ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ನಂತರ ರಾಜ್ಯಾದ್ಯಂತ ವಿವಾದ ಭುಗಿಲೆದ್ದರೂ ಅದನ್ನು ಕೇಳದೆ ಪುಸ್ತಕ ಮುದ್ರಣ ಮಾಡಿ ಹಂಚಲು ಆರಂಭಿಸಿದ ರಾಜ್ಯ ಸರ್ಕಾರ ಈಗ ತೇಪೆ ಹಚ್ಚಲು ಮುಂದಾಗಿದೆ. ಸಾರ್ವಜನಿಕ ವಲಯದಿಂದ, ಶಿಕ್ಷಣ ತಜ್ಞರಿಂದ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಂದ ಸೇರಿ ಎಲ್ಲ ಅಭಿಪ್ರಾಯಗಳನ್ನೂ ಪರಿಗಣಿಸಿ ಈಗ ತಿದ್ದೋಲೆ ಮೂಲಕ ತಪ್ಪು ಸರಿಪಡಿಸಿಕೊಳ್ಳಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಆದರೆ ಸರ್ಕಾರದ ಎಡವಟ್ಟಿನಿಂದಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎರಡೆರಡು ಪುಸ್ತಕ ಹಿಡಿದು ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟೆ ಅಲ್ಲದೆ ತನ್ನ ಎಡವಟ್ಟಿಗೆ ಶಿಕ್ಷಣ ಇಲಾಖೆ ಸಮರ್ಥನೆಯನ್ನೂ ಮಾಡಿಕೊಂಡಿದೆ.
8 ವಿಚಾರ ಪರಿಷ್ಕರಿಸಿ ತಿದ್ದೋಲೆ
೧. 9 ನೇ ತರಗತಿಯಲ್ಲಿನ ಸಮಾಜ ವಿಜ್ಞಾನ ಪಠ್ಯದಲ್ಲಿ ನಮ್ಮ ಸಂವಿಧಾನ ಎಂಬ ಪಾಠವಿದೆ. ಪರಿಷ್ಕೃತ ಪಠ್ಯದಲ್ಲಿ ʼಸಂವಿಧಾನ ಶಿಲ್ಪಿʼ ಸಂಬೋಧನೆ ಬಿಟ್ಟು ಹೋಗಿದ್ದು, ಅದನ್ನು ಸೇರಿಸಬೇಕು.
2. 7ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಭಕ್ತಿ ಪಂಥ ಹಾಗೂ ಸೂಫಿ ಸಂತರು ಸಂಪೂರ್ಣ ಪಾಠ ಕೈಬಿಡಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಭಕ್ತಿ ಪಂಥ ಎಂಭ ಅಧ್ಯಾಯದಲ್ಲಿ ಪುರಂದರದಾಸರು, ಕನಕದಾಸರ ಕುರಿತು ವಿಷಯವನ್ನು ಕಡಿಮೆ ಮಾಡಲಾಗಿದೆ. ಭಕ್ತಿ ಪಂಥ ಹಾಗೂ ಸೂಫಿ ಸಂತರು ಸಂಪೂರ್ಣ ಪಾಠವನ್ನು ಸೇರ್ಪಡೆ ಮಾಡಬೇಕು.
3. 7ನೇ ತರಗತಿಯ ಪ್ರಥಮ ಭಾಷೆ ಕನ್ನಡದ ʼಗೊಂಬೆ ಕಲಿಸುವ ನೀತಿʼ ಪದ್ಯದ ರಚನೆಕಾರರು ಡಾ. ಆರ್.ಎನ್.ಜಯಗೋಪಾಲ್ ಎಂದು ತಪ್ಪಾಗಿ ಮುದ್ರಣಗೊಂಡಿದ್ದು, ಮೂಲ ಕೃತಿಕಾರರಾದ ಚಿ.ಉದಯಶಂಕರ್ ರವರ ಕವಿ ಪರಿಚಯ ಸೇರ್ಪಡೆ ಮಾಡಬೇಕು.
4. 6ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ʼನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕʼ ಪಾಠದಲ್ಲಿ ಸಿದ್ದಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಸೇವೆಯ ಕುರಿತಾದ ಸಾಲುಗಳನ್ನು ಮತ್ತೆ ಸೇರ್ಪಡೆ ಮಾಡಬೇಕು.
5. 7ನೇ ತರಗತಿಯ ಸಮಾಜ ವಿಜ್ಞಾನದ ಮೈಸೂರು ಸಂಸ್ಥಾನ ಮತ್ತು ಇತರೆ ಸಂಸ್ಥಾನಗಳು ಎಂಬ ಪಾಠದಲ್ಲಿ ಸುರಪುರ ನಾಯಕರ ಕುರಿತಾದ ವಿವರಗಳ ಸೇರ್ಪಡೆ ಮಾಡಬೇಕು.
6. 9ನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿ ಭಾರತದ ಮತ ಪರಿವರ್ತಕರು ಎಂಬ ಅಧ್ಯಾಯದಲ್ಲಿ ಬಸವಣ್ಣನವರ ಕುರಿತಾದ ವಿಷಯ ಸೇರ್ಪಡೆ ಮಾಡಬೇಕು.
7. 7ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ʼಕರ್ನಾಟಕ ರಾಜ್ಯ ಏಕೀಕರಣ ಹಾಗೂ ಗಡಿವಿವಾದಗಳುʼ ಎಂಬ ಪಾಠದಲ್ಲಿ ಕುವೆಂಪು ಅವರು ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂಬ ಸಾಲನ್ನು ತೆಗೆದುಹಾಕುವುದು.
8. ರಾಷ್ಟ್ರಕವಿ ಕುವೆಂಪು ಹಾಗೂ ಹುಯಿಲಗೋಳ ನಾರಾಯಣರಾವ್ ರವರ ಭಾವಚಿತ್ರಗಳನ್ನು ಅಳವಡಿಸುವುದು
ತಿದ್ದೋಲೆಯನ್ನೂ ಹಿಡಿದು ಪಾಠ ಓದಬೇಕು
ಇದೀಗ ಸರ್ಕಾರ ಮಾಡಿರುವ ತಿದ್ದಿಪಡಿಯನ್ನು ಹೊಸ ಪುಸ್ತಕವಾಗಿ ಮುದ್ರಿಸಿ ಕಳಿಸುವುದಿಲ್ಲ. ಬದಲಿಗೆ ಈ ತಿದ್ದುಪಡಿಗಳನ್ನೇ ಪ್ರತ್ಯೇಕವಾಗಿ ಸಣ್ಣ ಹೊತ್ತಿಗೆ ಮಾಡಲಾಗುತ್ತದೆ. ಅವುಗಳನ್ನು ಎಲ್ಲ ಶಾಲೆಗಳಿಗೂ ತಲಾ ಒಂದು ಪ್ರತಿಯನ್ನು ರವಾನೆ ಮಾಡಲಾಗುತ್ತದೆ. ಶಿಕ್ಷಕರು ಪ್ರತಿ ಬಾರಿ ಪಾಠ ಮಾಡುವಾಗಲೂ ಪಠ್ಯಪುಸ್ತಕದ ಜತೆಗೆ ಈ ತಿದ್ದೋಲೆ ಪುಸ್ತಕವನ್ನೂ ಹಿಡಿದು ಪಾಠ ಮಾಡಬೇಕು. ವಿದ್ಯಾರ್ಥಿಗಳೂ ತಮ್ಮ ಪಠ್ಯ ಪುಸ್ತಕದಲ್ಲಿ ಹೊಸ ಸೇರ್ಪಡೆ ಅಥವಾ ಬದಲಾವಣೆಯನ್ನು ತಿದ್ದಿಕೊಂಡು ಓದಬೇಕು.
ಸಮರ್ಥನೆ ಮಾಡಿಕೊಂಡ ಇಲಾಖೆ
ಇದೀಗ ಹೊರಡಿಸಿರುವ ತಿದ್ದೋಲೆಯ ಎಡವಟ್ಟನ್ನು ಶಿಕ್ಷಣ ಇಲಾಖೆ ತನ್ನ ಹೊಸ ಸುತ್ತೋಲೆಯಲ್ಲೆ ಸಮರ್ಥನೆ ಮಾಡಿಕೊಂಡಿದೆ. ಸಾಮಾನ್ಯವಾಗಿ ಪಠ್ಯಪುಸ್ತಕಗಳ ರಚನೆ, ಪರಿಷ್ಕರಣೆಯಾದಾಗ ಅಗತ್ಯವಾದ ತಿದ್ದುಪಡಿಗಳನ್ನು ತಿದ್ದೋಲೆ ರೂಪದಲ್ಲಿ ನೀಡುವುದು ಶಿಕ್ಷಣ ಇಲಾಖೆಯಲ್ಲಿ ಈ ಹಿಂದಿನಿಂದಲೂ ಮಾಡಿಕೊಂಡು ಬರಲಾಗುತ್ತಿದೆ ಎಂದು ಸಮರ್ಥನೆಯನ್ನೂ ಆದೇಶದಲ್ಲೆ ಮಾಡಿಕೊಂಡಿದೆ.