ಮೈಸೂರು: ಕೆ.ಆರ್.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ವರದಕ್ಷಿಣೆ (Dowry Case) ಕಿರುಕುಳಕ್ಕೆ ಗೃಹಿಣಿಯೊಬ್ಬರು ಬಲಿಯಾಗಿದ್ದಾರೆ. ಪತಿಯೇ ಆಕೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಜೀವಭಯದಿಂದ ಆಕೆ ಆ ಸಂದರ್ಭದಲ್ಲಿ ಪತಿಯನ್ನೇ ಅಪ್ಪಿಕೊಂಡಿದ್ದರಿಂದ ಆತ ಸಹ ಭಾಗಶಃ ಸುಟ್ಟು ಆಸ್ಪತ್ರೆ ಸೇರಿದ್ದರೆ, ಪತ್ನಿ ಜೀವ ಬಿಟ್ಟಿದ್ದಾಳೆ.
ರಾಜೇಶ್ವರಿ (28) ಮೃತ ಗೃಹಿಣಿ ದುರ್ದೈವಿ. ಹರದನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಅವಘಡ ಸಂಭವಿಸಿದ್ದು, ಗಾಯಗೊಂಡಿರುವ ಪತಿ ಹರೀಶ್ ಪರಿಸ್ಥಿತಿ ಗಂಭೀರವಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಪ್ರಕರಣ?
ಹರದನಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಪತ್ನಿ ಜತೆ ಗಲಾಟೆ ಮಾಡಿದ್ದ ಹರೀಶ್, ತಾಳ್ಮೆ ಕಳೆದುಕೊಂಡು ಆಕೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಈ ವೇಳೆ ಕಿರುಚಾಟವನ್ನು ಕೇಳಿ ಪಕ್ಕದ ಮನೆಯವರು ಓಡಿ ಬಂದು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಇಬ್ಬರಿಗೂ ಸಾಕಷ್ಟು ಸುಟ್ಟಗಾಯಗಳಾಗಿದ್ದವು. ರಾಜೇಶ್ವರಿ ಮೃತಪಟ್ಟಿದ್ದರೆ, ಹರೀಶ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಆತನಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವರದಕ್ಷಿಣೆ ಸಂಬಂಧ ತಮ್ಮ ಮಗಲನ್ನು ಕೊಲೆ ಮಾಡಲಾಗಿದೆ ಎಂದು ರಾಜೇಶ್ವರಿ ತಂದೆ ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆಯೂ ತಮ್ಮ ಮಗಳಿಗೆ ಅಳಿಯ, ಅವನ ತಂದೆ- ತಾಯಿಯಿಂದ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಆಗಲೂ ಸಹ ಪೊಲೀಸರಿಗೆ ದೂರು ನೀಡಿದ್ದೆ. ಹಲವು ಬಾರಿ ನ್ಯಾಯ ಪಂಚಾಯ್ತಿ ಕೂಡ ಮಾಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Dowry Harassment | ಆನೇಕಲ್‌ನಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು; ವರದಕ್ಷಿಣೆ ಕಿರುಕುಳದ ಆರೋಪ