Site icon Vistara News

ಡಿಕೆಶಿಗೆ ಮತ್ತೆ ಇಡಿ ಸಂಕಷ್ಟ; ಚಾರ್ಜ್‌ಶೀಟ್‌ನಲ್ಲಿ ಏನೆಲ್ಲಾ ಮಾಹಿತಿ ಇದೆ ಗೊತ್ತಾ?

‌ ಡಿ.ಕೆ.ಶಿವಕುಮಾರ್ siddaramaiah

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೋಷರೋಪ ಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ದೆಹಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇತ್ತೀಚೆಗೆ ನೋಟಿಸ್‌ ನೀಡಿದೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಡಿಕೆಶಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸಹಚರರಾದ ಸಚಿನ್‌ ನಾರಾಯಣ್‌(ವ್ಯಾಪಾರ ಸಹವರ್ತಿ), ಸುನೀಲ್‌ ಕುಮಾರ್‌ ಶರ್ಮಾ(ಶರ್ಮಾ ಟ್ರಾನ್ಸ್‌ಪೋರ್ಟ್ಸ್‌ ಮಾಲೀಕ), ಅಂಜನೇಯ ಹನುಮಂತಯ್ಯ(ನವದೆಹಲಿ ಕರ್ನಾಟಕ ಭವನದಲ್ಲಿನ ಉದ್ಯೋಗಿ), ಎನ್‌.ರಾಜೇಂದ್ರನ್ (ಮಾಜಿ ರಾಜ್ಯ ಸರ್ಕಾರಿ ಉದ್ಯೋಗಿ) ವಿರುದ್ಧ ತೆರಿಗೆ ವಂಚನೆ ಹಾಗೂ ಹವಾಲಾ ದಂಧೆ ಆರೋಪ ಕೇಳಿಬಂದಿದ್ದರಿಂದ 2019ರಲ್ಲಿ ಇಡಿ ಡಿ.ಕೆ.ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಿ ತಿಹಾರ್‌ ಜೈಲಿನಲ್ಲಿಡಲಾಗಿತ್ತು. ಬಳಿಕ ಅವರು ಜಾಮೀನು ಪಡೆದು ಹೊರಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಇಡಿ 58 ಪುಟಗಳ ಚಾರ್ಜ್‌ಶೀಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಉಲ್ಲೇಖಿಸಿದ ಅಂಶಗಳು ಏನು, ಡಿಕೆಶಿ ಮತ್ತು ಸಹಚರರಿಂದ ನಡೆದ ಹವಾಲ ದಂಧೆಯ ಸಂಪೂರ್ಣ ವಿವರ ಇಲ್ಲಿದೆ;

ದೆಹಲಿಯ ಸಫ್ಧರ್‌ಜಂಗ್ ಅಪಾರ್ಟ್‌ಮೆಂಟ್‌ನಲಿ ಸಿಕ್ಕ 6.61 ಕೋಟಿ ರೂ. ಡಿ.ಕೆ.ಶಿವಕುಮಾರ್ ಅವರದ್ದೇ ಎಂದು ವಿಚಾರಣೆ ವೇಳೆ ಆರೋಪಿ ಆಂಜನೇಯ ಬಾಯಿ ಬಿಟ್ಟಿದ್ದಾರೆ. ಡಿಕೆಶಿಯ ಅಕ್ರಮ ಹಣದ ವ್ಯವಹಾರವನ್ನು ರಾಜೇಂದ್ರ ಹಾಗೂ ಆಂಜನೇಯ ನೋಡಿಕೊಳ್ಳುತ್ತಿದ್ದರು. ಸುರೇಶ್ ಶರ್ಮಾ ಅವರ ಫ್ಲಾಟ್‌ ಅನ್ನು ಡಿ.ಕೆ.ಶಿವಕುಮಾರ್ ಹಾಗೂ ಸುನಿಲ್ ಶರ್ಮಾ ಹಾಗೂ ಡಿಕೆಶಿ ಅಕ್ರಮ ಹಣ ಸಂಗ್ರಹಣೆ ಬಳಸುತ್ತಿದ್ದರು. ಡಿಕೆಶಿ ಸೂಚನೆ ಮೇರೆಗೆ 1 ಕೋಟಿ, 2 ಕೋಟಿ, 1.5 ಕೋಟಿ ಹೀಗೆ ಹಲವು ಬಾರಿ ಸಾಗಾಟ ಮಾಡಲಾಗಿದೆ. ಏನೇ ಸಮಸ್ಯೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಆಂಜನೇಯಗೆ ಹೇಳಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ಜಾಗ ಕೊಡುವ ಭರವಸೆ ನೀಡಿದ್ದಾರೆ ಎಂಬ ಮಹತ್ವದ ಅಂಶಗಳು ಇಡಿಯ ಚಾರ್ಜ್‌ಶೀಟ್‌ನಲ್ಲಿದೆ.

ಹವಾಲ ದಂಧೆ ನಡೆದಿದ್ದು ಖಚಿತ

ಡಿಕೆಶಿ ಅವರ ಅಕ್ರಮ ಹಣ ಸಂಗ್ರಹಿಸಲು ಆಂಜನೇಯಗೆ ವರ್ಷಕ್ಕೆ 1ರಿಂದ 1.5 ಲಕ್ಷ ರೂಪಾಯಿ ಸಂಬಳ ಸಿಗುತ್ತಿತ್ತು. ಐಟಿ ದಾಳಿ ವೇಳೆ ಡಿಕೆಶಿಗೆ ಸೇರಿದ್ದ ಹಣವನ್ನು ತನ್ನದು ಎಂದು ಸುನೀಲ್ ಶರ್ಮಾ ಹೇಳಿದ್ದರು. ಡಿಕೆಶಿ ಅವರಿಗೋಸ್ಕರ ಹವಾಲ ದಂಧೆ ನಡೆಸುತ್ತಿದ್ದಾಗಿ ಸುನಿಲ್ ಶರ್ಮಾ ಹಾಗೂ ರಾಜೇಂದ್ರ ಹೇಳಿಕೆ ನೀಡಿದ್ದರು. ಈ ಬಗ್ಗೆ ಇವರ ಬಳಿಯಿದ್ದ ದಾಖಲೆಗಳನ್ನು ಸೀಜ್ ಮಾಡಲಾಗಿದೆ. ರಾಜೇಂದ್ರ ಮನೆಯಲ್ಲಿ ಜಪ್ತಿ ಮಾಡಿದ್ದ ಡೈರಿಯಲ್ಲಿ ಹವಾಲ ದಂಧೆಯ ಮಾಹಿತಿ ಲಭ್ಯವಾಗಿದೆ. ಸುನಿಲ್ ಶರ್ಮಾ ಹಾಗೂ ಚಂದ್ರಶೇಖರ್ ಆಣತಿಯಂತೆ ವ್ಯವಹಾರ ನಡೆಸಿದ್ದಾಗಿ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳು ಕೋಡ್ ವರ್ಡ್ ಬಳಸಿ ಲಕ್ಷ ಲಕ್ಷ ರೂಪಾಯಿ ಹವಾಲ ದಂಧೆ ನಡೆಸುತ್ತಿದ್ದರು. ಇವರ ಮೊಬೈಲ್‌ ಮೆಸೇಜ್‌ಗಳಲ್ಲೂ ಕೋಡ್ ವರ್ಡ್ ಬಳಕೆ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.

ಡಿ.ಕೆ. ಶಿವಕುಮಾರ್ ಬಚಾವ್ ಮಾಡಲು ಸುನಿಲ್ ಶರ್ಮಾ ಮಾಡಿದ್ದ ಯತ್ನ ವಿಫಲವಾಗಿದೆ. ದೆಹಲಿಯ ಸಫ್ದರ್‌ಜಂಗ್ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿದ್ದ ಹಣ ತನ್ನದೇ ಎಂದು ಸುನಿಲ್ ಶರ್ಮಾ ಹೇಳಿದ್ದರು. ಆದರೆ ಸಫ್ದರ್‌ಜಂಗ್ ಫ್ಲಾಟ್ ನಂ 17,‌ B-4 ಸಿಕ್ಕಿದ 1.37 ಕೋಟಿ ರೂ. ಕೂಡ ಡಿ.ಕೆ.ಶಿವಕುಮಾರ್‌ಗೆ ಸೇರಿದ್ದು, ಡಿಕೆಶಿ ನಿರ್ದೇಶನದ ಮೇರೆಗೆ ಫ್ಲಾಟ್ ಕೀಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಾಗಿ ಆಂಜನೇಯ ಹೇಳಿದ್ದಾರೆ. ಸಚಿನ್ ನಾರಾಯಣ್ ಕೂಡ ಜಪ್ತಿ ಮಾಡಿದ ಹಣ ತನ್ನದು ಎಂದು ಸಾಬೀತು ಮಾಡಲು ಸತತ ಯತ್ನ ನಡೆಸಿದ್ದರು. ಮದ್ಯ ವ್ಯವಹಾರದಿಂದ ಬಂದ ಹಣವನ್ನು ಸಂಗ್ರಹಿಸಿದ್ದಾಗಿ ಸಚಿನ್ ನಾರಾಯಣ್ ಹೇಳಿಕೆ ನೀಡಿದ್ದರು. ಆದರೆ, ತನ್ನ ಹೇಳಿಕೆ ಸೂಕ್ತ ಸಾಕ್ಷ್ಯಾಧಾರಗಳನ್ನ ಇಡಿಗೆ ನೀಡುವಲ್ಲಿ ಸಚಿನ್ ನಾರಾಯಣ್ ವಿಫಲವಾಗಿದ್ದಾರೆ ಎಂಬ ಅಂಶಗಳನ್ನು ಎಳೆ-ಎಳೆಯಾಗಿ ಇಡಿ ಅಧಿಕಾರಿಗಳು ಚಾರ್ಜ್‌ಶೀಟ್‌ ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ | Modi in Karnataka | ನಮ್ಮ ವಿದ್ಯಾರ್ಥಿಗಳು ಭಯೋತ್ಪಾದಕರಲ್ಲ, ರಜೆ ಘೋಷಿಸಿದ್ದಕ್ಕೆ ಡಿಕೆಶಿ ಕಿಡಿ

ಕೃಷಿ ಹಣದ ಮಾಹಿತಿ ಇಲ್ಲ

ಸಫ್ದರ್‌ಜಂಗ್ ಪ್ಲಾಟ್ ನಂ 107, B-2 ಸಿಕ್ಕಿದ್ದ ಲೆಕ್ಕವಿಲ್ಲದ 41 ಲಕ್ಷ ರೂ. ಕೂಡ ಡಿಕೆಶಿಗೆ ಸೇರಿದ್ದ ಹಣವಾಗಿದೆ. ಡಿಕೆಶಿ ಸೂಚನೆ ಮೇರೆಗೆ ಹಣ ಸಂಗ್ರಹಿಸುವುದು ಮತ್ತು ಹೇಳಿದವರಿಗೆ ನೀಡುವ ಕೆಲಸವನ್ನು ಆಂಜನೇಯ ಮಾಡುತ್ತಿದ್ದ. ಅಲ್ಲದೆ, ದಾಳಿಗೂ ಒಂದು ವಾರದ ಹಿಂದೆ ಡಿಕೆಶಿ ಹೇಳಿದವರಿಗೆ ಆಂಜನೇಯ 1.6 ಕೋಟಿ ರೂ. ನೀಡಿದ್ದ. ಬಳಿಕ ಪ್ಲಾಟ್ ನಂ 107, B-2 ನಲ್ಲಿ ಸಿಕ್ಕ ಹಣ ನನ್ನದೇ ಎಂದು ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದು, ಕೃಷಿಯಿಂದ ಬಂದ ಹಣವನ್ನು ಇಟ್ಟಿರುವುದಾಗಿ ಹೇಳಿದ್ದಾರೆ. ಆದ್ರೆ ಯಾವ ಕೃಷಿಯಿಂದ ಹಣ ಬಂದಿದೆ ಎಂಬ ಮಾಹಿತಿ ನೀಡಿಲ್ಲ, 2012 ರಿಂದ 2020ರವರೆಗೆ ಕೃಷಿಯಿಂದ 89.40 ಲಕ್ಷ ರೂಪಾಯಿ ಆದಾಯ ಬಂದಿರುವುದಾಗಿ ದಾಖಲೆ ಸಲ್ಲಿಸಿದ್ದಾರೆ. ಫ್ಲಾಟ್‌ ನಂ-01 ರಲ್ಲಿ ಸಿಕ್ಕ 12.44 ಲಕ್ಷ ರೂ. ಕ್ಯಾಷ್ ಕೂಡ ಡಿಕೆ ಶಿವಕುಮಾರ್‌ ಅವರದ್ದಾಗಿದೆ. ಫ್ಲಾಟ್‌ಗೆ ಬರುತ್ತಿದ್ದ ಗೆಸ್ಟ್‌ಗಳ ಖರ್ಚಿಗಾಗಿ 15 ಲಕ್ಷ ರೂಪಾಯಿ ನೀಡಿದ್ದರು. ಅವರ ಸೂಚನೆ ಮೇರೆಗೆ ಖರ್ಚು ಮಾಡಿದ್ದಾಗಿ ಆಂಜನೇಯ ಇಡಿ ಮುಂದೆ ಹೇಳಿಕೆ ನೀಡಿದ್ದಾರೆ.

ಡಿಕೆಶಿ ಪ್ರಮುಖ ಆರೋಪಿ

ಡಿಕೆಶಿ ಒಡೆತನದ ಮನೆಯಲ್ಲಿದ್ದ ಹಣ ತಮ್ಮದು ಎಂಬ ಸಚಿನ್, ಸುನಿಲ್ ಶರ್ಮಾ ವಾದಕ್ಕೆ ಸಾಕ್ಷ್ಯ ಸಿಕ್ಕಿಲ್ಲ, ನಂತರ ಈ ಹಣದ ನಿಜವಾದ ಮಾಲೀಕ ಡಿ.ಕೆ.ಶಿವಕುಮಾರ್ ಎಂಬುವುದು ಸಾಬೀತಾಗಿದೆ. ಹೀಗಾಗಿ ಎಲ್ಲಾ ಐವರೂ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 120 ಬಿ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ದಾಳಿ ನಡೆಸಿದ್ದ 11 ಮಂದಿ ಐಟಿ ಅಧಿಕಾರಿಗಳ ಹೇಳಿಕೆ ದಾಖಲಿಸಿರುವ ಇಡಿ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ದಾಖಲೆಗಳು ಹಾಗೂ ಸಾಕ್ಷ್ಯಗಳ ಬಗ್ಗೆ ಐಟಿ ಅಧಿಕಾರಿಗಳು ವಿವರ ನೀಡಿದ್ದಾರೆ. ಆರೋಪಿಗಳ ಪಾತ್ರದ ಬಗ್ಗೆ ಪತ್ಯೇಕವಾಗಿ ಚಾರ್ಜ್‌ಶೀಟ್‌ನಲ್ಲಿ ವಿವರಿಸಿರುವ ಇಡಿ ಅಧಿಕಾರಿಗಳು, ಡಿ.ಕೆ.ಶಿವಕುಮಾರ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಅಕ್ರಮ ಹಣ ಸಂಗ್ರಹಿಸಿದ್ದಾರೆ. ಐಟಿ ದಾಳಿಯ ವೇಳೆ ಇತರ ಆರೋಪಿಗಳ ಮೇಲೆ ಪ್ರಭಾವ ಬೀರಿ ಹೇಳಿಕೆ ಕೊಡಿಸಿದ್ದಾರೆ.

ದಾಳಿ ನಡೆದು 7 ತಿಂಗಳ ನಂತರ ತಮ್ಮ ಹೇಳಿಕೆಯನ್ನು ಆಂಜನೇಯ, ರಾಜೇಂದ್ರ ಹಿಂಪಡೆದಿದ್ದಾರೆ. ದಾಳಿಯ ನಂತರ ನಡೆದ ತನಿಖೆ, ಇತರ ಆರೋಪಿಗಳ ಹಾಗೂ ಸಾಕ್ಷಿಗಳಿಂದ ಡಿಕೆಶಿ ಹಣ ಎಂದು ಸಾಬೀತಾಗಿದೆ. ಆರೋಪಿ ಸಚಿನ್ ನಾರಾಯನ್ ಪ್ರಮುಖ ಆರೋಪಿಯಾಗಿದ್ದು ಡಿ.ಕೆ.ಶಿವಕುಮಾರ್ ಅವರ ಅತ್ಯಾಪ್ತರಾಗಿದ್ದಾರೆ. ಸಚಿನ್ ನಾರಾಯಣ್ ಕೂಡ ದಾಳಿಯಲ್ಲಿ ಸಿಕ್ಕ ಹಣ ನನ್ನದು ಎಂದು ಹೇಳಿದ್ದಾರೆ. ಅಪರಾಧಿಕ ಒಳಸಂಚಿನಲ್ಲಿ ಸಚಿನ್ ಭಾಗಿಯಾಗಿರೋದು ತನಿಖೆ ವೇಳೆ ಸ್ಪಷ್ಟವಾಗಿ ಸಾಬೀತಾಗಿದೆ. ಡಿಕೆಶಿಗೆ ಸೇರಿದ್ದ 6.5 ಕೋಟಿ ರೂಪಾಯಿ ಹಣ ತನ್ನದು ಎಂದು ಸಾಬೀತು ಮಾಡಲು ಸುನಿಲ್ ಯತ್ನಿಸಿದ್ದಾರೆ. ರಾಜೇಂದ್ರ ಹಾಗೂ ಇತರರ ಮೂಲಕ ಡಿಕೆಶಿ ಹಣ ವರ್ಗಾವಣೆಯ ಕೆಲಸವನ್ನು ಸುನಿಲ್ ಶರ್ಮಾ ಮಾಡುತ್ತಿದ್ದ, ಡಿಕೆಶಿಗೆ ಸೇರಿದ ಹಣ ಸಂಗ್ರಹಿಸಿದ್ದ ಕೊಠಡಿಗೆ ಪ್ರತ್ಯೇಕವಾದ ಬೀಗ ಹಾಕಿ ರಕ್ಷಿಸಿದ್ದನು.

ಮುಚ್ಚಿಹಾಕುವ ಪ್ರಯತ್ನ ವಿಫಲ

ಡಿಕೆಶಿಗೆ ಸೇರಿದ್ದ ಅಕ್ರಮ ಹಣದ ವ್ಯವಹಾರ ನಡೆಸುತ್ತಿದ್ದುದೇ ಆಂಜನೇಯ ಹನುಮಂತಯ್ಯ, ಇಡಿ ದಾಳಿ ನಡೆಸಿದ್ದ ವೇಳೆ ಡಿಕೆಶಿಗೆ ಸೇರಿದ್ದ ಲ್ಯಾಪ್ ಟಾಪ್, ಮೊಬೈಲ್ ಹೊಂದಿದ್ದ ಆಂಜನೇಯ, ಡಿಕೆ ಶಿವಕುಮಾರ್ ಗೆ ಸೇರಿದ್ದ ಸಂಗ್ರಹಿಸಿ ಐಟಿ, ಇಡಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದ ರಾಜೇಂದ್ರ, ಡಿಕೆಶಿ ಸೇರಿ ಐವರು ಆರೋಪಿಗಳ ಹವಾಲಾ ಅಕ್ರಮದ ಎಲ್ಲ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. PMLA ಕಾಯಿದೆ ಸೆಕ್ಷನ್ 4 ಹಾಗೂ ಐಪಿಸಿ ಸೆಕ್ಷನ್ ಕ್ರಮಕ್ಕೆ ಮನವಿ ಮಾಡಿರುವ ಇಡಿ ಅಧಿಕಾರಿಗಳು, ಚಾರ್ಜ್ ಶೀಟ್ ಆಧರಿಸಿ ಜುಲೈ 1 ರಂದು ದೆಹಲಿ ವಿಶೇಷ ನ್ಯಾಯಾಲಯ ವಿಚಾರಣೆಗೆ ಹಾಜರಾಗಲು ಡಿ.ಕೆ.ಶಿವಕುಮಾರ್‌ಗೆ ಸಮನ್ಸ್ ನೀಡಿದೆ.

ಇದನ್ನೂ ಓದಿ | ಕೈ ಪಕ್ಷದಿಂದ ಒಂದು ಕಾಲು ಹೊರಗಿಟ್ಟ ಎಂ.ಆರ್‌. ಸೀತಾರಾಮ್‌: ಡಿಕೆಶಿ ವಿರುದ್ಧ ಆಕ್ರೋಶ

Exit mobile version