ನವ ದೆಹಲಿ: ರಾಜ್ಯ ಸಭೆ ಸದಸ್ಯರಾಗಿ ಇತ್ತೀಚೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಯಲ್ಲಿ ಗುರುವಾರ ಕನ್ನಡದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.
ರಾಜ್ಯಸಭಾ ಸಭಾಪತಿ ಹಾಗೂ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಉಪಸ್ಥಿತಿಯಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಎಂಬ ಹೆಸರಿನ ನಾನು… ಎಂದು ಆರಂಭಿಸಿದ ಅವರು, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಎಂದು ಪೂರ್ಣಗೊಳಿಸಿದರು.
ಪ್ರತಿಜ್ಞೆ ಸ್ವೀಕರಿಸಿದ ವೀರೇಂದ್ರ ಹೆಗ್ಗಡೆ ಅವರಿಗೆ ‘ಶುಭಾಶಯಗಳುʼ ಎಂದು ವೆಂಕಯ್ಯ ನಾಯ್ಡು ಕನ್ನಡದಲ್ಲಿ ತಿಳಿಸಿದರು. ಕುಳಿತು ಸಹಿ ಮಾಡುವಂತೆ ಕೋರಿದರು.
ಕೇರಳದಿಂದ ನಾಮನಿರ್ದೇಶನಗೊಂಡಿರುವ ಪ್ರಸಿದ್ಧ ಅಥ್ಲೀಟ್ ಪಿ.ಟಿ. ಉಷಾ ಅವರು ಈಶ್ವರನ ಹೆಸರಿನಲ್ಲಿ, ಹಿಂದಿಯಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.
ಆಂಧ್ರಪ್ರದೇಶದಿಂದ ನಾಮನಿರ್ದೇಶನಗೊಂಡಿರುವ ವಿಜಯೇಂದ್ರ ಪ್ರಸಾದ್ ಅವರು ದೇವರ ಹೆಸರಿನಲ್ಲಿ, ಇಂಗ್ಲಿಷ್‌ನಲ್ಲಿ ಎರಡು ದಿನದ ಹಿಂದೆ ಪ್ರತಿಜ್ಞೆ ಸ್ವೀಕರಿಸಿದ್ದರು.
ತಮಿಳುನಾಡಿನಿಂದ ನಾಮನಿರ್ದೇಶನಗೊಂಡಿರುವ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಇನ್ನೂ ಪ್ರತಿಜ್ಞೆ ಸ್ವೀಕರಿಸಬೇಕಿದೆ.
ಇದನ್ನೂ ಓದಿ | ರಾಜ್ಯಸಭೆಗೆ ನಾಮನಿರ್ದೇಶನ; ಡಾ. ವೀರೇಂದ್ರ ಹೆಗ್ಗಡೆಯವರ ಸಾರ್ಥಕ ಸೇವೆಗೆ ಸಂದ ಗೌರವ