ಬೆಂಗಳೂರು: ಕುವೆಂಪುರವರೂ ಸೇರಿದಂತೆ ಕನ್ನಡದ ಮಹತ್ವದ ಸಾಹಿತಿಗಳನ್ನು ಕುರಿತು ಹಾಗೂ ನಾಡಗೀತೆ, ನಾಡಧ್ವಜಗಳಂತಹ ಕನ್ನಡದ ಅಸ್ಮಿತೆಯನ್ನು ಕುರಿತು ಅವಹೇಳನ ಮಾಡುವವರನ್ನು ಕ್ಷಮಿಸಲೇಬಾರದು ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಆಗ್ರಹಿಸಿದ್ದಾರೆ.
ಕನ್ನಡದ ನೆಲದಿಂದ ಜಗನ್ಮಾನ್ಯತೆ ಪಡೆಯುವಂತಹ ಹಾಗೂ ಶ್ರೀಸಾಮಾನ್ಯನ ಬದುಕಿನ ಉನ್ನತಿಗಾಗಿ ಜನಪರ ಹಾಗೂ ಜೀವಪರವಾದ ವೈಚಾರಿಕ ಸಾಹಿತ್ಯ ಸೃಷ್ಟಿಸಿದ ರಸಋಷಿ-ರಾಷ್ಟ್ರಕವಿ ಕುವೆಂಪು. ಅವರ ಮತ್ತು ಅಂಥವರ ಬದುಕು-ಬರಹಗಳನ್ನು ಕುರಿತು ಲಘುವಾಗಿ ಮಾತನಾಡುವ, ನಾಡಗೀತೆ-ನಾಡಧ್ವಜಗಳಂತಹ ಕನ್ನಡದ ಅಸ್ಮಿತೆಗಳ ಬಗೆಗೆ ಅವಹೇಳನಕಾರಿ ಸಂದೇಶ ಬಿತ್ತುವ ಯಾವುದೇ ನರಾಧಮ ನೀಚರನ್ನು ಕನ್ನಡದ ಜನತೆ ಸಹಿಸಲಾರರು ಎಂದು ಎಂ.ಪ್ರಕಾಶಮೂರ್ತಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | ನಾಡಗೀತೆಗೆ ಅವಹೇಳನ ಆರೋಪ ; ಚಕ್ರತೀರ್ಥ, ಲಕ್ಷ್ಮಣ ಅಕಾಶೆ ವಿರುದ್ಧ ದೂರು
ಅಂತಹವರು ಯಾರೇ ಆಗಿರಲಿ ಅವರನ್ನು ಕುವೆಂಪು ಪ್ರತಿಮೆಯ ಬಳಿ ಬಂದು ಬಹಿರಂಗ ಕ್ಷಮೆ ಯಾಚಿಸುವಂತೆ ಆದೇಶಿಸಿ ಅನಿರ್ದಿಷ್ಟಾವಧಿಗೆ ಗಡಿಪಾರು ಮಾಡಬೇಕೆಂದು ಕರ್ನಾಟಕ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸುತ್ತೇವೆ. ತಪ್ಪಿದಲ್ಲಿ ಅದೇ ಕುವೆಂಪುರವರ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಕುವೆಂಪು ಅವರ ಸಾಹಿತ್ಯ ಮತ್ತು ವ್ಯಕ್ತಿತ್ವದ ಬಗೆಗೆ ಕಾಲೆಳೆಯುವ ಕುಕೃತ್ಯಗಳನ್ನು ಮಾಡಿದ್ದರು. ಆದರೆ ಕುವೆಂಪು ಅವರು ಕನ್ನಡ ಸಾಹಿತ್ಯದ ಮಡಿಲಿಗೆ ಮೇರುಕೃತಿಗಳ ಅರ್ಪಣೆ ಮಾಡುವುದರೊಂದಿಗೆ ಮೇರುಸದೃಶ ವ್ಯಕ್ತಿತ್ವಪೂರ್ಣತೆಯಿಂದ ಸಾಹಿತ್ಯ ಸೂರ್ಯನಂತೆ ಪ್ರಕಾಶಿಸಿದರು ಎಂದು ಪ್ರಕಾಶಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಾಲಕರು ಮತ್ತು ನಿರ್ವಾಹಕರ ಎದೆಬಿಲ್ಲೆ ಮತ್ತು ಭುಜಬಿಲ್ಲೆ ಕನ್ನಡದಲ್ಲಿರಬೇಕು: BMTCಗೆ ನಾಗಾಭರಣ ಸೂಚನೆ