ಮಂಗಳೂರು: ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರು ಜಾರಿಗೆ ತರಲು ಉದ್ದೇಶಿಸಿದ್ದ ದ್ವಿಚಕ್ರ ವಾಹನಗಳಲ್ಲಿ ಡಬಲ್ ರೈಡಿಂಗ್ ನಿಷೇಧ ಆದೇಶವನ್ನು ಕೆಲವೇ ಗಂಟೆಗಳಲ್ಲಿ ವಾಪಸ್ ಪಡೆಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ದಿನಗಳ ಅವಧಿಯಲ್ಲಿ ಮೂರು ಕೊಲೆಗಳು ಸಂಭವಿಸಿವೆ. ಬೆಳ್ಳಾರೆ ಸಮೀಪ ಕಳಂಜದ ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಸುರತ್ಕಲ್ ಫಾಝಿಲ್ ಅವರನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ. ಈ ರೀತಿ ಸಾಲು ಸಾಲು ಹತ್ಯೆಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನು ತಡೆಯುವುದು ಹೇಗೆ ಎಂದು ಯೋಚಿಸಿದಾಗ ಪೊಲೀಸರಿಗೆ ಹೊಳೆದ ಐಡಿಯಾಗಳಲ್ಲಿ ಒಂದು ದ್ವಿಚಕ್ರ ವಾಹನಗಳಲ್ಲಿ ಡಬಲ್ ರೈಡಿಂಗ್‌ನ್ನು ನಿಷೇಧಿಸುವುದು. ಎಡಿಜಿಪಿ ಆಗಿರುವ ಅಲೋಕ್ ಕುಮಾರ್ ಅವರು ಮಧ್ಯಾಹ್ನದ ಹೊತ್ತಿಗೆ ಈ ನಿಯಮವನ್ನು ಪ್ರಕಟಿಸಿದರು. ಗುರುವಾರ ಸಂಜೆಯಿಂದಲೇ ಈ ನಿಯಮ ಜಾರಿಗೆ ಬರುವುದಾಗಿ ಹೇಳಿದರು.
ಆದರೆ, ಈ ಆದೇಶದ ವಿಷಯ ತಿಳಿಯುತ್ತಲೇ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ಷೇಪ ವ್ಯಕ್ತವಾಯಿತು. ಜತೆಗೆ ಜಾಲ ತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಕೂಡಾ ಆಯಿತು.
ನಿಯಮದ ಪ್ರಕಾರ ಪ್ರಕಾರ ದ್ವಿಚಕ್ರ ವಾಹನದಲ್ಲಿ ಇಬ್ಬರು ಪ್ರಯಾಣಿಸುವಂತಿಲ್ಲ. ಒಂದು ವಾಹನದಲ್ಲಿ ಒಬ್ಬ ಮಾತ್ರ ಕುಳಿತು ಪ್ರಯಾಣಿಸಬಹುದು. ಆದರೆ, ಮಹಿಳೆಯರು, ಹಿರಿಯ ನಾಗರಿಕರು ಇಲ್ಲವೇ ಮಕ್ಕಳು ಪಿಲಿಯನ್ ರೈಡರ್ ಆಗಿ ಹಿಂದುಗಡೆ ಕೂರಲು ಅವಕಾಶ ನೀಡಲಾಗಿತ್ತು. ಇಬ್ಬರು ಪುರುಷರು ಮಾತ್ರ ಜತೆಗೆ ಹೋಗುವಂತಿಲ್ಲ ಎನ್ನುವುದು ನಿಯಮದ ಪ್ರಮುಖ ಸಾರವಾಗಿತ್ತು.
ಈ ನಿಯಮ ಜಾರಿಗೆ ಪೊಲೀಸರು ಕೊಟ್ಟ ಪ್ರಮುಖ ಕಾರಣ, ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಕ್ರಿಮಿನಲ್‌ಗಳು ದ್ವಿಚಕ್ರ ವಾಹನದಲ್ಲಿ ಬರುತ್ತಾರೆ. ಹಿಂಬದಿ ಸವಾರ ಮಚ್ಚು ಲಾಂಗ್‌ಗಳಿಂದ ಹೊಡೆದು ಬಳಿಕ ಪರಾರಿಯಾಗುತ್ತಾರೆ. ಹೀಗಾಗಿ ಡಬಲ್ ರೈಡಿಂಗ್ ಅನ್ನೇ ಕೆಲವು ದಿನಗಳ ಮಟ್ಟಿಗೆ ನಿಷೇಧ ಮಾಡಬೇಕು ಎನ್ನುವುದು ಅವರ ಪ್ಲ್ಯಾನ್ ಅಗಿತ್ತು.
ಆದರೆ, ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಯಿತು. ಪೊಲೀಸರ ಅಸಹಾಯಕತೆಗೆ ಏನೆಲ್ಲ ಕಾರಣ ನೀಡಲಾಗುತ್ತಿದೆ ಎಂದು ಜನ ಸಿಟ್ಟಿಗೆದ್ದರು. ಅದಕ್ಕಿಂತಲೂ ಹೆಚ್ಚಾಗಿ, ʻಇಂಥ ಅಪಾಯದ ಸನ್ನಿವೇಶಗಳಲ್ಲಿ ನಿಜವಾಗಿ ಒಬ್ಬೊಬ್ಬರೇ ಹೋಗಬೇಡಿ ಎನ್ನುವ ಸಂದೇಶ ಕೊಡಬೇಕಿತ್ತು. ಬೈಕ್‌ನಲ್ಲಿ ಒಂಟಿಯಾಗಿ ಹೋಗಬೇಡಿ. ಯಾರನ್ನಾದರೂ ಜತೆಗೆ ಕರೆಸಿಕೊಳ್ಳಿ ಎನ್ನುವ ಸಲಹೆ ಕೊಡಬೇಕಿತ್ತು. ಪೊಲೀಸರು ನೋಡಿದರೆ ಒಬ್ಬರೇ ಹೋಗಿ ಎನ್ನುತ್ತಿದ್ದಾರೆ.. ಇದೆಂಥ ನಿಯಮʼʼ ಎಂದು ಲೇವಡಿ ಮಾಡಿದ್ದರು. ಜತೆಗೆ ʻದ್ವಿಚಕ್ರ ವಾಹನದಲ್ಲಿ ಒಬ್ಬರೇ ಹೋಗಲು ದುಷ್ಕರ್ಮಿಗಳು ಹೊಡೀಬಹುದು ಎನ್ನುವ ಭಯ, ಇಬ್ಬರು ಹೋಗೋಣ ಎಂದರೆ ಪೊಲೀಸರು ಹಿಡೀಬಹುದು ಎನ್ನುವ ಭಯʼ ಎಂದು ಜನ ಗೇಲಿ ಮಾಡಿದ್ದರು.
ಬದಲಾದ ನಿಯಮ
ಈ ನಡುವೆ ಸ್ಪಷ್ಟನೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್ ಅವರು, ಈ ನಿಯಮ ಹಗಲು ಜಾರಿಯಲ್ಲಿ ಇರುವುದಿಲ್ಲ. ರಾತ್ರಿ ಮಾತ್ರ. ಇದರಿಂದ ಮಹಿಳೆಯರು, ಮಕ್ಕಳು, ಹಿರಿಯರಿಗೆ ಏನೂ ತೊಂದರೆ ಇಲ್ಲ ಎಂದು ಹೇಳಿದರು.
ಅಂತಿಮವಾಗಿ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಮಧ್ಯ ಪ್ರವೇಶ ಮಾಡಿ ಈ ನಿಯಮವನ್ನೇ ರದ್ದು ಮಾಡಲಾಗಿದೆ. ಆದೇಶ ವಾಪಸ್ ಪಡೆಯಲಾಗಿದೆ ಎಂದು ಘೋಷಿಸಿದರು.
ರಾಜ್ಯ ಸರಕಾರ ಇತ್ತೀಚೆಗೆ ಕೆಲವೊಂದು ಆದೇಶಗಳನ್ನು ನೀಡಿ ಕೆಲವೇ ಗಂಟೆಗಳಲ್ಲಿ ಬದಲಾಯಿಸುತ್ತಿತ್ತು. ಈಗ ಮಂಗಳೂರು ಪೊಲೀಸರ ಸರದಿ. ಏನೇ ಆದರೂ ತಲೆಬುಡವಿಲ್ಲದ ಈ ನಿಯಮ ಜಾರಿಗೆ ಬರುವ ಮೊದಲೇ ಮೂಲೆ ಸೇರಿತು ಎಂದು ದಕ್ಷಿಣ ಕನ್ನಡಿಗರು ಖುಷಿಯಾಗಿದ್ದಾರೆ. ಇದೇ ವೇಳೆ, ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ದುಷ್ಕೃತ್ಯ ನಡೆಸಲು ಸಂಚು ನಡೆಸುತ್ತಿರುವ ಮಾಹಿತಿ ಇದ್ದರೆ ಕಠಿಣ ತಪಾಸಣೆ ಮಾಡಿಸಿ ಎಂದು ಸಲಹೆ ನೀಡಿದ್ದಾರೆ.
ಹಿಂದಿನ ಸುದ್ದಿ | ಟೂ ವೀಲರ್‌ನಲ್ಲಿ ಇಬ್ಬರು ಕೂರುವಂತಿಲ್ಲ, ದಕ್ಷಿಣ ಕನ್ನಡದಲ್ಲಿ ಹೊಸ ನಿಯಮ ಜಾರಿ, ಯಾಕಿದು?