ವಿಜಯಪುರ: ನಸುಕಿನ ಜಾವ ನಿದ್ದೆಯ ಮಂಪರಿನಲ್ಲಿದ್ದ ಜಿಲ್ಲೆಯ ಜನರಿಗೆ ಭೂಕಂಪನ ಆದ ಅನುಭವ ಉಂಟಾಗಿ ಆತಂಕ ಹೆಚ್ಚಿಸಿದೆ. ಜಿಲ್ಲೆಯಾದ್ಯಂತ ಎರಡನೇ ಬಾರಿ ಭೂಮಿ ಕಂಪಿಸಿದೆ. ಇಂಡಿ, ಬಬಲೇಶ್ವರ, ತಿಕೋಟ ಸೇರಿದಂತೆ ತಾಂಬಾ ಬಹುತೇಕ ಕಡೆ ಭೂಕಂಪನದ ಅನುಭವವಾಗಿದೆ.
ಭೂಕಂಪನಕ್ಕೆ ಸಂಬಂಧಿತ ಆ್ಯಪ್ ಮತ್ತು ವಬ್‌ಸೈಟ್‌ಗಳಲ್ಲೂ ಭೂಕಂಪನದ ತೀವ್ರತೆ ದಾಖಲಾಗಿದೆ. ಶನಿವಾರದ ಭೂಕಂಪನದ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು. ಭೂಕಂಪನದ ಕೇಂದ್ರಬಿಂದು ತಾಲೂಕಿನ ಕನ್ನೂರು ಗ್ರಾಮ ಪಂಚಾಯಿತಿಯಿಂದ 2.3 ಕಿಲೋಮೀಟರ್ ಉತ್ತರ ಪಶ್ವಿಮ ಭಾಗವಾಗಿದೆ. ಇದು ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗವಾಗಿದ್ದು, ಹತ್ತು ಕಿಲೋಮೀಟರ್ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಸುಮಾರು 4.4 ಮ್ಯಾಗ್ನಿಟ್ಯೂಡ್ ಪ್ರಮಾಣದಲ್ಲಿ ಭೂಮಿ ಕಂಪಿಸಿರುವುದು ದಾಖಲಾಗಿದೆ. ಆದರೆ, ಜಿಲ್ಲೆಯಲ್ಲಿ ಯಾವುದೇ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ | Earthquake In Karnataka | ಕೊಡಗಿನಲ್ಲಿ ಮತ್ತೆ ನಡುಗಿದ ಭೂಮಿ: ಮಧ್ಯರಾತ್ರಿ ಭೂಕಂಪನ
ಈ ಕುರಿತು ಜಲಸಂಪನ್ಮೂಲ ಮಾಜಿ ಸಚಿವ, ಹಾಲಿ ಶಾಸಕ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು, ನನಗೂ ಭೂಕಂಪನದ ಅನುಭವವಾಗಿದ್ದು, ಈ ಕುರಿತು ಹೆಚ್ಚಿನ ಪರೀಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಇಂದು ರಿಕ್ಟರ್ ಮಾಪನದಲ್ಲಿ 4.9 ಮ್ಯಾಗ್ನಿಟ್ಯೂಡ್‌ನಷ್ಟು ತೀವ್ರತೆ ದಾಖಲಾಗಿದ್ದು, ವಿಜಯಪುರ ತಿಕೋಟಾ ಭಾಗದಲ್ಲಿ ಭೂಮಿ ಕಂಪಿಸಿದೆ. ಬಹಳ ವರ್ಷಗಳಿಂದ ತಿಕೋಟಾ ಹಾಗೂ ಸುತ್ತಮುತ್ತಲ ಭಾಗದಲ್ಲಿ ಭೂಕಂಪ ಆಗುತ್ತಿದೆ.
ಭೂಕಂಪನದ ಕುರಿತು ಜಿಲ್ಲಾಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ಅಲ್ಲದೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಂಡದ ಜತೆಗೂ ಚರ್ಚೆ ನಡೆಸಿದ್ದು, ಜನರು ಆತಂಕಗೊಳ್ಳಬಾರದೆಂದು ಮನವಿ ಮಾಡಿದರು.
ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯದಲ್ಲಿ ಭೀಕರ ಮಳೆ ಹಾಗೂ ಪ್ರವಾಹವಾಗುತ್ತಿದ್ದು, ಜನರ ರಕ್ಷಣೆ, ಪರಿಹಾರ ನೀಡುವ ವಿಚಾರವಾಗಿ ಸರ್ಕಾರದ ವಿರುದ್ಧ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು. ಸರ್ಕಾರಕ್ಕೆ ಜನರ ಸಂಕಷ್ಟ, ಪ್ರವಾಹ ಪೀಡಿತರ ಸಮಸ್ಯೆಗಳನ್ನು ಬಗೆಹರಿಸುವ ಯೋಚನೆ ಇಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಹೋಗಬೇಕಾಗಿತ್ತು. ಕಂದಾಯ ಸಚಿವ ಅಶೋಕ್ ಮಾತ್ರ ಹೋಗಿದ್ದಾರೆ. ಪ್ರವಾಹ ಉಂಟಾದ ವೇಳೆ ಸಿಎಂ ವೈಮಾನಿಕ ಸಮೀಕ್ಷೆ ಮಾಡಿ ಜನರ ಸಹಾಯಕ್ಕೆ ಬರಬೇಕು. ಕೇವಲ ಕಣ್ಣೀರು ಒರೆಸುವ ತಂತ್ರವಾಗಬಾರದು ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಪ್ರವಾಹ ಉಂಟಾದಾಗ ಸರಿಯಾಗಿ ಪರಿಹಾರ ನೀಡಿಲ್ಲ. ತಾಂತ್ರಿಕ ನೆಪವೊಡ್ಡಿ ಪರಿಹಾರವನ್ನು ತಿರಸ್ಕರಿಸಲಾಗಿದೆ. ತಕ್ಷಣ ಪರಿಹಾರ ಕೊಡದೆ ಮುಂದೂಡಲಾಗುತ್ತದೆ. ಸರ್ಕಾರ ಜವಾಬ್ದಾರಿಯಿಂದ ವರ್ತನೆ ಮಾಡಬೇಕೆಂದು ತಾಕೀತು ಮಾಡಿದರು.
ಇದನ್ನೂ ಓದಿ | Earthquake In Karnataka | ಕರ್ನಾಟಕ, ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಕಂಪನ, ಕೇಂದ್ರಸ್ಥಾನ ಮಹಾರಾಷ್ಟ್ರ