ನು ಮರೆಮಾಚಿದೆ. ಈ ರಾಷ್ಟ್ರೀಯ ಹೆದ್ದಾರಿಯ ಸುಮಾರು ಶೇ.30 ಕಾಮಗಾರಿಯು ಇನ್ನೂ ಬಾಕಿ ಇದೆ. ಆದರೂ ಈ ಅಪೂರ್ಣ ಯೋಜನೆಯನ್ನು ಕೇವಲ ಚುನಾವಣಾ ಗಿಮಿಕ್‌ಗಾಗಿ ಉದ್ಘಾಟಿಸಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.
ಇದನ್ನೂ ಓದಿ | Modi in Karnataka: ಕಾಂಗ್ರೆಸ್‌ನಿಂದ ಬಸವೇಶ್ವರರಿಗೆ ಅವಮಾನ: ರಾಹುಲ್ ಭಾಷಣ ಉಲ್ಲೇಖಿಸಿದ ಮೋದಿ
2013ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿಪಡಿಸಲು ಮೊದಲು ಪ್ರಸ್ತಾವನೆ ಸಲ್ಲಿಸಿದ್ದನ್ನು ತಮಗೆ ನೆನಪಿಸಬಯಸುತ್ತೇನೆ. ಅಲ್ಲದೇ ರೈತರ ಭೂಮಿ ಸುಗಮ ಸ್ವಾಧೀನಕ್ಕೆ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರದೇ ಹೋಗಿದ್ದರೆ ಈ ಯೋಜನೆ ಇಷ್ಟು ಸುಲಭವಾಗಿ ಕಾರ್ಯಸಾಧು ಆಗುತ್ತಿರಲಿಲ್ಲ ಎಂಬುದನ್ನು ನಾವು ಮರೆಯಬಾರದು. ಇದರ ಸಂಪೂರ್ಣ ಶ್ರೇಯಸ್ಸು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಲ್ಲಬೇಕು ಎಂದು ತಿಳಿಸಿದ್ದಾರೆ.
ಕೇಂದ್ರಕ್ಕೆ ಅತಿಹೆಚ್ಚು ತೆರಿಗೆ ಪಾವತಿಸುವ ಎರಡನೇ ದೊಡ್ಡ ರಾಜ್ಯ ಕರ್ನಾಟಕವಾಗಿದೆ. ಆದರೆ, ರಾಜ್ಯದ ಸುಮಾರು 5,200 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯು ಪ್ರಧಾನಿ ಕಚೇರಿ ಹಾಗೂ ನೀತಿ ಆಯೋಗದ ಮುಂದೆ ಕಳೆದ 8 ವರ್ಷಗಳಿಂದ ಧೂಳು ಹಿಡಿಯುತ್ತಾ ಕೂತಿದೆ. ಈ ಕುರಿತು ನಿಮ್ಮ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕರ್ನಾಟಕ ಅಭಿವೃದ್ಧಿ ವಿರುದ್ದದ ನಿಮ್ಮ ನಿಲುವು ಹಾಗೂ ಮಲತಾಯಿ ಧೋರಣೆಗೆ ಹಿಡಿದ ಕೈಗನ್ನಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ | JDS Pancharatna: ರಾಷ್ಟ್ರೀಯ ಪಕ್ಷಗಳು ಕ್ರೆಡಿಟ್ ಪಡೆಯೋದಲ್ಲ, ಕೆಲಸ ಮಾಡಿ ತೋರಿಸಬೇಕು: ಎಚ್‌ಡಿಕೆ
ಕರ್ನಾಟಕದ ಅಪೂರ್ಣ ಯೋಜನೆಗಳನ್ನು ಉದ್ಘಾಟಿಸುತ್ತಿರುವುದು ಕರ್ನಾಟಕದ ಜನತೆಯನ್ನು ಹೇಗಾದರೂ ವಂಚಿಸಿ ಚುನಾವಣಾ ಗೆಲುವು ಸಾಧಿಸಬಹುದು ಎನ್ನುವ ನಿಮ್ಮ ಹತಾಶ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ. ನಿಮ್ಮ ಈ ವಿಕೃತ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋಡಿ ವಿರುದ್ಧ ಕಿಡಿಕಾರಿದ್ದಾರೆ.