ಹಾಸನ: ತಾಲೂಕಿನ ತೇಜೂರು ಗ್ರಾಮದ ಇಬ್ಬರು ವ್ಯಕ್ತಿಗಳಿಗೆ ವ್ಯವಹಾರದ ವಿಷಯದಲ್ಲಿ ತಗಾದೆಯಾಗಿ ಗಂಗೆ ಆಣೆ ಮಾಡಲು ಹೋಗಿದ್ದು, ಇಬ್ಬರೂ ಕಾಲು ಜಾರಿ ನೀರಿಗೆ (Drowned) ಬಿದ್ದು ಮೃತಪಟ್ಟಿದ್ದಾರೆ.
ಚಂದ್ರು (35), ಆನಂದ್ (30) ಮೃತ ವ್ಯಕ್ತಿಗಳು. ತೇಜೂರು ಕೆರೆಯ ಬಳಿ ಅವಘಡ ಸಂಭವಿಸಿದೆ. ಇವರಿಬ್ಬರ ನಡುವೆ ವ್ಯವಹಾರದ ವಿಚಾರವಾಗಿ ಜಗಳ ನಡೆದಿದೆ. ಎಷ್ಟೇ ಮಾತನಾಡಿದರೂ ಬಗೆಹರಿದಿಲ್ಲ. ಪರಸ್ಪರ ಅಪನಂಬಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಇಬ್ಬರೂ ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಆಣೆ ಮಾಡಲು ಮುಂದಾಗಿದ್ದಾರೆ. ಆಣೆ ಮಾಡುವುದಾದರೆ ಎಲ್ಲಿ ಮಾಡುವುದು? ಯಾವ ರೀತಿಯ ಆಣೆ ಮಾಡುವುದು ಎಂಬ ಪ್ರಶ್ನೆ ಬಂದ ಹಿನ್ನೆಲೆಯಲ್ಲಿ ಗಂಗೆ ಆಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಗುರುವಾರ ರಾತ್ರಿ ಇಬ್ಬರೂ ಆಣೆ ಮಾಡಲು ತೇಜೂರು ಕೆರೆ ಬಳಿಗೆ ಹೋಗಿದ್ದಾರೆನ್ನಲಾಗಿದೆ. ಆಗ ಕಾಲು ಜಾರಿ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಬೆಳಗ್ಗೆಯಾದರೂ ಇವರು ಪತ್ತೆ ಇಲ್ಲದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ.
ಸಿಹಿ ತಿಂಡಿ ತಯಾರಿಕೆ ಸಂಬಂಧ ಜಗಳ
ಸಿಹಿ ತಿಂಡಿ ತಯಾರಿಸುವ ಸಂಬಂಧ ಇಬ್ಬರ ನಡುವೆ ಜಗಳಗಳಾಗಿವೆ. ಸಿಹಿ ಖಾದ್ಯ ತಯಾರಿಸುವುದಾಗಿ ದುಡ್ಡು ಪಡೆದು ಹೋಗಿಲ್ಲ ಎಂದು ಹೇಳಲಾಗಿದೆ. ಈ ವಿಚಾರಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ಹಾಗಾಗಿ ಗಂಗೆ ಆಣೆ ಮಾಡಿ ರುಜುವಾತು ಮಾಡಲು ಮುಂದಾದಾಗ ಈ ಅವಘಡ ಸಂಭವಿಸಿದೆ.
ಶವ ಹೊರತೆಗೆದ ಗ್ರಾಮಸ್ಥರು
ಚಂದ್ರು, ಆನಂದ್ ಅವರು ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದಾರೆ. ತಕ್ಷಣ ನೀರಿಗೆ ಧುಮುಕಿ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Drowned | ಕೆರೆಯಲ್ಲಿ ಮುಳುಗಿದ್ದ ತಮ್ಮನ ಸಹಿತ ರಕ್ಷಣೆ ಮಾಡಲು ಹೋದ ಮೂವರು ಅಕ್ಕಂದಿರೂ ನೀರು ಪಾಲು!