ಬೆಂಗಳೂರು: ಆಯುರ್ವೇದಿಕ್ ಡ್ರಗ್ಸ್ ಹೆಸರಿನಲ್ಲಿ ಮಾಫಿಯಾ ಒಂದು ಹುಟ್ಟಿಕೊಂಡಿದ್ದು, ವ್ಯವಸ್ಥಿತವಾಗಿ ದೇಶದ ಮೂಲೆ ಮೂಲೆಯನ್ನು ತಲುಪಿಸುವ ಜಾಲ ಇದೀಗ ಪತ್ತೆಯಾಗಿದೆ. ಈ ಡ್ರಗ್ಸ್ ಮಾರಾಟ ಮಾಡಲು ನಿರುದ್ಯೋಗಿಗಳನ್ನೇ ಟಾರ್ಗೆಟ್ ಮಾಡಲಾಗಿದ್ದು, ಅವರ ಮೂಲಕ ಗಿಫ್ಟ್ ಪ್ಯಾಕ್‌ಗಳನ್ನು ಮಾಡಿ ದಂಧೆಯನ್ನು ನಡೆಸುತ್ತಿದ್ದರು.
ಈಗ ಡ್ರಗ್ಸ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಆಯುರ್ವೇದಿಕ್ ಡ್ರಗ್ ಎಂದು ಡುನ್ಝೊ ಡೆಲಿವರಿ ಮುಖಾಂತರ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎಂಬ ವಿಷಯ ವಿಚಾರಣೆ ವೇಳೆ ತಿಳಿದು ಬಂದಿದೆ.
ಡಾರ್ಕ್‌ವೆಬ್‌ನಲ್ಲಿ (Darkweb) WICKR-ME ಮುಖಾಂತರ ಡ್ರಗ್ ವೆಂಡರ್‌ಗಳು ಸಂಪರ್ಕದಲ್ಲಿರುತ್ತಿದ್ದರು. ಇವರ ಮೂಲಕ ವಿವಿಧ ಬಗೆಯ ಡ್ರಗ್ ಅನ್ನು ಕ್ರಿಪ್ಟೋ (cryoto) ಕರೆನ್ಸಿ ಮೂಲಕ ಮಾದಕ ವಸ್ತುಗಳನ್ನ ಶೇಖರಣೆ ಮಾಡಲಾಗುತ್ತಿತ್ತು. “If you want to earn respect with money and also willing to do anything for it – reach contact me” (ನೀವು ಗೌರವಯುತವಾಗಿ ಹಣ ಗಳಿಸಲು ಬಯಸಿದರೆ, ಮತ್ತದಕ್ಕಾಗಿ ಏನನ್ನಾದರೂ ಮಾಡಲು ಸಿದ್ಧರಿದ್ದರೆ ನನ್ನನ್ನು ಸಂಪರ್ಕಿಸಿ) ಎಂಬ ಈ ಟ್ಯಾಗ್‌ಲೈನ್ ಅನ್ನು “ಲೊಕಾಂಟೋ” ಅಪ್ಲಿಕೇಷನ್‌ನಲ್ಲಿ ಹಾಕಿ ನಿರುದ್ಯೋಗಿಗಳನ್ನು ಸೆಳೆಯುತ್ತಿದ್ದರು. ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂಬ ಕಾರಣಕ್ಕೆ ನಿರುದ್ಯೋಗಿಗಳು ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಆದರೆ, ತಾವು ಡ್ರಗ್ ಪೆಡ್ಲರ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂಬ ಅರಿವು ಅವರಿಗೆ ಇರುವುದಿಲ್ಲ ಎಂದು ಹೇಳಲಾಗಿದೆ. ಅವರಿಂದ ಡ್ರಗ್ ಸರಬರಾಜು ಮಾಡಿಸುವ ಕೆಲಸಗಳನ್ನು ಇವರು ಮಾಡಿಸುತ್ತಿದ್ದರು ಎಂದು ಹೇಳಲಾಗಿದೆ.
ದೇಶದ ವಿವಿಧೆಡೆ ಪಿಜಿ ವ್ಯವಸ್ಥೆ
ನೇಮಕವಾದ ನಿರುದ್ಯೋಗಿಗಳಿಗೆ ದೇಶದ ವಿವಿಧೆಡೆ ಪಿಜಿಗಳ ವ್ಯವಸ್ಥೆಯನ್ನು ಸಹ ಮಾಡಿಸುತ್ತಿದ್ದು, ಆ ಪಿಜಿಗಳಲ್ಲಿ ಡ್ರಗ್ ಶೇಖರಣೆ ಮಾಡಿಸುತ್ತಿದ್ದರು. ನಂತರ ಡ್ರಗ್ ಸೇವನೆ ಮಾಡುವ ವ್ಯಕ್ತಿಗಳನ್ನು ಸಂಪರ್ಕಿಸಿ ಅವರಿಂದ ಪೋನ್ ಪೇ ಮೂಲಕ ಹಣ ಪಡೆದು ಇದೇ ಡೆಲಿವರಿ ಬಾಯ್‌ಗಳಿಂದ ಡ್ರಗ್ ಸರಬರಾಜು ಮಾಡಿಸುತ್ತಿದ್ದರು.
೨ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಈ ರೀತಿ ಕೃತ್ಯಗಳನ್ನು ಎಸಗುತ್ತಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೋಲಿಸಿರು ಬಂಧಿಸಿದ್ದಾರೆ. ಅವರಿಂದ 2 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್, ಎಕ್ಸ್‌ಟೆಸಿ ಪಿಲ್ಸ್ , ಎಲ್‌ಎಸ್‌ಡಿ ಸ್ಟ್ರಿಪ್ಸ್, ಹ್ಯಾಶೀಶ್ ಆಯಿಲ್, ಚರಸ್ ಗಾಂಜಾಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಅವರು ವಹಿವಾಟು ನಡೆಸುತ್ತಿದ್ದ ಅಕೌಂಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ| Drugs case: ನಟ ಸುಶಾಂತ್ ಸಿಂಗ್ ಡ್ರಗ್ಸ್ ವ್ಯಸನಕ್ಕೆ ಕುಮ್ಮಕ್ಕು ನೀಡಿದ್ದೇ ರಿಯಾ ಚಕ್ರವರ್ತಿ ಎಂದ ಎನ್‌ಸಿಬಿ