ಮೈಸೂರು: ಕಾವೇರಿ ನದಿಯ (Cauvery river) ಸೌಂದರ್ಯ ಸವಿಯಲ್ಲು ಹೋಗಿದ್ದ ಬಾಲಕಿಯೊಬ್ಬಳು ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾಳೆ (Drowned in river). ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದ ಬಳಿ ಘಟನೆಯಲ್ಲಿ ಮೃತಪಟ್ಟ ಬಾಲಕಿಯನ್ನು 13 ವರ್ಷದ ಸ್ಫೂರ್ತಿ (Girl drowned in cauvery river) ಎಂದು ಗುರುತಿಸಲಾಗಿದೆ.
ಗಂಧನಹಳ್ಳಿ ಗ್ರಾಮದ ಲೋಕೇಶ್ ಎಂಬುವರ ಪುತ್ರಿಯಾಗಿರುವ ಸ್ಫೂರ್ತಿ ಭಾನುವಾರ ರಜಾ ದಿನವಾಗಿದ್ದ ಹಿನ್ನೆಲೆಯಲ್ಲಿ ಹೆತ್ತವರ ಜತೆ ಪ್ರವಾಸಕ್ಕೆ ಹೋಗಿದ್ದಳು. ಅವರೆಲ್ಲರೂ ಕಾವೇರಿ ನದಿ ತೀರದಲ್ಲೇ ನಿಂತು ಸೌಂದರ್ಯ ಸವಿದಿದ್ದರು. ತಾವು ಮನೆಯಿಂದ ಕಟ್ಟಿಕೊಂಡು ಬಂದಿದ್ದ ಬುತ್ತಿಯನ್ನು ಅಲ್ಲೇ ಕೂತು ತಿಂದಿದ್ದರು.
ಈ ನಡುವೆ ಬಾಕಲಿ ಸ್ಫೂರ್ತಿ ಉಪಾಹಾರ ಸೇವಿಸಿದ ಬಳಿಕ ನೀರು ಕುಡಿಯಲೆಂದು ಕಾವೇರಿ ನದಿಯತ್ತ ಹೋಗಿದ್ದಾಳೆ. ಅಲ್ಲಿ ಆಕೆ ನೀರು ಎತ್ತಿ ಕುಡಿಯುತ್ತಿದ್ದಂತೆಯೇ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಬಿದ್ದ ಭಯಕ್ಕೆ ಆಕೆ ಅಲ್ಲೇ ನೀರಿನಲ್ಲಿ ಮುಳುಗಿದ್ದಾಳೆ. ಮಗಳ ಆಕ್ರಂದನ ಕೇಳಿ ಹೆತ್ತವರು ನದಿ ದಡಕ್ಕೆ ಓಡಿ ಹೋದರು. ಆದರೆ, ಅಷ್ಟು ಹೊತ್ತಿಗೆ ಆಕೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಳು.
ಕೂಡಲೇ ಅಕ್ಕಪಕ್ಕದಲ್ಲಿದ್ದವರು ಹುಡುಕಿದರೂ ಆಕೆಯನ್ನು ಜೀವಂತವಾಗಿ ಇಲ್ಲವೇ ಶವವಾಗಿ ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ಬಾಲಕಿಗಾಗಿ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಯುತ್ತಿದೆ.
ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸ್ಟೆಲ್ ಊಟ ಸೇವಿಸಿ ಮಕ್ಕಳು ಅಸ್ವಸ್ಥ
ಚಾಮರಾಜನಗರ: ಚಾಮರಾಜ ನಗರ ಜಿಲ್ಲೆಯ ಬೇಗೂರು ಮೊರಾರ್ಜಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲು ಉಪಾಹಾರ ಸೇವಿಸಿದ ಬಳಿ ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಹಾಸ್ಟೆಲ್‌ನಲ್ಲಿ ಭಾನುವಾರ ರಾತ್ರಿ ಚಿಕನ್ ಸಾಂಬಾರ್ ಮಾಡಲಾಗಿತ್ತು. ಮಕ್ಕಳು ಖುಷಿಯಿಂದ ಊಟ ಮಾಡಿದ್ದರು. ಆದರೆ, ಊಟ ಮಾಡಿದವರಲ್ಲಿ ಕೆಲವರು ರಾತ್ರಿಯೇ ಅಸ್ವಸ್ಥರಾದರು. ವಾಂತಿ ಮಾಡಿಕೊಳ್ಳಲು ಆರಂಭಿಸಿದ ಅವರನ್ನು ಕೂಡಲೇ ಬೇಗೂರು ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ.
ಒಬ್ಬರಾದ ಬಳಿಕ ಒಬ್ಬರಂತೆ ಸುಮಾರು 15 ಮಕ್ಕಳು ಅಸ್ವಸ್ಥರಾಗಿದ್ದು, ಅವರ ದೇಹಸ್ಥಿತಿ ಈಗ ಸುಧಾರಿಸಿದೆ ಎಂದು ತಿಳಿದುಬಂದಿದೆ.
ಒಂದೇ ವಾರದ ಅವಧಿಯಲ್ಲಿ ಮೂರನೇ ಘಟನೆ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಕೆಲವು ದಿನಗಳ ಹಿಂದೆ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದರು. ಮಧ್ಯಾಹ್ನ ಬಿಸಿಯೂಟಕ್ಕೆ ಇಲ್ಲಿನ ಸಿಬ್ಬಂದಿ ಉಪ್ಪಿಟ್ಟು ಮಾಡಿದ್ದರು. ಅದನ್ನು ಎಲ್ಲ ಮಕ್ಕಳಿಗೆ ಬಡಿಸಲಾಗಿತ್ತು. ಆದರೆ ಉಪ್ಪಿಟ್ಟಿನಲ್ಲಿ ಹಲ್ಲಿ ಬಿದ್ದಿತ್ತು. ಉಪ್ಪಿಟ್ಟು ತಿಂದ ಹಲವು ಮಕ್ಕಳಿಗೆ ಹೊಟ್ಟೆ ತೊಳೆಸಲು ಆರಂಭವಾಗಿದೆ. ವಿದ್ಯಾರ್ಥಿನಿಯರಲ್ಲಿ ಹೊಟ್ಟೆ ನೋವು ಶುರುವಾಗಿ ವಾಂತಿ ಭೇದಿಯಾಗಿದೆ. ಹೀಗಾಗಿ ಕೂಡಲೇ ಅಸ್ವಸ್ಥಗೊಂಡಿರುವ ವಿದ್ಯಾರ್ಥಿನಿಯರನ್ನು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು.
ಕಲಬುರಗಿಯ ಚಿತ್ತಾಪುರದಲ್ಲೂ ಹಲ್ಲಿ ಬಿದ್ದು ಮಕ್ಕಳು ಅಸ್ವಸ್ಥ
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ವಿದ್ಯಾರ್ಥಿಗಳಿಗಾಗಿ ಮಾಡಿರುವ ಊಟದಲ್ಲಿ ಹಲ್ಲಿ (Lizard) ಬಿದ್ದ ಪರಿಣಾಮ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಊಟ ಮಾಡಿದ ಶಾಲೆಯ ಸುಮಾರು 13 ವಿದ್ಯಾರ್ಥಿನಿಯರಲ್ಲಿ ವಾಂತಿ ಪ್ರಾರಂಭವಾಗಿ ಅಸ್ವಸ್ಥರಾಗಿದ್ದು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.