ಮಂಡ್ಯ: ವರದಕ್ಷಿಣೆ ಕಿರುಕುಳದಿಂದ ನೊಂದ ಮಹಿಳೆಯೊಬ್ಬರು ತಮ್ಮ ೯ ತಿಂಗಳ ಮಗುವಿನ ಜತೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದ ದಾರುಣ ವಿದ್ಯಮಾನ ಇದು.
ಬಿಂದು ಎಂಬ ೨೫ ವರ್ಷದ ಗೃಹಿಣಿ ಮೊದಲು ಮಗುವನ್ನು ಫ್ಯಾನ್‌ಗೆ ನೇತು ಹಾಕಿ ಬಳಿಕ ತಾನೂ ಅದೇ ಫ್ಯಾನ್‌ಗೆ ಕೊರಳೊಡ್ಡಿದ್ದಾರೆ. ಬಿಂದು ಅವರು ಜಿಪಂ ಮಾಜಿ ಸದಸ್ಯೆ ಸುನಂದ ಮತ್ತು ದೊರೆಸ್ವಾಮಿ ಪುತ್ರಿ. ಇವರು ಐದು ವರ್ಷದ ಹಿಂದೆ ಮನೆಯವರ ವಿರೋಧದ ನಡುವೆಯೂ ನವೀನ್ ಎಂಬಾತನನ್ನು ಮದುವೆಯಾಗಿದ್ದರು.
ಡೆತ್ ನೋಟ್‌ನಲ್ಲಿ ದಯನೀಯ ಕಥೆ
ಸಾವಿಗೆ ಮೊದಲು ಡೆತ್ ನೋಟ್ ಬರೆದಿಟ್ಟಿರುವ ಬಿಂದು ಹಣದ ವಿಚಾರವಾಗಿ ಪದೇಪದೆ ಕಿರುಕುಳ ಕೊಡುತ್ತಿದ್ದುದರಿಂದ ಬೇಸತ್ತು ಆತ್ಮಹತ್ಯೆ ಹಾದಿ ಹಿಡಿದಿದ್ದಾಗಿ ಹೇಳಿದ್ದಾರೆ. ತನ್ನ ಸಾವಿಗೆ ಗಂಡ ನವೀನ್, ಅತ್ತೆ ನಾಗಮ್ಮ, ನಾದಿನಿಯರಾದ ನಂದಿನಿ, ನಯನ ಕಾರಣವೆಂದು ಅವರು ಆಪಾದಿಸಿದ್ದಾರೆ. ಇದರಲ್ಲಿ ನವೀನ್‌ನ ಪ್ರೇಯಸಿ ಮಮತಾ ಕೂಡಾ ಕಿರುಕುಳ ನೀಡಿದ್ದಾಳೆ ಎಂದು ಆಪಾದಿಸಲಾಗಿದೆ.
ಐದು ವರ್ಷದ ಪ್ರೀತಿಗೆ ಈ ರೀತಿ ಕೊನೆ
ನಾಗಮಂಗಲ ಬಿಂದು ಕುಂಬಾರ ಜಾತಿಯವರು. ಆಕೆ ಐದು ವರ್ಷದ ಹಿಂದೆ ಕುಂಬಾರ ಶೆಟ್ಟಿ ಜಾತಿಗೆ ಸೇರಿದ ನವೀನ್‌ನನ್ನು ಪ್ರೀತಿಸಿದ್ದಳು. ಆದರೆ, ಮನೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಅವರಿಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದರು. ಬಿಂದುವಿನ ಮನೆಯವರು ಆಕೆಗಾಗಿ ಪುತ್ತೂರು, ಸುಳ್ಯ, ಸೇರಿದಂತೆ ಹಲವು ಕಡೆಗಳಲ್ಲಿ ಹುಡುಕಾಡಿದ್ದಾರೆ. ಆದರೆ, ಆಕೆ ಇವರು ಹೋದಾಗಲೆಲ್ಲ ಲೊಕೇಶನ್ ಬದಲಾಯಿಸುತ್ತಿದ್ದಳು. ಕೊನೆಗೆ ಅವರಿಬ್ಬರು ಚನ್ನಪಟ್ಟಣದಲ್ಲಿ ಸಿಕ್ಕಿದ್ದರು. ಆದರೆ, ಅಷ್ಟು ಹೊತ್ತಿಗೆ ಮದುವೆ ನಡೆದು ಹೋಗಿತ್ತು. ಬಳಿಕ ಅವರಿಬ್ಬರು ಚೆನ್ನಾಗಿಯೇ ಇದ್ದರು. ಈ ನಡುವೆ, ಬಿಂದು ಮತ್ತೆ ತಾಯಿ ಮನೆಗೆ ಬಂದು ಡಿಗ್ರಿ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಎರಡು ವರ್ಷದ ಹಿಂದೆ ಮತ್ತು ಗಂಡನ ಮನೆಗೆ ಹೋದ ಬಿಂದುವಿಗೆ ಕಿರುಕುಳ ಎದುರಾಗಿದೆ. ಅಲ್ಲಿ ಆಕೆಯ ಅತ್ತೆ ಮತ್ತು ಇತರರು ʻನೀನು ಕದ್ದು ಬಂದವಳು. ದುಡ್ಡೂ ತಂದಿಲ್ಲ. ಈಗ ತಾ.. ನಿನ್ನ ಗಂಡನ ತಂಗಿಯರಿಗೆ ಮದುವೆ ಮಾಡಿಸಬೇಕುʼ ಎಂದು ಒತ್ತಡ ಹೇರುತ್ತಿದ್ದರು- ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಈ ನಡುವೆ, ಸೋಮವಾರ ಗಂಡ-ಹೆಂಡತಿ ಮಧ್ಯೆ ಆಧಾರ್ ಕಾರ್ಡ್‌ಗೆ ಸಂಬಂಧಿ ಏನೋ ಮಾತುಕತೆ ನಡೆದಿದೆ. ಆಗ ಉಳಿದ ಸಂಗತಿಗಳೆಲ್ಲ ಚರ್ಚೆಗೆ ಬಂದು ಅಂತಿಮವಾಗಿ ಬಿಂದು ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಅವರ ಆರೋಪ.
ಘಟನೆ ಸಂಬಂಧ ಮೃತಳ ತಂದೆ ದೊರೆಸ್ವಾಮಿ ಅವರು ನಾಗಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಿನಾರಾಯಣ ಪ್ರಸಾದ್ ಭೇಟಿ ನೀಡಿದ್ದಾರೆ.