ಬೆಂಗಳೂರು: ನಾ ನಿನ್ನ ಬಿಡಲಾರೆ ಎಂಬಂತೆ ಕೊರೊನಾ ವೈರಸ್ ಬಿಟ್ಟು ಬಿಡದೇ ಜನರನ್ನ ಕಾಡುತ್ತಿದೆ. ಮೊದಲ ಹಾಗೂ ಎರಡನೇ ಅಲೆಯ ತೀವ್ರತೆ ಸಾಕಷ್ಟು ಸಾವು ನೋವಿಗೆ ಕಾರಣವಾಗಿತ್ತು. ಇದೀಗ ಮೂರನೇ ಅಲೆ ತೀವ್ರತೆ ಕಡಿಮೆ ಆಯಿತು ಎನ್ನುವಾಗಲೇ ನಾಲ್ಕನೇ ಅಲೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ | Covid news | ಹೆಚ್ಚಾಗುತ್ತಿದೆ ಕೊರೊನಾ, ಮಕ್ಕಳಿಗೆ ಕೋವಿಡ್ ಬಂತೆಂದು ಬೆಂಗಳೂರಿನ 2 ಶಾಲೆಗಳಿಗೆ ರಜೆ
ಈ ಕುರಿತು ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್, ಕೊರೊನಾ ನಾಲ್ಕನೇ ಅಲೆಗೆ ಭಯ ಪಡುವ ಅಗತ್ಯವಿಲ್ಲ. ಈಗಾಗಲೇ ಐಐಟಿ ಕಾನ್ಪುರದ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ್ದು, ಅಕ್ಟೋಬರ್‌ನಲ್ಲಿ ಕೊರೊನಾ ಉತ್ತುಂಗಕ್ಕೆ ಹೋಗುತ್ತದೆ ಎಂದಿದ್ದಾರೆ. ಜೂನ್ ಮೂರನೇ ವಾರದಿಂದ ಅಕ್ಟೋಬರ್‌ವರೆಗೂ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿಂದೆ ಕೂಡ ಐಐಟಿ ಸೋಂಕಿನ ತೀವ್ರತೆ ಕುರಿತು ವರದಿ ನೀಡಿತ್ತು. ಸದ್ಯ, ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅದಕ್ಕೆ ತಕ್ಕಂತೆ ಪೂರಕವಾಗಿ ಸಿದ್ದತೆ ಮಾಡಿಕೊಂಡಿದ್ದೇವೆ. ಈಗ ಬರುತ್ತಿರುವ ಕೋವಿಡ್ ಪ್ರಭೇದ ಸೌಮ್ಯ ಲಕ್ಷಣವಾಗಿದ್ದು, ಜನಸಾಮಾನ್ಯರು ಯಾವುದೇ ಆತಂಕ, ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಶಾಲೆಗೆ ಬರುವ ಮಕ್ಕಳಿಗೆ ಸ್ಕ್ರೀನಿಂಗ್:
ಶಾಲೆಗಳಲ್ಲಿ ಕೋವಿಡ್ ಹೆಚ್ಚಳವಾಗಿರುವ ವಿಚಾರದ ಬಗ್ಗೆಯು ಮಾತನಾಡಿರುವ ಸಚಿವರು, ಒಂದೆರೆಡು ಶಾಲೆಗಳಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಆ ಶಾಲಾ ಮಕ್ಕಳಿಗೆ ರಜೆ ಕೊಟ್ಟಿದ್ದಾರೆ. ಅದು ಒಂದೊ ಎರಡೋ ಶಾಲೆಗಳಲ್ಲಿ ಅಷ್ಟೇ ಸೋಂಕು ಕಾಣಿಸಿಕೊಂಡಿದೆ. ಈಗಾಗಲೇ ಸ್ಪಷ್ಟವಾದ ನಿಯಮಾವಳಿ ರೂಪಿಸಿದ್ದೇವೆ. ಶಾಲೆಗೆ ವಿದ್ಯಾರ್ಥಿಗಳು ಬರುವಾಗ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಹಾಕಿರುವುದನ್ನ ಪರಿಶೀಲಿಸಲಾಗುತ್ತದೆ. ಶಾಲೆಗಳಲ್ಲಿ ಕೋವಿಡ್‌ನ ಎಲ್ಲಾ ನಿಯಮ ಪಾಲನೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಕೈ ನಾಯಕರ ರಾಜಭವನ ಚಲೋಗೆ ಕೋವಿಡ್ ಉಲ್ಲಂಘನೆ ಅಸ್ತ್ರ ಪ್ರಯೋಗ:
ಇಂದು ಕಾಂಗ್ರೆಸ್ ಮುಖಂಡರ ನಡೆಸುತ್ತಿರುವ ರಾಜಭವನ ಚಲೋ ಕುರಿತು ಪ್ರತಿಕ್ರಿಯಿಸಿ, ಈ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಆದರೆ ಅವರೇ ನೈತಿಕ ಹೊಣೆ ಹೊರಬೇಕು. ಕಾಂಗ್ರೇಸಿಗರು ಪ್ರತಿಭಟನೆ ಮಾಡುವುದಾದರೆ ಫ್ರೀಡಂ ಪಾರ್ಕ್‌ನಲ್ಲಿ ಮಾಡಲಿ. ಅದು ಬಿಟ್ಟು ಜನರನ್ನು ಸೇರಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಇವತ್ತಿನ ಹೋರಾಟಕ್ಕೆ ಕೋವಿಡ್ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತಾನಾಡುವುದಾಗಿ ಸಚಿವರು ಹೇಳಿದರು.
ಇದನ್ನೂ ಓದಿ | ರಾಜ್ಯದಲ್ಲಿ ಏರುಗತಿಯಲ್ಲಿ ಕೋವಿಡ್: ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದ ಸುಧಾಕರ್