Site icon Vistara News

ED Raid: ಸತತ 7 ಗಂಟೆ ಇಡಿ ವಿಚಾರಣೆ ಬಳಿಕ ಮಾಜಿ ಸಚಿವ ನಾಗೇಂದ್ರ ಬಂಧನ; ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ

ED Raid

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸತತ 7 ಗಂಟೆ ವಿಚಾರಣೆ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರರನ್ನು ಇಡಿ ಬಂಧನ ಮಾಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮಾಜಿ ಸಚಿವರನ್ನು ಕೋರ್ಟ್‌ಗೆ ಹಾಜರುಪಡಿಸಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ನಿರಂತರ 40 ಗಂಟೆಗಳ ತಪಾಸಣೆ ಹಾಗೂ ತನಿಖೆಯ ಬಳಿಕ, ವಾಲ್ಮೀಕಿ ನಿಗಮ ಹಗರಣ (Valmiki Corporation Scam) ಕುರಿತು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಅವರನ್ನು ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿತ್ತು. ಮೊನ್ನೆ ಮುಂಜಾನೆಯಿಂದ ನಾಗೇಂದ್ರ ಮನೆ ಹಾಗೂ ಕಚೇರಿ ಮುಂತಾದೆಡೆ ಇಡಿ ದಾಳಿ (ED Raid) ನಡೆದಿತ್ತು.

40 ಗಂಟೆಗಳ ಕಾಲ ನಾಗೇಂದ್ರ ಹಾಗೂ ಕುಟುಂಬದವರನ್ನು ಮನೆಯಿಂದ ಹೊರಬಿಡದ ಇಡಿ ಅಧಿಕಾರಿಗಳು ನಿರಂತರವಾಗಿ ಪ್ರಶ್ನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.

ಬೆಂಗಳೂರಿನ ಇಡಿ ಕಚೇರಿಯಲ್ಲಿ ಅಧಿಕಾರಿಗಳು ಅವರನ್ನು ಪ್ರಶ್ನಿಸಲಾಗಿತ್ತು. ನಾಗೇಂದ್ರ ಸಿಎ ಹರೀಶ್‌ ಕೂಡ ನಿನ್ನೆಯಿಂದ ಇಡಿ ವಶದಲ್ಲಿದ್ದಾರೆ. ಯೂನಿಯನ್‌ ಬ್ಯಾಂಕ್‌ನಲ್ಲಿ ಸುಳ್ಳು ದಾಖಲೆ ನೀಡಿ ಅಕ್ರಮ ಖಾತೆ ತೆರೆದು ಕೋಟ್ಯಂತರ ರೂಪಾಯಿ ನಿಗಮದ ಹಣವನ್ನು ಅಲ್ಲಿಗೆ ವರ್ಗಾಯಿಸಿದ ಕುರಿತು ಹರೀಶ್‌ ಹೇಳಿಕೆಯಲ್ಲಿ ಕೆಲವು ಸಾಕ್ಷಿಗಳು ದೊರೆತಿವೆ. ಬ್ಯಾಂಕ್‌ ಸಿಸಿಟಿವಿ ರೆಕಾರ್ಡ್‌ಗಳನ್ನು ಚೆಕ್‌ ಮಾಡಿದಾಗಲೂ, ನಾಗೇಂದ್ರ ಸಿಎ ಹಾಗೂ ಶಾಸಕ ದದ್ದಲ್‌ ಸಿಎ ಅಲ್ಲಿಗೆ ಬಂದು ಹೋದ ಕುರಿತು ದಾಖಲೆ ಲಭ್ಯವಾಗಿದೆ. 50 ಲಕ್ಷ ಡೀಲ್‌ ನಡೆಸಲಾಗಿರುವ ಕುರಿತು ಬಂಧಿತರಾಗಿರುವ ಬ್ಯಾಂಕ್‌ ಅಧಿಕಾರಿಗಳು ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಈಗ ಹೆಚ್ಚಿನ ತನಿಖೆಯ ಉರುಳು ನಾಗೇಂದ್ರ ಕೊರಳಿಗೆ ಸುತ್ತಿಕೊಂಡಿದೆ.

ಬಿ. ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ನಿವಾಸಗಳ ಜತೆಗೆ ಮೂವರು ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮನೆಯ ಮೇಲೂ ಇಡಿ ದಾಳಿ ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರವಾದ್ದರಿಂದ ವಸಂತನಗರದಲ್ಲಿರುವ ವಾಲ್ಮೀಕಿ ನಿಗಮದ ಕಚೇರಿಗೂ ಇಡಿ ರೇಡ್‌ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಆರೋಪಿ ಸತ್ಯನಾರಾಯಣ್‌ನಿಂದ ವಾಲ್ಮೀಕಿ ನಿಗಮದ ಎಂ.ಡಿ. ಪದ್ಮನಾಭ್ ಹಣ ತಂದಿದ್ದರು ಎನ್ನಲಾಗಿದೆ. ಆ ಹಣದಲ್ಲಿ ನಾಗೇಂದ್ರ ಪಿಎ ಹರೀಶ್‌ 25 ಲಕ್ಷ ಹಣ ಪಡೆದಿದ್ದ. ದದ್ದಲ್ ಪಿಎ ಪಂಪಣ್ಣ ಕೂಡ 55 ಲಕ್ಷ ಹಣ ಪಡೆದಿದ್ದ. ಈ ಬಗ್ಗೆ ಪರಿಶೀಲನೆ ವೇಳೆ ಹರೀಶ್ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಆತನನ್ನು ಇಡಿ ವಶಕ್ಕೆ ಪಡೆದಿದೆ. ಪ್ರಕರಣದಲ್ಲಿ ಸಚಿವ ನಾಗೇಂದ್ರ ಪರ 50ರಿಂದ 60 ಕೋಟಿ ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆದಿದೆ.

ನಾಗೇಂದ್ರ ಅವರಿಗೆ ಸೇರಿದ ಡಾಲರ್ಸ್ ಕಾಲೋನಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ಅವರ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನಲ್ಲಿ ನಾಲ್ಕು ಕಡೆ ದಾಳಿಗಳು ನಡೆದಿವೆ. ಬಳ್ಳಾರಿಯ ಅವರ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರು ಹೊರತುಪಡಿಸಿ ರಾಯಚೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಮಧ್ಯೆ ಪ್ರವೇಶಿಸಬಹುದು ಎಂಬ ಮಾಹಿತಿ ದೊರೆತಿತ್ತು.

ಇದನ್ನೂ ಓದಿ | Prajwal Revanna Case: ರೇವಣ್ಣ ಜಾಮೀನು ರದ್ದು ಕೋರಿದ್ದ ಎಸ್‌ಐಟಿ ಅರ್ಜಿ ವಿಚಾರಣೆ 3 ವಾರ ಮುಂದೂಡಿಕೆ

ವಾಲ್ಮೀಕಿ ನಿಗಮದ ಹಗರಣದಲ್ಲಿ 185 ಕೋಟಿ ರೂ. ಅವ್ಯವಹಾರ ನಡೆದಿತ್ತು. ಇದರ ವ್ಯಾಪ್ತಿ ಕೆಳಹಂತದ ಅಧಿಕಾರಿಗಳಿಂದ ಹಿಡಿದು ಮೇಲಿನವರೆಗೂ ವ್ಯಾಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್‌ ಡೆತ್‌ನೋಟ್‌ನಲ್ಲಿಯೂ ಸಚಿವರ ಬಗ್ಗೆ ಉಲ್ಲೇಖ ಇದೆ.

Exit mobile version