Site icon Vistara News

Drugs case: ವಿಚಾರಣೆಗೆ ಕರೆದರೂ ಬಾರದ ನಟ ಸಿದ್ಧಾಂತ್‌ ಕಪೂರ್‌, ಆ. 15ರ ನಂತರ ಬರ್ತಾನಂತೆ!

ಬೆಂಗಳೂರು: ದೇಶಾದ್ಯಂತ ಭಾರಿ ಸುದ್ದಿ ಮಾಡಿದ್ದ ಬೆಂಗಳೂರಿನ ದಿ ಪಾರ್ಕ್ ಹೊಟೇಲ್ ಡ್ರಗ್ಸ್ ಪಾರ್ಟಿ ಕೇಸ್‌ನಲ್ಲಿ ವಿಚಾರಣೆಗೆ ಬರುವಂತೆ ಎರಡು ಬಾರಿ ನೋಟಿಸ್‌ ನೀಡಿದರೂ ನಟ ಸಿದ್ಧಾಂತ್‌ ಕಪೂರ್‌ ಕ್ಯಾರೇ ಅಂದಿಲ್ಲ. ಇದೀಗ ಆಗಸ್ಟ್‌ ೧೫ರ ನಂತರ ಬಿಡುವು ಮಾಡಿಕೊಂಡು ಬರುತ್ತೇನೆ ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

ದೇಶ ಕಂಡ ಉತ್ತಮ ಪೋಷಕ ನಟರಲ್ಲಿ ಒಬ್ಬರಾದ ಶಕ್ತಿ ಕಪೂರ್‌ ಪುತ್ರ ಮತ್ತು ನಟಿ ಶ್ರದ್ಧಾ ಕಪೂರ್‌ ಅವರ ಸಹೋದರ ಸಿದ್ಧಾಂತ್‌ ಕಪೂರ್‌ ಕಳೆದ ಜೂನ್‌ ೧೫ರಂದು ಬೆಂಗಳೂರಿನ ದಿ ಪಾರ್ಕ್‌ ಹೋಟೆಲ್‌ನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್‌ ಸೇವಿಸಿ ಸಿಕ್ಕಿಬಿದ್ದಿದ್ದ. ಆತ ಮುಂಬಯಿಯಲ್ಲಿ ಡ್ರಗ್ಸ್‌ ಪಾರ್ಟಿಯಲ್ಲಿ ಪಾಲ್ಗೊಂಡರೆ ಸಿಕ್ಕಿಬೀಳುತ್ತೇನೆ ಎಂದು ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ವಿಚಾರಣೆಗೆ ಹಾಜರಾಗುವ ಷರತ್ತಿನೊಂದಿಗೆ ಜಾಮೀನು ದೊರೆತಿತ್ತು. ಆದರೆ, ಈಗ ಆತ ತನ್ನ ಆಟ ಶುರು ಮಾಡಿದ್ದಾನೆ. ವಿಚಾರಣೆಗೆ ಹಾಜರಾಗಲು ಹಲಸೂರು ಠಾಣೆ ಪೊಲೀಸರು ನೋಟಿಸ್‌ ನೋಡಿದರೆ ಆತ ಮಾತ್ರ ಈಗ ಬರುತ್ತೇನೆ, ಮತ್ತೆ ಬರುತ್ತೇನೆ ಎನ್ನುತ್ತಿದ್ದಾನೆ. ಹೊಸ ಮಾಹಿತಿಯಂತೆ ಆತ ಆಗಸ್ಟ್‌ ೧೫ರ ನಂತರ ಬರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ತನಗೆ ಬೇರೆ ಕೆಲಸದ ಕಮಿಟ್‌ಮೆಂಟ್‌ಗಳಿವೆ. ಹಾಗಾಗಿ ಆಗಸ್ಟ್‌ ೧೫ ಕಳೆದ ಮೇಲೆ ಬರುತ್ತೇನೆ ಎಂದು ಸಬೂಬು ಹೇಳಿದ್ದಾನಂತೆ. ಆತನಿಗೆ ಪೊಲೀಸರು ಎರಡನೇ ಬಾರಿ ನೋಟಿಸ್‌ ನೀಡಿದ್ದು ಅದಕ್ಕೂ ಆತ ಬೆಲೆ ಕೊಟ್ಟಿಲ್ಲ ಎನ್ನಲಾಗಿದೆ.

ಇನ್ನೂ ತಿಳಿಯದ ಡ್ರಗ್ಸ್‌ ಮೂಲ
ದಿ ಪಾರ್ಕ್‌ ಹೋಟೆಲ್‌ಗೆ ಡ್ರಗ್ಸ್‌ ಒದಗಿಸುತ್ತಿರುವವರು ಯಾರು ಎನ್ನುವುದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಅದಿನ್ನೂ ಬಯಲಾಗಿಲ್ಲ. ಸಿದ್ದಾಂತ್‌ ಕಪೂರ್‌ನನ್ನೂ ಈ ನಿಟ್ಟಿನಲ್ಲಿ ವಿಚಾರಣೆ ನಡೆಸಬೇಕಾಗಿದೆ.

ಪಾರ್ಟಿಯಲ್ಲಿ ಭಾಗವಹಿಸಿದ್ದವರಲ್ಲಿ ಸುಮಾರು ೯೦ ಜನರಿಗೆ ಪೊಲೀಸರು ನೋಟಿಸ್‌ ನೀಡಿದ್ದರು. ಆದರೆ, ಅವರಲ್ಲಿ ಕೇವಲ ೩೦ ಮಂದಿ ಮಾತ್ರ ಉತ್ತರ ನೀಡಿದ್ದಾರೆ. ಉಳಿದವರ ಪೊಲೀಸ್‌ ವಿಚಾರಣೆಗೆ ಕ್ಯಾರೇ ಅಂದಿಲ್ಲ. ಹೀಗಾಗಿ ಉತ್ತರ ಕೊಡದವರ ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಲು ಹಲಸೂರು ಪೊಲೀಸರು ನಿರ್ಧರಿಸಿದ್ದಾರೆ.
ಇಡೀ ದೇಶದಲ್ಲೇ ಸುದ್ದಿಯಾದ ಈ ಘಟನೆಯ ತನಿಖೆಯೇ ಹೀಗಾದರೆ ಬೇರೆ ಕೇಸುಗಳೆಲ್ಲ ಹೇಗೆ ಹಳ್ಳ ಹಿಡಿಯುತ್ತವೆ ಎನ್ನುವುದಕ್ಕೆ ಬೇರೆ ನಿದರ್ಶನ ಬೇಕಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

‌ ಇದನ್ನೂ ಓದಿ| ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್‌ ಪಾರ್ಟಿ, ಬಾಲಿವುಡ್‌ ನಟ ಸಿದ್ಧಾಂತ್‌ ಕಪೂರ್‌ ವಶಕ್ಕೆ

Exit mobile version