ಶಿರಹಟ್ಟಿ: ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದಲ್ಲಿ ಕೊನೆಗೂ ಡಾ.ಚಂದ್ರು ಲಮಾಣಿ ಅವರಿಗೆ ಬಿ ಫಾರಂ ಸಿಕ್ಕಿದೆ. ಸರ್ಕಾರಿ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿದರೂ, ಅವರ ರಾಜೀನಾಮೆ ಅಂಗೀಕಾರವಾಗದ ಕಾರಣ ಚಂದ್ರು ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಆದರೆ, ಷರತ್ತುಬದ್ಧವಾಗಿ ಡಾ.ಚಂದ್ರು ಅವರಿಗೆ ರಾಜೀನಾಮೆ ಅಂಗೀಕಾರದ ಪತ್ರ ಸಿಕ್ಕಿದ್ದು, ಹಾಗಾಗಿ, ಅವರು ಬಿ ಫಾರಂ ಪಡೆದಿದ್ದಾರೆ. ಈಗ ಅವರು ನಾಮಪತ್ರ ಸಲ್ಲಿಸಬಹುದಾಗಿದೆ. ಲೋಕಾಯುಕ್ತದಲ್ಲಿ ಅವರ ವಿರುದ್ಧ ಕೇಸ್ ದಾಖಲಾದ ಕಾರಣ ರಾಜೀನಾಮೆ ಅಂಗೀಕಾರವಾಗಿರಲಿಲ್ಲ.
ಷರತ್ತುಗಳು
1) ಲೋಕಾಯುಕ್ತ ವಿಚಾರಣೆಯಲ್ಲಿ ಹೊರಬರುವ ವರದಿ ಮೇರೆಗೆ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಬದ್ಧವಾಗಿರಬೇಕು..
2) ಸೇವಾವಧಿಯಲ್ಲಿ ಎಸಗಿರಬಹುದಾದ ಕರ್ತವ್ಯಲೋಪ ಕಂಡುಬಂದಲ್ಲಿ ಮುಂದೆ ಕಾನೂನು ಕ್ರಮಕ್ಕೆ ಬದ್ಧರಾಗಿರಬೇಕು
3) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದಲ್ಲಿ ಅದನ್ನ ಮುಂದುವರೆಸಲು ಬದ್ಧಗೊಳಿಸಿರುವುದು
4) ಸರ್ಕಾರಕ್ಕೆ ಬರಬೇಕಾದ ಬೇಬಾಕಿಗಳೇನಾದರೂ ಇದ್ದಲ್ಲಿ ಕಾನೂನು ರೀತಿ ವಸೂಲಿ ಮಾಡುವ ಕ್ರಮಕ್ಕೆ ಬದ್ಧಗೊಳಿಸಿದೆ..
ರಾಮಪ್ಪ ಲಮಾಣಿ ರಾಜೀನಾಮೆ ಸಾಧ್ಯತೆ
ಶಿರಸಿ: ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಬಿಜೆಪಿ ಹಾಲಿ ಶಾಸಕ ರಾಮಪ್ಪ ಲಮಾಣಿ ಅವರು ಏ.20ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಗುರುವಾರ ಬೆಳಗ್ಗೆ ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಶಿರಹಟ್ಟಿಯಲ್ಲಿ ಹಾಲಿ ಶಾಸಕ ರಾಮಪ್ಪ ಲಮಾಣಿ ಬದಲಿಗೆ ಡಾ.ಚಂದ್ರು ಲಮಾಣಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಮಪ್ಪ ಲಮಾಣಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇನ್ನು ಬಿಜೆಪಿಯಿಂದ ಟಿಕೆಟ್ ಸಿಕ್ಕರೂ ಡಾ.ಚಂದ್ರು ಲಮಾಣಿ ಅವರು ಬಿ ಫಾರಂಗಾಗಿ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಚನ್ನಬಸಪ್ಪ, ಮಾನ್ವಿಯಲ್ಲಿ ಬಿ.ವಿ.ನಾಯಕ್‌ಗೆ ಬಿಜೆಪಿ ಟಿಕೆಟ್, ಈಶ್ವರಪ್ಪ ಪುತ್ರನಿಗೆ ನಿರಾಸೆ
ಸರ್ಕಾರಿ ವೈದ್ಯ ಹುದ್ದೆಗೆ ಅವರು ರಾಜೀನಾಮೆ ನೀಡಿದರೂ, ಅಂಗೀಕಾರವಾಗದ ಕಾರಣ ಚಂದ್ರು ಲಮಾಣಿ ಅವರಿಗೆ ಸಂಕಷ್ಟ ಎದುರಾಗಿತ್ತು. ಆದರೆ ಏ. 19ರಂದು ಆರೋಗ್ಯ ಇಲಾಖೆ ರಾಜೀನಾಮೆಯನ್ನು ಅಂಗೀಕರಿಸಿರುವುದರಿಂದ ಅವರು ನಿರಾಳರಾಗಿದ್ದಾರೆ. ಇವರು ರಾಜಕೀಯ ಸ್ಪರ್ಧೆ ಹಾಗೂ ಚುನಾವಣೆಗೆ ಸ್ಪರ್ಧಿಸಲು ಸರ್ಕಾರಿ ವೈದ್ಯ ಹುದ್ದೆ ರಾಜೀನಾಮೆ ನೀಡಿದ್ದರು.