ಬೆಂಗಳೂರು: ರಾಜ್ಯದ ಹಾಗೂ ದೇಶದ ಪ್ರತಿಷ್ಠಿತ ಹೃದ್ರೋಗ ಸಂಸ್ಥೆಗಳಲ್ಲೊಂದಾದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (Jayadeva Hospital) ನಿರ್ದೇಶಕರಾಗಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಮತ್ತೊಮ್ಮೆ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ಅತ್ಯಂತ ಉತ್ಕೃಷ್ಟ ಮಟ್ಟದ ಸೇವೆಯನ್ನು ನೀಡುತ್ತಿರುವುದಕ್ಕೆ ಜಯದೇವ ಸಂಸ್ಥೆ ಉದಾಹರಣೆ. 2007ರಲ್ಲಿ ಸಂಸ್ಥೆಗೆ ನಿರ್ದೇಶಕರಾಗಿ ಆಗಮಿಸಿದ ಡಾ. ಸಿ.ಎನ್. ಮಂಜುನಾಥ್ ಅವರ ಕೊಡುಗೆ ಬಹಳಷ್ಟಿದೆ. 2022ರಲ್ಲೇ ಮಂಜುನಾಥ್ ಅವರ ಅವಧಿ ಮುಕ್ತಾಯವಾಗಿತ್ತು.
ಇದನ್ನೂ ಓದಿ: Blood pressure : 17- 40ರ ವಯಸ್ಸಿಗೇ High Bp! ಡಾ. ಮಂಜುನಾಥ್ ಪರಿಹಾರ ಸೂತ್ರ ಹೀಗಿದೆ…
ಆದರೆ ಆ ಸಮಯದಲ್ಲಿ ಸಂಸ್ಥೆಯ ಸಿಬ್ಬಂದಿಯಷ್ಟೆ ಅಲ್ಲದೆ ರಾಜ್ಯದ ಸಾಮಾನ್ಯ ನಾಗರಿಕರೂ ಮಂಜುನಾಥ್ ಅವರ ಪರವಾಗಿ ನಿಂತಿದ್ದರು. ಇನ್ನೂ ಸಾಕಷ್ಟು ಕಡೆಗಳಲ್ಲಿ ಜಯದೇವ ಸಂಸ್ಥೆಯನ್ನು ಸ್ಥಾಪಿಸಬೇಕಿರುವ ಕಾರಣ ಅವರನ್ನೇ ಮುಂದುವರಿಸಬೇಕು ಎಂಬ ಒತ್ತಾಯವಿತ್ತು. ಈ ಕಾರಣಕ್ಕೆ ಒಂದು ವರ್ಷದ ಅವಧಿಗೆ ಮಂಜುನಾಥ್ ಅವರನ್ನು ಮುಂದುವರಿಸುವ ನಿರ್ಧಾರವನ್ನು ಅಂದಿನ ಬಿಜೆಪಿ ಸರ್ಕಾರ ಕೈಗೊಂಡಿತ್ತು.
ಜಯದೇವ ಸಂಸ್ಥೆಯ ಸಿಬ್ಬಂದಿಗೆ ಜತೆಗೆ ಸಿಎಂ ಸಿದ್ದರಾಮಯ್ಯ ಸೋಮವಾರ ಸಭೆ ನಡೆಸಿದರು. ಜಯದೇವ ಆಸ್ಪತ್ರೆಯ ಅಭಿವೃದ್ಧಿ,ನಿರ್ವಹಣೆ ಬಗ್ಗೆ ಸಿಎಂ ಸಭೆಯಲ್ಲಿ ಭಾಗಿಯಾದ ಸಿದ್ದರಾಮಯ್ಯ, ಮಂಜುನಾಥ್ ಅವರ ಸೇವಾವಧಿ ಮುಂದುವರಿಸುವ ಕುರಿತೂ ಚರ್ಚಿಸಿದರು. ಇನ್ನೂ ಆರು ತಿಂಗಳು ನಿರ್ದೇಶಕರಾಗಿ ಡಾ. ಸಿ.ಎನ್. ಮಂಜುನಾಥ್ ಅವರನ್ನೇ ಮುಂದುವರಿಸಲು ಸರ್ಕಾರ ನಿರ್ಧಾರ ಮಾಡಿದೆ.