ಬೆಂಗಳೂರು: ರಾಜ್ಯಾದ್ಯಂತ ಇನ್ನೆರಡು ದಿನ ಒಣ ಹವೆ (Dry Weather) ಇರಲಿದ್ದು, ಬಿಸಿಲಿನ ವಾತಾವರಣ ಹೆಚ್ಚಿರಲಿದೆ. ಅಲ್ಲಲ್ಲಿ ರಾತ್ರಿ ವೇಳೆ ಸ್ವಲ್ಪ ಚಳಿಯ ವಾತಾವರಣವೂ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka weather Forecast) ಹೇಳಿದೆ. ಇನ್ನು ಮಲೆನಾಡು ಮತ್ತು ಕರಾವಳಿಯ ಪ್ರತ್ಯೇಕ ಕಡೆಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ (Rain News) ಮಳೆಯಾಗಲಿದೆ. ಉಳಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯ ಪ್ರತ್ಯೇಕ ಕಡೆಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ಮಳೆಯಾಗಬಹುದು. ಉತ್ತರ ಕನ್ನಡದಲ್ಲಿ ಬಿಸಿಲು ಝಳಪಿಸಲಿದೆ. ಮಲೆನಾಡಿನ ಕೊಡಗು ಹಾಗೂ ಚಿಕ್ಕಮಗಳೂರಲ್ಲಿ ಅತಿ ಸಣ್ಣ ಮಳೆ ಬೀಳಬಹುದು. ಉಳಿದಂತೆ ಹಾಸನ, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿಯೂ ಮಳೆ ಮಾಯ
ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆ ಮಾಯವಾಗಿದೆ. ನಗರದಲ್ಲಿ ಯಾವುದೇ ಮಳೆ ಮುನ್ಸೂಚನೆಯಿಲ್ಲ. ಭಾಗಶಃ ಮೋಡ ಕವಿದ ವಾತಾವರಣವಿದ್ದರೂ ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ. ಇನ್ನು ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಲು ಇರುತ್ತದೆ. ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಅ.24ರಂದು ರಾಜ್ಯಾದ್ಯಂತ ಒಣಹವೆ ಇತ್ತು. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 37.5 ಡಿ.ಸೆ ಹಾಗೂ ಕಡಿಮೆ ಉಷ್ಣಾಂಶ 14.4 ಡಿ.ಸೆ. ಚಿಕ್ಕನಹಳ್ಳಿಯಲ್ಲಿ ದಾಖಲಾಗಿತ್ತು.
ಇದನ್ನೂ ಓದಿ: Girl death : ನೀರು ತುಂಬಲು ಕೆರೆಗೆ ಹೋಗಿದ್ದ ಬಾಲಕಿ ಕಾಲು ಜಾರಿ ಬಿದ್ದು ಸಾವು, ಸಿಡಿದ ಜನರು
ಈ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಳ
ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ರಾಯಚೂರು, ವಿಜಯಪುರ ಸೇರಿದಂತೆ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು, ಬಳ್ಳಾರಿ, ವಿಜಯನಗರದ ಒಂದೆರಡು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ