ಬೆಂಗಳೂರು: ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santosh Suicide Case) ಪ್ರಕರಣದಲ್ಲಿ ಭುಗಿಲೆದ್ದ ವಿವಾದದಲ್ಲಿ ನಾಲ್ಕು ದಿನಗಳ ಹಗ್ಗಜಗ್ಗಾಟದ ನಂತರ ಕೆ.ಎಸ್. ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ಶುಕ್ರವಾರ ರಾತ್ರಿ ರಾಜೀನಾಮೆ(Resignation) ನೀಡಿದ್ದಾರೆ.
ತಮ್ಮ ಮಾತಿನ ಧಾಟಿ, ಹಾವ ಭಾವದಿಂದಾಗಿ ಅನೇಕ ಬಾರಿ ಹಾಸ್ಯ ಹುಟ್ಟಿಸುತ್ತಿದ್ದ ಬಿಜೆಪಿ ಹಿರಿಯ ನಾಯಕ ಇದೇ ಕಾರಣಕ್ಕೆ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡವರು. ಬಾಯಿ ಮಾತಿನ ವಿವಾದಗಳಿಗಾಗಿ ಕೇಂದ್ರದ ವರಿಷ್ಠರಿಂದ ಎಚ್ಚರಿಕೆಯನ್ನೂ ಪಡೆದಿದ್ದ ಹಿರಿಯ ಸಚಿವ, ಈ ಬಾರಿ ಎದ್ದ ವಿವಾದದಿಂದ ಬಚಾವಾಗಲು ಸಾಧ್ಯವಾಗಲಿಲ್ಲ. ಉತ್ತರ ಕರ್ನಾಟಕ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತಡರಾತ್ರಿ ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.
ರಾಜೀನಾಮೆ ಪತ್ರ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ 74 ವರ್ಷದ ಹಿರಿಯ ರಾಜಕಾರಣಿ ಈಶ್ವರಪ್ಪ, “ನಾನು ಯಾವುದೇ ತಪ್ಪು ಮಾಡಿಲ್ಲ. ರಾಜೀನಾಮೆ ನೀಡುವ ಅವಶ್ಯಕತೆಯೂ ಇರಲಿಲ್ಲ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಇದೇ ವಿಚಾರದಲ್ಲಿ ಬಿಜೆಪಿ ಪಕ್ಷವನ್ನು, ಅದರ ಇನ್ನಿತರೆ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಲಾಗುತ್ತಿದೆ. ನನ್ನನ್ನು ಈ ಮಟ್ಟಿಗೆ ಬೆಳೆಸಿದ ಪಕ್ಷಕ್ಕೆ ನನ್ನಿಂದ ಮುಜುಗರ ಆಗುವುದು ನನಗೆ ಬೇಕಿಲ್ಲ. ಹಾಗಾಗಿ ರಾಜೀನಾಮೆ ನೀಡಿದ್ದೇನೆ” ಎಂದರು.
15 ದಿನದ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಸಂತೋಷ್, “ತಾನು ಬೆಳಗಾವಿ ಜಿಲ್ಲೆಯಲ್ಲಿ 108 ಕಾಮಗಾರಿಗಳನ್ನು ಈಶ್ವರಪ್ಪ ಅವರ “ಮೌಖಿಕ” ಸೂಚನೆ ಮೇರೆಗೆ ಮಾಡಿದ್ದೇನೆ. ಇದಕ್ಕೆ ₹4ಕೋಟಿ ವೆಚ್ಚವಾಗಿದ್ದು, ಈಗ ಕಾರ್ಯಾದೇಶ ನೀಡಲು ಈಶ್ವರಪ್ಪ 40% ಕಮಿಷನ್ (Bribery) ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ನಂತರ ನವದೆಹಲಿಗೂ ತೆರಳಿ ಪ್ರಧಾನಿ ಕಚೇರಿ ಸೇರಿ ವಿವಿಧ ಬಿಜೆಪಿ ನಾಯಕರಿಗೆ ಈ ವಿಚಾರ ಮುಟ್ಟಿಸಿಬಂದಿದ್ದರು. ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದ ಈಶ್ವರಪ್ಪ ಇದೀಗ ಸಚಿವ ಸ್ಥಾನ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದಾರೆ.
ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಂಗಳವಾರದಿಂದ ಗುರುವಾರ ಸಂಜೆವರೆಗೂ ಈಶ್ವರಪ್ಪ ಹೇಳುತ್ತಿದ್ದರು. ಆದರೆ ಗುರುವಾರ ಸಂಜೆ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರವನ್ನು ಘೋಷಿಸಿದರು. ಈ ಸಮಯದಲ್ಲಿ ಮಾತನಾಡಿದ್ದ ಈಶ್ವರಪ್ಪ, ತಾವು ನಿರ್ದೋಷಿ ಎನ್ನುವುದು ತನಿಖೆಯಿಂದ ತಿಳಿಯುತ್ತದೆ. ನಂತರ ಮತ್ತೆ ಸಚಿವನಾಗಿ ಅಧಿಕಾರ ಸ್ವೀಕರಿಸುತ್ತೇನೆ. ಈ ಪ್ರಕರಣದ ಹಿಂದೆ ದೊಡ್ಡ ಸಂಚಿದೆ. ಅದನ್ನು ಪತ್ತೆ ಹಚ್ಚಬೇಕಿದೆ” ಎಂದಿದ್ದರು.
ಮೋದಿ-ಈಶ್ವರಪ್ಪ ಹಳೇ ಸ್ನೇಹ
ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರೊಬ್ಬರು, “ಬೇರೆ ಸಚಿವರಾಗಿದ್ದರೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ದಿನವೇ ರಾಜೀನಾಮೆ ನೀಡಬೇಕಾಗುತ್ತಿತ್ತು. ನಾ ಖಾವೂಂಗಾ ನಾ ಖಾನೇ ದೂಂಗಾ (ನಾನು ಭ್ರಷ್ಟಾಚಾರ ಮಾಡುವುದಿಲ್ಲ, ಬೇರೆಯವರಿಗೂ ಮಾಡಲು ಬಿಡುವುದಿಲ್ಲ) ಎಂಬುದು ಪ್ರಧಾನಿ ನರೇಮದ್ರ ಮೋದಿಯವರ ಪ್ರಸಿದ್ಧ ಮಾತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು 10% ಸರ್ಕಾರ ಎಂದು ಹೇಳಿದ್ದರು. ಅಂಥದ್ದರಲ್ಲಿ ತಮ್ಮದೇ ಪಕ್ಷದ ಸಚಿವರೊಬ್ಬರು, ಅದರಲ್ಲೂ ಚುನಾವಣಾ ವರ್ಷದಲ್ಲಿ 40% ಕಮಿಷನ್ ಆರೋಪ ಹೊತ್ತರೆ ಸಹಿಸುವ ಪ್ರಶ್ನೆಯೇ ಇರಲಿಲ್ಲ. ಆದರೆ ಈಶ್ವರಪ್ಪ ರಾಜೀನಾಮೆ ತಡವಾಗಲು ಪ್ರಮುಖ ಕಾರಣವೊಂದಿದೆ.”
ಹೆಚ್ಚಿನ ಓದಿಗಾಗಿ | ಸಂತೋಷ್ ಆತ್ಮಹತ್ಯೆ: ಎಲೆಕ್ಷನ್ ವರ್ಷದಲ್ಲಿ BJPಗೆ ಟೆನ್ಷನ್, “ಕೈ”ಗೆ ಅಸ್ತ್ರ
“ಮೊದಲನೆಯದಾಗಿ ಈಶ್ವರಪ್ಪ ಹಿರಿಯ ಸಚಿವರು. ಸಚಿವ ಸಂಪುಟದಲ್ಲಿರುವ ಬಹುತೇಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರೂ ಈಶ್ವರಪ್ಪ ಅವರಿಗೆ ಹೀಗೇ ಮಾಡಿ ಎಂದು ಸೂಚನೆ ನೀಡುವುದು ಸಾಧ್ಯವಿಲ್ಲ. ಇದಕ್ಕಿಂತಲೂ ಮುಖ್ಯವಾಗಿ, 1990ರಲ್ಲಿ ಅಂದಿನ ಬಿಜೆಪಿ ಹಿರಿಯ ನಾಯಕ ಡಾ. ಮುರಳಿ ಮನೋಹರ ಜೋಶಿ ಅವರ ನೇತೃತ್ವದಲ್ಲಿ ಏಕತಾ ಯಾತ್ರೆ ಆಯೋಜಿಸಲಾಗಿತ್ತು. ಜಮ್ಮು ಕಾಶ್ಮೀರ ಸಂಪೂರ್ಣ ಭಯೋತ್ಪಾದನೆಯಿಂದ ಆವೃತವಾಗಿದ್ದ ಸಮಯ. ಈ ಸಮಯದಲ್ಲಿ ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಅಸಾಧ್ಯವಾಗಿತ್ತು. ಈ ಸವಾಲನ್ನು ಎತ್ತಿಕೊಂಡ ಬಿಜೆಪಿ, ದೇಶದ ಎಲ್ಲ ರಾಜ್ಯಗಳಿಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಯಾತ್ರೆ ಆಯೋಜಿಸಿತು. ಎಲ್ಲ ಕಡೆಯಿಂದ ಬರುವ ಯಾತ್ರೆ ಕೊನೆಗೆ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸುವುದರೊಂದಿಗೆ ಯಶಸ್ವಿಯಾಗಿತ್ತು. ಈ ಯಾತ್ರೆಯ ಮುನ್ನೆಲೆಯಲ್ಲಿ ಮುರಳಿ ಮನೋಹರ ಜೋಶಿ ಇದ್ದರೆ, ಯಾತ್ರೆಯನ್ನು ಸಂಪೂರ್ಣ ಸಂಘಟಿಸಿದ್ದು ಅಂದು ಯುವ ನಾಯಕನಾಗಿದ್ದ ನರೇಂದ್ರ ಮೋದಿ. ಈ ಸಮಯದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯ್ಷರಾಗಿದ್ದವರು ಕೆ.ಎಸ್. ಈಶ್ವರಪ್ಪ. ಅಂದಿನಿಂದಲೂ ಮೋದಿ, ಈಶ್ವರಪ್ಪ ಸಂಬಂಧ ಇದೆ. ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ “ಮೇರೇ ಪ್ಯಾರೇ ದೋಸ್ತ್ ಈಶ್ವರಪ್ಪಾ ಜೀ” (ನನ್ನ ಆತ್ಮೀಯ ಸ್ನೇಹಿತರಾದ ಈಶ್ವರಪ್ಪನವರೇ) ಎಂದು ಮೋದಿ ಸಂಬೋಧಿಸುತ್ತಾರೆ. ಹಾಗಾಗಿ ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಸೂಚ್ಯವಾಗಷ್ಟೆ ಹೇಳಿದ್ದರೂ ಸಮಯದ ನಿರ್ಧಾರವನ್ನು ಅವರಿಗೇ ಬಿಡಲಾಗಿತ್ತು” ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಸಹ, ರಾಜೀನಾಮೆ ನೀಡುವುದು ಈಶ್ವರಪ್ಪ ಅವರ ಸ್ವಂತ ನಿರ್ಧಾರ ಎಂದು ತಿಳಿಸಿದ್ದರು.
ಈಶ್ವರಪ್ಪ ರಾಜೀನಾಮೆ ನೀಡಿದರಷ್ಟೆ ಸಾಲದು, ಬಂಧಿಸಬೇಕು ಎಂಬುದಕ್ಕೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಕೆ.ಜೆ. ಜಾರ್ಜ್ ಮೇಲೆ ಡಿವೈಎಸ್‌ಪಿ ಗಣಪತಿ ಆರೋಪ ಮಾಡಿದಾಗ ಬಂಧಿಸಿರಲಿಲ್ಲ ಎಂದು ತಿರುಗೇಟು ನೀಡಿದ್ದರು. ಶನಿವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಇದೇ ಮಾತನ್ನು ಮತ್ತೆ ಹೇಳಿದ ಬೊಮ್ಮಾಯಿ, ನ್ಯಾಯಾಲಯ ಹೇಳುವವರೆಗೆ ಜಾರ್ಜ್ ವಿರುದ್ಧ ದೂರು ದಾಖಲಿಸಿರಲಿಲ್ಲ. ಈಗ ಒಂದು ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ. ತನಿಖೆ ನಡೆದಂತೆ ಅವಶ್ಯಕತೆ ಬಿದ್ದರೆ ಇನ್ನುಳಿದ ಸೆಕ್ಷನ್‌ಗಳನ್ನೂ ಸೇರಿಸಲಾಗುತ್ತದೆ. ಕಾಂಗ್ರೆಸ್‌ನವರು ಸ್ವತಃ ತಾವೇ ವಕೀಲರು, ಸರ್ಕಾರಿ ವಕೀಲರು, ನ್ಯಾಯಾಧೀಶರು ಆಗಲು ಹೊರಟಿದ್ದಾರೆ. ಅದು ನಡೆಯುವುದಿಲ್ಲ. ಇಲ್ಲಿ ಕಾನೂನು ತನ್ನ ಕೆಲಸ ಮಾಡುತ್ತದೆ” ಎಂದಿದ್ದಾರೆ.
ಆರೋಪದಿಂದ ಹೊರಬರುವ ಸವಾಲು
ಚುನಾವಣೆ ಹೊಸ್ತಿಲಲ್ಲಿ ಎದುರಾಗಿರುವ ಭ್ರಷ್ಟಾಚಾರ ಆರೋಪದಿಂದ ಹೊರಬರುವುದು ಬಿಜೆಪಿಗೆ ಸವಾಲಾಗಿದೆ. ಶನಿವಾರದಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲೂ ಈ ವಿಚಾರ ಚರ್ಚೆಯಾಗುವ ಸಾಧ್ಯತೆಯಿದೆ. ಈಶ್ವರಪ್ಪ ಅವರೇ ಹೇಳಿಕೊಂಡಿರುವಂತೆ ಮತ್ತೆ ಚುನಾವಣೆ ವೇಳೆಗೆ ಸಚಿವರಾಗಿ ಮತ್ತೆ ಅಧಿಕಾರಕ್ಕೆ ಬಂದರೆ ಬಚಾವ್. ಇಲ್ಲದಿದ್ದರೆ ಈ ಕಳಂಕ ಮುಂದುವರಿದಿದೆ ಎಂದೇ ಭಾಸವಾಗುತ್ತದೆ. ಇಂತಹ ಸಂದರ್ಭದಲ್ಲಿ ಮುಂದಿನ ಚುನಾವಣೆಗೆ ಶಿವಮೊಗ್ಗದಿಂದ ಪಕ್ಷದ ಟಿಕೆಟ್ ದೊರಕುವುದೂ ಕಷ್ಟವಾಗುತ್ತದೆ. 75 ಮೀರಿದವರಿಗೆ ಟಿಕೆಟ್ ಇಲ್ಲ ಎಂಬ ಅಲಿಖಿತ ನಿಯಮ ಬಿಜೆಪಿಯಲ್ಲಿದೆ. ಅಲ್ಲಲ್ಲಿ ಕೆಲವು ವಿನಾಯಿತಿಗಳೂ ಇವೆ. ಈಗಾಗಲೆ 74 ವರ್ಷವಾಗಿರುವ ಈಶ್ವರಪ್ಪ ಅವರಿಗೆ ವಯಸ್ಸಿನ ಕಾರಣ ನೀಡಿಯೂ ಟಿಕೆಟ್ ನಿರಾಕರಣೆ ಮಾಡಬಹುದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕುರಿತ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಹೆಚ್ಚಿನ ಓದಿಗಾಗಿ | ಸಂತೋಷ್ ಅತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ A1: ಉಡುಪಿ ಠಾಣೆಯಲ್ಲಿ FIR