ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ (Karnataka) ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಸಮುದಾಯವಾರು ಡಿಸಿಎಂ ಹುದ್ದೆ ನೀಡಬೇಕು ಎಂದು ಒಂದಷ್ಟು ಜನ ಆಗ್ರಹಿಸಿದರೆ, ಡಿ.ಕೆ.ಶಿವಕುಮಾರ್ ಅವರಿಗೇ ಸಿಎಂ ಹುದ್ದೆ ನೀಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ, ಸಿಎಂ, ಡಿಸಿಎಂ ಚರ್ಚೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದು, “ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡಿರಿ” ಎಂಬುದಾಗಿ ಬಣ ರಾಜಕೀಯ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
“ಕರ್ನಾಟಕದ ಸಿಎಂ ಹಾಗೂ ಡಿಸಿಎಂ ಕುರಿತು ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ಯಾವ ರೆಕಮಂಡೇಷನ್ ಕೂಡ ಅವಶ್ಯಕತೆ ಇಲ್ಲ. ನಾನು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಸೇರಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಶಾಸಕ ಕೂಡ ಇದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಇಲ್ಲದಿದ್ದರೆ, ಎಐಸಿಸಿ ಹಾಗೂ ನಾನು ವಿಧಿಯಿಲ್ಲದೆ ನೋಟಿಸ್ ನೀಡಬೇಕಾಗುತ್ತದೆ. ಅನಿವಾರ್ಯವಾಗಿ ಪಕ್ಷದ ಶಿಸ್ತು ಕಾಪಾಡಲು ನೋಟಿಸ್ ನೀಡಬೇಕಾಗುತ್ತದೆ” ಎಂದು ಲಾಬಿ ಮಾಡುವ ಶಾಸಕರಿಗೆ ಎಚ್ಚರಿಕೆ ನೀಡಿದರು.
“ಪಕ್ಷವನ್ನು ಕಟ್ಟಲು ಬಹಳ ಕಷ್ಟಪಟ್ಟಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡು ಇದ್ದರೆ ಒಳ್ಳೆಯದಾಗುತ್ತದೆ. ಚಂದ್ರಶೇಖರ ಸ್ವಾಮೀಜಿ ಅವರು ನನ್ನ ಮೇಲಿನ ಅಭಿಮಾನಕ್ಕಾಗಿ ಹಾಗೆ ಮಾತನಾಡಿದ್ದಾರೆ. ಬೇರೆ ಯಾವ ಸ್ವಾಮೀಜಿಗಳೂ ಮಾತನಾಡಿಲ್ಲ. ಎಲ್ಲರಿಗೂ ಕೈ ಮುಗಿಯುತ್ತೇನೆ. ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಬೇಡಿ” ಎಂದು ಕೂಡ ಹೇಳಿದರು.
ಚಂದ್ರಶೇಖರ ಸ್ವಾಮೀಜಿ ಹೇಳಿದ್ದೇನು?
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಕೆಲ ದಿನಗಳ ಹಿಂದೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆಯೇ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದರು. “ಎಲ್ಲರೂ ಮುಖ್ಯಮಂತ್ರಿಗಳಾಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು” ಹೇಳಿದ್ದರು.
ಇದನ್ನೂ ಓದಿ: DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್