Site icon Vistara News

Narendra Modi: ಭ್ರಷ್ಟರ ಬೇಟೆಯಾಡಿದ, ಉಗ್ರರ ಓಡಿಸಿದ; ಮೋದಿಗಾಗಿ ಕನ್ನಡದಲ್ಲಿ ಹಾಡು ಹಾಡಿದ ಅಜ್ಜಿ!

Narendra Modi

Elder Woman Sings A Song For Narendra Modi In Kannada In Karnataka

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಭರಾಟೆ ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪರವಾದ ಅಲೆ ಇದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಇರಲಿ, ಇಲ್ಲದಿರಲಿ, ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮೋದಿ ಅವರು ಅಚ್ಚುಮೆಚ್ಚಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕರ್ನಾಟಕದಲ್ಲಿ ಅಜ್ಜಿಯೊಬ್ಬರು ನರೇಂದ್ರ ಮೋದಿ ಅವರಿಗಾಗಿ ಹಾಡೊಂದನ್ನು ಬರೆದು, ಹಾಡಿದ್ದಾರೆ. ಕರ್ನಾಟಕ ಬಿಜೆಪಿ (Karnataka BJP) ಘಟಕವು ಅಜ್ಜಿಯ ಈ ವಿಡಿಯೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೊ (Viral Video) ವೈರಲ್‌ ಆಗಿದೆ.

“ಮೋದಿಯ ನಿಂದಿಸದಿರೋ ಅಣ್ಣಗಳಿರಾ…” ಎಂಬುದಾಗಿ ಅಜ್ಜಿಯು ಹಾಡು ಬರೆದಿದ್ದು, ರಾಗವಾಗಿ ಮೋದಿ ಅವರನ್ನು ಮೆಚ್ಚಿ ಹಾಡು ಹಾಡಿದ್ದಾರೆ. ನರೇಂದ್ರ ಮೋದಿ ಅವರು ದೊರೆ, ಉತ್ತಮ ಆಡಳಿತಗಾರ, ಭ್ರಷ್ಟಾಚಾರವನ್ನು ನಿಗ್ರಹಿಸಿದವರು, ಭಯೋತ್ಪಾದಕರನ್ನು ಓಡಿಸಿದವರು, ವಿವೇಕಾನಂದರಿಗೆ ಸಮಾನವಾದವರು, ಭಾರತೀಯರ ಮೇಲೆ ಮೋದಿ ಹೊಂದಿರುವ ಪ್ರೇಮ, ದೇಶದ ಮೇಲೆ ಅಭಿಮಾನ ಸೇರಿ ಹಲವು ಅಂಶಗಳನ್ನು ಉಲ್ಲೇಖಿಸಿ ಅಜ್ಜಿಯೊಬ್ಬರು ಹಾಡು ಹಾಡಿದ್ದಾರೆ.

ಅಜ್ಜಿ ಹಾಡಿನ ಸ್ಯಾಂಪಲ್

ಮೋದಿಯ ನಿಂದಿಸದಿರೋ ಅಣ್ಣಗಳಿರಾ
ಸಂತಾನ ನಿಂತಿಸದಿರೋ
ಧರೆಯನುದ್ಧರಿಸಲು ಬಂದ
ದೊರೆಯ ನಿಂದಿಸದರಿ ಅಣ್ಣಗಳಿರಾ
ಮೋದಿಯ ನಿಂದಿಸದಿರೋ…

ಅಜ್ಜಿಯ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿಯು, ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ. “ಸ್ಟುಡಿಯೋದಲ್ಲಿ ರೆಕಾರ್ಡಿಂಗ್‌ ಮಾಡಿಸಿ ಪ್ರಚಾರ ಪಡೆದುಕೊಂಡು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುವುದಲ್ಲ ಸಿದ್ದರಾಮಯ್ಯನವರೇ, ಈ ಇಳಿ ವಯಸ್ಸಿನಲ್ಲೂ ತಂತ್ರ‌ಜ್ಞಾನ ಬಳಸದೆ ಮೋದಿಯವರ ಸಾಧನೆಯನ್ನು ವೃದ್ಧೆ ಓರ್ವರು ಹಾಡಿರುವ ಹಾಡನ್ನೊಮ್ಮೆ ಕೇಳಿ” ಎಂಬುದಾಗಿ ಸಿದ್ದರಾಮಯ್ಯ ಅವರು ಹಂಚಿಕೊಂಡ ವಿಡಿಯೊಗೆ ಬಿಜೆಪಿ ತಿರುಗೇಟು ನೀಡಿದೆ.

ಕಾಂಗ್ರೆಸ್‌ಅನ್ನು ಟೀಕಿಸಿದ ಅಜ್ಜಿ

ಅಜ್ಜಿಯು ಹಾಡು ಹಾಡುವ ಮುನ್ನ ಕಾಂಗ್ರೆಸ್ಸಿಗರನ್ನು ಟೀಕಿಸಿದ್ದಾರೆ. “500 ವರ್ಷದಿಂದ ದೇಶದಲ್ಲಿ ರಾಮಮಂದಿರ ನಿರ್ಮಾಣ ಆಗಿರಲಿಲ್ಲ. ಅದನ್ನು ನರೇಂದ್ರ ಮೋದಿ ಅವರು ಸಾಕಾರಗೊಳಿಸಿದ್ದಾರೆ. ಈಗ ಮೋದಿ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾರೆ. ರಾಮ ಎದೆಯಲ್ಲಿದ್ದಾನೆ ಎಂದೆಲ್ಲ ಹೇಳುತ್ತಿದ್ದಾರೆ. ಇವರು ಇಷ್ಟು ದಿನ ಎಲ್ಲಿದ್ದರು” ಎಂಬುದಾಗಿ ಅಜ್ಜಿಯು ಟೀಕಿಸಿದ್ದಾರೆ. ಇದಾದ ಬಳಿಕ ಮೋದಿ ಕುರಿತು ಹಾಡುಹಾಡಿದ್ದಾರೆ.

ಇದನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

Exit mobile version