Site icon Vistara News

ಡಿಕೆಶಿಗೆ ಡಬಲ್‌ ಸಂಕಷ್ಟ: ಒಂದು ಕಡೆ ಇ.ಡಿ ಗ್ರಿಲ್‌, ಇನ್ನೊಂದು ಕಡೆ ಐಟಿ ತನಿಖೆಗೆ ಸುಪ್ರೀಂಕೋರ್ಟ್‌ ಅಸ್ತು

DKS ED

ನವದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಡಬಲ್‌ ಸಂಕಟ ಎದುರಾಗಿದೆ. ಕಾಂಗ್ರೆಸ್‌ ಜೋಡೊ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ, ಮುಂದಿನ ವಿಧಾನಸಭಾ ಚುನಾವಣೆಗೆ ಭರ್ಜರಿಯಾಗಿ ಸಿದ್ಧರಾಗುತ್ತಿದ್ದ ಅವರಿಗೆ ಒಂದು ಕಡೆ ಜಾರಿ ನಿರ್ದೇಶನಾಲಯ ಬೆನ್ನು ಹತ್ತಿದ್ದರೆ ಇನ್ನೊಂದು ಕಡೆ ಆದಾಯ ತೆರಿಗೆ ಇಲಾಖೆ ತನಿಖೆಗೆ ಸುಪ್ರೀಂಕೋರ್ಟ್‌ ಅಸ್ತು ಎಂದು ಹೇಳಿದೆ.

ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚು ಸಂಪತ್ತು ಹೊಂದಿರುವ ಪ್ರಕರಣದಲ್ಲಿ ವಿಚಾರಣೆ ಎದುರಿಸುವಂತೆ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್‌ ಅವರಿಗೆ ನೋಟಿಸ್‌ ನೀಡಿತ್ತು. ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸಿ ಕೆಲವು ದಿನ ಜೈಲಿನಲ್ಲೂ ಇದ್ದು ಬಂದಿದ್ದ ಡಿ.ಕೆ.ಶಿಗೆ ಈ ಬಾರಿ ಅನಧಿಕೃತ ಸಂಪತ್ತು ಕಂಟಕವಾಗಿತ್ತು. ಸಿಬಿಐ ವಿಚಾರಣೆಯ ಬಳಿಕ ಪ್ರಕರಣ ಇ.ಡಿ ಕೈಗೆ ಬಂದಿತ್ತು.

ಈ ವಿಚಾರಣೆಗಾಗಿ ಶಿವಕುಮಾರ್‌ ಅವರು ಸೋಮವಾರ ಮಧ್ಯಾಹ್ನ ದಿಲ್ಲಿಯ ಎಪಿಜೆ ಅಬ್ದುಲ್‌ ಕಲಾಂ ರಸ್ತೆಯಲ್ಲಿರುವ ಇ.ಡಿ. ಕಚೇರಿಗೆ ತೆರಳಿದ್ದರು. ಅಲ್ಲಿ ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.

ಯಂಗ್‌ ಇಂಡಿಯಾ ಸಂಬಂಧದ ಬಗ್ಗೆಯೂ ವಿಚಾರಣೆ
ಡಿ.ಕೆ. ಶಿವಕುಮಾರ್‌ ಅವರನ್ನು ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆಯ ಪ್ರಕರಣದಲ್ಲಿ ವಿಚಾರಣೆಗೆ ಕರೆದಿರುವುದಾದರೂ ಅಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಯಂಗ್‌ ಇಂಡಿಯನ್‌ ಸಂಸ್ಥೆಯ ಜತೆಗಿನ ಸಂಬಂಧ ಮತ್ತು ಹಣಕಾಸು ವ್ಯವಹಾರದ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ. ಈ ವಿಚಾರವನ್ನು ಸ್ವತಃ ಡಿ.ಕೆ. ಶಿವಕುಮಾರ್‌ ಅವರೇ ತಿಳಿಸಿದ್ದಾರೆ.

ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಂಗ್‌ ಇಂಡಿಯನ್‌ ಜತೆಗಿನ ಸಂಬಂಧ, ಯಂಗ್‌ ಇಂಡಿಯಾದ ಜತೆಗಿನ ಹಣಕಾಸು ವ್ಯವಹಾರದ ಬಗ್ಗೆ ಕೇಳಿದರು. ಜತೆಗೆ ನನ್ನ ಆಸ್ತಿ ಮತ್ತು ಸಾಲಗಳು, ಕೃಷಿ ಭೂಮಿ, ವ್ಯವಹಾರ ಮತ್ತಿತರ ವಿಚಾರಗಳನ್ನೂ ವಿಚಾರಿಸಿದರು ಎಂದರು.

ʻʻಬಿಜೆಪಿಯಲ್ಲಿರುವ ನನ್ನ ಗೆಳೆಯರಿಗೆ ಒಂದೇ ಒಂದು ಸಲಹೆ ಇದೆ. ನೀವು ನನ್ನ ವಿರುದ್ಧ ಹೋರಾಡುವುದಿದ್ದರೆ ದಯವಿಟ್ಟು ರಾಜಕೀಯವಾಗಿ ಹೋರಾಡಿʼʼ ಎಂದು ಅವರು ಸಲಹೆ ನೀಡಿದರು.

ಕಾಂಗ್ರೆಸ್‌ ಜೋಡೋ ಯಾತ್ರೆಯ ನಡುವಿನಿಂದಲೇ ಭಾನುವಾರ ಸಂಜೆ ದಿಲ್ಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್‌ ಅವರು ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯಕ್ಕೆ ಹಾಜರಾದ ವೇಳೆ ಸಣ್ಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರಿಗೆ ವೈದ್ಯಕೀಯ ನೆರವು ನೀಡಲಾಯಿತು.

ಐಟಿ ತನಿಖೆಗೆ ಸುಪ್ರೀಂಕೋರ್ಟ್‌ ಅಸ್ತು
ಈ ನಡುವೆ, ಸುಪ್ರೀಂಕೋರ್ಟ್‌ ಸೋಮವಾರ ಡಿ.ಕೆ ಶಿವಕುಮಾರ್‌ ವಿರುದ್ಧ ಆದಾಯ ತೆರಿಗೆ ಇಲಾಖೆ ತನಿಖೆಗೂ ಅಸ್ತು ಎಂದಿದೆ. 2018ರಲ್ಲಿ ಬಿಡದಿ ಈಗಲ್ಟನ್ ರೆಸಾರ್ಟ್​ನಲ್ಲಿ ಹಣ ವರ್ಗಾವಣೆ ದಾಖಲೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಬಳಿಕ ಡಿಕೆಶಿ ಐಟಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಐಟಿ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​​ ನೋಟಿಸ್​ ಜಾರಿ ಮಾಡಿದೆ. ಇದೇ ವೇಳೆ ಹೈಕೋರ್ಟ್​ ನೀಡಿದ್ದ ಆದೇಶಕ್ಕೆ ಜಸ್ಟೀಸ್​​ ಸಂಜೀವ್​ ಖನ್ನಾ ಅವರ ನೇತೃತ್ವದ ಪೀಠ ಮಧ್ಯಂತರ ತಡೆ ನೀಡಿದೆ. ಇದೀಗ ಸುಪ್ರೀಂಕೋರ್ಟ್​ ಡಿಕೆಶಿ ವಿರುದ್ಧ ಐಟಿ ತನಿಖೆಗೆ ಅಸ್ತು ಎಂದಿರುವುದು ಡಬಲ್‌ ಸಂಕಷ್ಟ ಎದುರಾದಂತಾಗಿದೆ.

ಅಷ್ಟೇ ಅಲ್ಲ ಈ ಪ್ರಕರಣದಲ್ಲಿ ಹೊಸದಾಗಿ ಪ್ರಾಸಿಕ್ಯೂಷನ್ ಸಲ್ಲಿಸಲು ಅರ್ಜಿದಾರರಿಗೆ ಸುಪ್ರೀಂಕೋರ್ಟ್​ ಸ್ವಾತಂತ್ರ್ಯ ನೀಡಿದೆ. 6 ವಾರಗಳಲ್ಲಿ ನೋಟಿಸ್​ಗೆ ಉತ್ತರ ನೀಡುವಂತೆಯೂ ಹಾಗೂ 4 ವಾರಗಳಲ್ಲಿ ಕೌಂಟರ್ ಸಲ್ಲಿಸಲು ಸೂಚನೆ ನೀಡಿದೆ. ಆ ಬಳಿಕ 2 ವಾರಗಳಲ್ಲಿ ಮರುಜೋಡಣೆ ಮಾಡಲು ನ್ಯಾಯಪೀಠ ಆದೇಶಿಸಿದೆ. ಕಕ್ಷಿದಾರರ ಪರ ಹಿರಿಯ ವಕೀಲ ಮುಕುಲ್​ ರೋಹ್ಟಗಿ ವಾದ ಮಂಡನೆ ಮಾಡಿದರು.

ಇದನ್ನೂ ಓದಿ | ಇ.ಡಿ ವಿಚಾರಣೆಗೆ ಹಾಜರಾದ ವೇಳೆ ಡಿಕೆಶಿಗೆ ಕಾಡಿದ ಆರೋಗ್ಯ ಸಮಸ್ಯೆ, ವೈದ್ಯರ ತಪಾಸಣೆಗೆ ಅವಕಾಶ

Exit mobile version