Site icon Vistara News

ಮೋದಿ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿ ಯತ್ನ: ಫೋಟೊ ಮಾರ್ಫಿಂಗ್‌ ಮಾಡಿದ ಇಬ್ಬರ ಮೇಲೆ ಎಫ್‌ಐಆರ್‌

Modi mangalore

ಮಂಗಳೂರು: ಸೆಪ್ಟೆಂಬರ್‌ ೨ರಂದು ಮಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸಂಬಂಧಿಸಿ ಗೊಂದಲ ಸೃಷ್ಟಿ ಮಾಡಲು ಯತ್ನಿಸಿದ ಸಂಬಂಧ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ತಿಳಿಸಿದ್ದಾರೆ.

ಕೆಲವು ದುಷ್ಕರ್ಮಿಗಳು ಫೋಟೊಗಳನ್ನು ಮಾರ್ಫ್‌ ಮಾಡಿ ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿ ಎಲ್ಲ ಕಡೆ ವೈರಲ್‌ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಮೋದಿ ಕಾರ್ಯಕ್ರಮದಲ್ಲಿ ಗೊಂದಲ ಉಂಟುಮಾಡಲು ಈ ರೀತಿ ಮಾಡಲಾಗುತ್ತಿದೆ ಎನ್ನಲಾಗಿದೆ.

ವಾಟ್ಸ್ಯಾಪ್‌ ಗ್ರೂಪ್‌ಗಳಲ್ಲಿ ಇಂಥ ಚಿತ್ರಗಳನ್ನು ಸರ್ಕ್ಯುಲೇಟ್‌ ಮಾಡಲಾಗುತ್ತಿದ್ದು, ಇದರಿಂದ ಸಾಮಾಜಿಕವಾಗಿ ಕಿರಿಕಿರಿ ಉಂಟಾಗುತ್ತಿದೆ. ಮೋದಿ ಕಾರ್ಯಕ್ರಮದ ಬಗ್ಗೆ ಗೊಂದಲ ಉಂಟಾಗುತ್ತಿದೆ ಎಂದು ಹೇಳಲಾಗಿದೆ.

ಎಲ್ಲ ಗ್ರೂಪ್‌ಗಳ ಮೇಲೆ ಕಣ್ಣು
ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯಾರೂ ಕಿಡಿಗೇಡಿತನ ನಡೆಸಬಾರದು ಎಂಬ ಕಾರಣಕ್ಕೆ ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗುತ್ತಿದೆ. ಚಟುವಟಿಕೆಗಳನ್ನು ಮಾನಿಟರ್‌ ಮಾಡಲಾಗುತ್ತಿದೆ ಎಂದು ಹೇಳಿರುವ ಕಮಿಷನರ್‌ ಶಶಿಕುಮಾರ್‌ ಅವರು ಯಾವುದು ಅಪರಾಧ ಎಂದು ಪರಿಗಣಿತವಾಗುತ್ತದೋ ಅದರ ವಿಚಾರದಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಒಂದೊಮ್ಮೆ ಅಪರಾಧ ಅನಿಸದೆ ಕಿಡಿಗೇಡಿತನ ಅನಿಸಿದರೆ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ, ಬಾಂಡ್‌ ಪಡೆಯುತ್ತೇವೆ. ಕೆಲವರನ್ನು ವಶಕ್ಕೆ ಪಡೆಯುವ ಪ್ರಯತ್ನವೂ ಆಗಿದೆ ಎಂದು ತಿಳಿಸಿರುವ ಅವರು, ಕೆಲವರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಖಂಡಿತವಾಗಿಯೂ ವಶಕ್ಕೆ ಪಡೆದು ಪ್ರಕರಣ ದಾಖಲಿಸುತ್ತೇವೆ ಎಂದಿದ್ದಾರೆ.

ಮೋದಿ ಕಾರ್ಯಕ್ರಮವನ್ನು ಹಿನ್ನೆಲೆಯಾಗಿಟ್ಟುಕೊಂಡು ಕೆಲವರು ಸಂಸದ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ವಿರುದ್ಧವೂ ಅಪಪ್ರಚಾರ ಮಾಡುತ್ತಿರುವುದೂ ನಡೆಯುತ್ತಿದೆ. ಬಿಜೆಪಿ ಪಕ್ಷ ಮತ್ತು ಪೊಲೀಸ್‌ ಇಲಾಖೆಯೂ ಇದರ ಬಗ್ಗೆ ಗಮನ ಹರಿಸಿದೆ ಎನ್ನಲಾಗಿದೆ.

Exit mobile version