ಬೆಂಗಳೂರು: ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ವಿರುದ್ಧ ಯುವ ಕಾಂಗ್ರೆಸ್ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದೆ. ರಾಜ್ಯದ ಎಲ್ಲ ಸಚಿವರ ಮನೆಗೆ ಮೊಟ್ಟೆಯನ್ನು ಡೆಂಜೊ ಮೂಲಕ ಪಾರ್ಸೆಲ್ ಮಾಡುವುದು ಅದರ ಪ್ಲ್ಯಾನ್!
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಕೊಡಗಿಗೆ ಭೇಟಿ ನೀಡಿದ್ದಾಗ ಅವರ ಕಾರಿನತ್ತ ಮೊಟ್ಟೆ ಎಸೆಯಲಾಗಿತ್ತು. ಸಾವರ್ಕರ್ ವಿರುದ್ಧವಾಗಿ, ಟಿಪ್ಪು ಸುಲ್ತಾನ್ ಪರವಾಗಿ ಅವರು ನೀಡುತ್ತಿರುವ ಹೇಳಿಕೆಗಳನ್ನು ಖಂಡಿಸಿ ಮೊಟ್ಟೆ ದಾಳಿ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಸಿದ್ದರಾಮಯ್ಯ ಗೋ ಬ್ಯಾಕ್ ಅಭಿಯಾನವೂ ಅಲ್ಲಲ್ಲಿ ನಡೆದಿದೆ.
ಇದರ ವಿರುದ್ಧ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಲ್ಲಿ ವಿನೂತನ ಪ್ರತಿಭಟನೆ ಆಯೋಜನೆಯಾಗಿದೆ. ಯುವ ಕಾಂಗ್ರೆಸ್ ಅಧ್ಯ್ಕಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಬೆಂಗಳೂರಿನ ಎಂ.ಜಿ. ರೋಡ್‌ನಲ್ಲಿರುವ ಯುದ್ಧ ಸ್ಮಾರಕದ ಬಳಿ ಈ ಪ್ರತಿಭಟನೆ ನಡೆಯಲಿದೆ.
ಯುದ್ಧ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿ ಅಲ್ಲಿಂದಲೇ ಎಲ್ಲ ಸಚಿವರ ನಿವಾಸಕ್ಕೆ ಡಂಜೋ ಮೂಲಕ ಮೊಟ್ಟೆಗಳನ್ನು ಪಾರ್ಸೆಲ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಸರಕಾರಿ ಪ್ರಾಯೋಜಿತ ದಾಳಿ
ಈ ನಡುವೆ, ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಘಟನೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ʻʻಗೃಹ ಸಚಿವರು ಹೊತ್ತಿರುವ ಜವಾಬ್ದಾರಿ ಕಾನೂನು ಸುವ್ಯವಸ್ಥೆ ಕಾಪಾಡುವುದೋ ಅಥವಾ ಗೂಂಡಾ ಪೋಷಣೆ ಮಾಡುವುದೋ? ಬಿಜೆಪಿ ಗೂಂಡಾಪಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಎರಡೆರಡು ಬಾರಿ ಮೊಟ್ಟೆ ಎಸೆಯಲು ಪೊಲೀಸರು ಅವಕಾಶ ಕೊಡುತ್ತಾರೆ ಎಂದರೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೇ?ʼʼ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿರುವ ಕಾಂಗ್ರೆಸ್, ʻʻಗುಪ್ತಚರ ಇಲಾಖೆ ICUನಲ್ಲಿದೆ, ಸರ್ಕಾರ ಸತ್ತಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದೆ.