ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಿ ಹಣಕಾಸು ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಇ..ಡಿ ವಿಚಾರಣೆ ನಡೆಸುತ್ತಿದೆ. ಇದು ಬಿಜೆಪಿಯ ರಾಜಕೀಯ ಪ್ರೇರಿತ ನಡೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆಯ ಕಿಚ್ಚು ಹೆಚ್ಚಾಗಿದ್ದು, ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಿಂದ ರಾಜಭವನ ಚಲೋ ಶುರುವಾಗಿದೆ.
ಇದನ್ನೂ ಓದಿ | ರಾಜಭವನ ಚಲೋಗೆ ಕಾಂಗ್ರೆಸ್ ರೆಡಿ, ತಡೆಯಲು ಪೊಲೀಸ್ ತಂಡಗಳೂ ಸಿದ್ಧ
ಕಾಂಗ್ರೆಸ್ ಭವನದಿಂದ ಹೊರಬಂದಿರುವ ಪಕ್ಷದ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಇದೇ ವೇದಿಕೆ ಹಂಚಿಕೊಂಡಿರುವ ವೀರಪ್ಪ ಮೊಯ್ಲಿ, ಡಾ. ಪರಮೇಶ್ವರ್, ಯು.ಟಿ. ಖಾದರ್, ಕೆ.ಜೆ. ಜಾರ್ಜ್, ಬಿ.ಕೆ. ಹರಿಪ್ರಸಾದ್, ಡಾ. ಯತೀಂದ್ರ ಹಾಗೂ ಸಾವಿರಾರು ಕಾರ್ಯಕರ್ತರು ಸಾಥ್ ಕೊಟ್ಟಿದ್ದಾರೆ.
ನಿಂತಲ್ಲೇ ನಿಂತ ವಾಹನಗಳು
ಕ್ವೀನ್ಸ್ ರೋಡ್, ಇಂಡಿಯನ್ ಎಕ್ಸ್‌ಪ್ರೆಸ್ , ಅಂಬೇಡ್ಕರ್ ಬೀದಿ, ಕಬ್ಬನ್ ರೋಡ್, ಇನ್ಫೆಂಟ್ರಿ ರೋಡ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪರಿಣಾಮವಾಗಿ ವಾಹನ ಸವಾರರು ಬದಲಿ ಮಾರ್ಗ ಬಳಸಲೂ ಆಗದೇ ನಿಂತಲ್ಲೇ ನಿಲ್ಲುವಂತಾಗಿದೆ. ಈಗಾಗಲೇ ಟ್ರಾಫಿಕ್ ಪರ್ಯಾಯ ಮಾರ್ಗಕ್ಕೆ ಸೂಚನೆ ಕೊಟ್ಟಿದ್ದು, ಕಂಟೋನ್ಮೆಂಟ್‌ನಿಂದ ವಿಧಾನಸೌಧ ಕಡೆ ಬರುವವರು, ತಿಮ್ಮಯ್ಯ ಸರ್ಕಲ್ ಬಳಿ ಬಲತಿರುವು ಪಡೆದು ವಸಂತನಗರ ಮಾರ್ಗವಾಗಿ ಚಾಲುಕ್ಯ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ತೆರಳಬಹುದು. ಫ್ರೇಜರ್ ಟೌನ್ ಕಡೆಯಿಂದ ಶಿವಾಜಿನಗರ ಹಾಗೂ ಎಂಜಿ ರಸ್ತೆ ಕಡೆ ಬರುವವರು ನೇತಾಜಿ ರೋಡ್ ಮೂಲಕ ವಾರ್ ಮೆಮೋರಿಯಲ್ ಜಂಕ್ಷನ್ ಮಾರ್ಗವಾಗಿ ಮಣಿಪಾಲ್ ಸೆಂಟರ್ ಬಳಿ ಬಲ ತಿರುವು ಪಡೆದು ಕಬ್ಬನ್ ರೋಡ್ ಮೂಲಕ ಶಿವಾಜಿನಗರ ಹಾಗೂ ಎಂ.ಜಿ. ರಸ್ತೆ ತಲುಪಬಹುದು. ಹಾಗೆಯೇ ಕೆ.ಆರ್. ಸರ್ಕಲ್ ಮೂಲಕ ಶಿವಾಜಿನಗರ ಹೋಗುವವರು, ನೃಪತುಂಗ ರಸ್ತೆ ಮಾರ್ಗವಾಗಿ ಕಸ್ತೂರ್ ಬಾ ರೋಡ್, ಅನಿಲ್‌ಕುಂಬ್ಳೇ ಸರ್ಕಲ್ ಮಾರ್ಗವಾಗಿ ಶಿವಾಜಿನಗರ ತೆರಳಲು ಪರ್ಯಾಯ ರಸ್ತೆ ಬಳಸಲು ಸೂಚಿಸಲಾಗಿದೆ.
ಪ್ರತಿಭಟನೆ ಮೊಟಕು?
ಇಂಡಿಯನ್ ಎಕ್ಸಪ್ರೆಸ್ ಸಿಗ್ನಲ್ ಬಳಿ ಪೊಲೀಸ್ ಬಿಗಿ ಭದ್ರತೆ ಇದ್ದು, ಸಿಗ್ನಲ್ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಪ್ರತಿಭಟನೆಯನ್ನು ಇಂಡಿಯನ್ ಎಕ್ಸಪ್ರೆಸ್ ಸಿಗ್ನಲ್ ಬಳಿ ಮೊಟಕುಗೊಳಿಸಲು ಸಕಲ ತಯಾರಿಯನ್ನು ಖಾಕಿ ಪಡೆ ಮಾಡಿಕೊಂಡಿದೆ. ಈಗಾಗಲೇ 4 ಬಿಎಂಟಿಸಿ ಬಸ್‌ಗಳನ್ನು ಸಿದ್ಧತೆ ಮಾಡಿಕೊಂಡಿದ್ದು, ಪ್ರತಿಭಟನಾಕಾರಾರು ಬರುತ್ತಿದ್ದಂತೆ ಎಲ್ಲರನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ | ನ್ಯಾಷನಲ್ ಹೆರಾಲ್ಡ್ ಕೇಸ್ ಮೋತಿಲಾಲ್ ವೋರಾ ತಲೆಗೆ ಕಟ್ಟಲು ರಾಹುಲ್ ಯತ್ನ!