Site icon Vistara News

Bike Wheeling: ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್‌ ಹುಚ್ಚಾಟಕ್ಕೆ ವೃದ್ಧ ಬಲಿ

Syed Ayman

ಮೈಸೂರು: ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ‌ ಅಮಾಯಕ‌ ವೃದ್ಧ ಬಲಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ ನಡೆದಿದೆ. ಹಸುಗಳನ್ನು ಮೇಯಿಸಿ ಮನೆಗೆ ವಾಪಸ್‌ ತೆರಳುತ್ತಿದ್ದ ವೇಳೆ, ಯುವಕ ವ್ಹೀಲಿಂಗ್ ಮಾಡಿಕೊಂಡು ಬಂದು ವೃದ್ಧನಿಗೆ ಡಿಕ್ಕಿ ಹೊಡೆದಿದ್ದಾನೆ.

ಗುರುಸ್ವಾಮಿ (68) ಮೃತ ವೃದ್ಧ. ಉದಯಗಿರಿ ನಿವಾಸಿ ಸೈಯದ್ ಐಮಾನ್ ಅಪಘಾತ ಮಾಡಿದ ಆರೋಪಿ. ಹಸುಗಳೊಂದಿಗೆ ತೆರಳುತ್ತಿದ್ದ ವೃದ್ಧನಿಗೆ ವ್ಹೀಲಿಂಗ್‌ ಮಾಡುವಾಗ ನಿಯಂತ್ರಣ ತಪ್ಪಿ ಐಮಾನ್ ಡಿಕ್ಕಿ ಹೊಡೆದಿದ್ದಾನೆ. ಹೀಗಾಗಿ ವೃದ್ಧ ಮೃತಪಟ್ಟಿದ್ದಾರೆ. ಈ ವೇಳೆ ಗಾಯಗೊಂಡ ಯುವಕನ್ನು ವೃದ್ಧನ ಕುಟುಂಬಸ್ಥರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ತಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Chaitra Kundapura : ಚೈತ್ರಾ ಡೀಲ್‌ ಮಧ್ಯೆ ವಿನಯ್‌ ಗುರೂಜಿ ಎಂಟ್ರಿ? ಗೋವಿಂದ ಪೂಜಾರಿ ಕೊಟ್ಟ ಎಚ್ಚರಿಕೆ ಏನು?

ಪಿಎಸ್‌ಐ ಮಗನ ಮೇಲೆ ಬೈಕ್ ಕಳ್ಳತನ ಆರೋಪ?

ಪಿಎಸ್‌ಐ ಯಾಸ್ಮಿನ್ ತಾಜ್ ಮತ್ತು ಪುತ್ರ ಸೈಯದ್ ಐಮಾನ್‌

ವ್ಹೀಲಿಂಗ್‌ ಮಾಡಿ ಸಿಕ್ಕಿಬಿದ್ದಿದ್ದ ನಂಜನಗೂಡು ಸಂಚಾರ ಪಿಎಸ್‌ಐ ಯಾಸ್ಮಿನ್ ತಾಜ್ ಅವರ ಮಗ ಸೈಯದ್ ಐಮಾನ್‌ ವಿರುದ್ಧ ಇತ್ತೀಚೆಗೆ ಬೈಕ್ ಕಳ್ಳತನ (Theft Case) ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿ ಐಮಾನ್ ವಿರುದ್ಧ ಮಹಿಳೆಯೊಬ್ಬರು ನಜರ್‌ಬಾದ್ ಠಾಣೆಗೆ ದೂರು ನೀಡಿದ್ದರು.

ಏಪ್ರಿಲ್ 26ರಂದು ಕೆಟಿಎಂ ಬೈಕ್ ಕಳ್ಳತನವಾಗಿತ್ತು. ಪಿಎಸ್‌ಐ ಯಾಸ್ಮಿನ್ ತಾಜ್ ಪುತ್ರ ಐಮಾನ್, ಸ್ನೇಹಿತರಾದ ಫರ್ಹಾನ್, ತೌಸಿಫ್ ಹಾಗೂ ಜುಬಾನ್ ಸೇರಿ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಕಳ್ಳತನದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಈ ಬಗ್ಗೆ ಗಾಯತ್ರಿಪುರಂ ನಿವಾಸಿ ಭಾರತಿ ಎಂಬುವವರು ನಜರ್‌ಬಾದ್ ಠಾಣೆಗೆ ದೂರು ನೀಡಿದ್ದರು. ದೂರು ಕೊಟ್ಟ ಒಂದು ತಿಂಗಳ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆದರೆ, ಎಫ್‌ಐಆರ್‌ನಲ್ಲಿ ಐಮಾನ್ ಹೆಸರು ಉಲ್ಲೇಖಿಸಿಲ್ಲ. ನಂತರ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಐಮಾನ್ ತಾಯಿ ಇಲಾಖೆಯಲ್ಲಿ ಇರುವುದರಿಂದ ಕಳ್ಳನ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

ಇದನ್ನೂ ಓದಿ | Charmadi Ghat : ಚಾರ್ಮಾಡಿ ಘಾಟಿಯಲ್ಲಿ ಮಂಜು; ದಾರಿ ಕಾಣದೆ 120 ಅಡಿ ಪ್ರಪಾತಕ್ಕೆ ಉರುಳಿದ ಲಾರಿ, ಪ್ರಾಣ ರಕ್ಷಿಸಿದ ಮರ!

ಇದಕ್ಕೂ ಮೊದಲು ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸೈಯದ್ ಐಮಾನ್‌ನನ್ನು ಸಿದ್ಧಾರ್ಥ ನಗರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು, ಬೈಕ್‌ ಜಪ್ತಿ ಮಾಡಿದ್ದರು. ಯುವಕ ಮೈಸೂರಿನ ರಿಂಗ್ ರಸ್ತೆ ಹಾಗೂ ರಾಜೀವ್ ನಗರದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಬಳಿಕ ವಿಡಿಯೊಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ರೀಲ್ಸ್‌ ಆಧರಿಸಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

Exit mobile version