ಆನೇಕಲ್: ಇಲ್ಲಿನ ಜಿಗಣಿ ಸಮೀಪದ ಕೋನಸಂದ್ರದ ಬಿಎಸ್ಆರ್ ಬಡಾವಣೆಯ ಮನೆಯಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಕನಕಪುರ ಮೂಲದ ಚೈತ್ರ ಎಂದು ತಿಳಿದು ಬಂದಿದ್ದು, ವರದಕ್ಷಿಣೆ ಕಿರುಕುಳದ (Dowry Harassment) ಆರೋಪ ಕೇಳಿ ಬಂದಿದೆ.
ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚೈತ್ರ ಕಳೆದ ಎರಡು ವರ್ಷಗಳ ಹಿಂದೆ ಗೋವಿಂದ ರಾಜು ಎಂಬುವವರ ಜತೆ ವಿವಾಹವಾಗಿದ್ದರು. ಗಂಡನ ಮನೆಯವರಿಂದ ನಿರಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸಾವಿಗೀಡಾಗಿದ್ದಾರೆಂದು ಚೈತ್ರ ಪೋಷಕರು ಆರೋಪಿಸಿದ್ದು, ಕೋವಿಡ್ ಸಮಯದಲ್ಲಿ ಸಾಲಸೋಲ ಮಾಡಿ ಮದುವೆ ಮಾಡಿಕೊಟ್ಟಿದ್ದೆವು. ಎರಡು ಮೂರು ಬಾರಿ ಕಿರುಕುಳ ನೀಡಿದ್ದರಿಂದ ಬೇಸತ್ತು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದೆವು. ಆಗೆಲ್ಲ ಪೊಲೀಸರು ಸಂಧಾನ ಮಾಡಿ ವಾಪಸ್ ಕಳಿಸಿದ್ದರು ಎಂದು ಹೇಳಿದ್ದಾರೆ.
ಈಗ ಹಣ ತರಲು ಚಿತ್ರಹಿಂಸೆ ಕೊಟ್ಟಿರುವ ಗಂಡನ ಮನೆಯವರು ಆಕೆಯನ್ನು ಥಳಿಸಿ ನೇಣು ಹಾಕಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ. ಗೋವಿಂದ ರಾಜುವಿನ ಚಿಕ್ಕಪ್ಪ ಒಬ್ಬರು ಪೊಲೀಸ್ ಇಲಾಖೆಯಲ್ಲಿದ್ದು ಅವರ ಬೆಂಬಲದಿಂದಲ್ಲೇ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೃಹಿಣಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ದೂರು ದಾಖಲಾಗಿದೆ.
ಇದನ್ನೂ ಓದಿ | ಮದುವೆಯಾಗಿ ಮೂರು ತಿಂಗಳಿಗೆ ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಆರೋಪ