Site icon Vistara News

ಕೊಳ್ಳೇಗಾಲ ನಗರಸಭೆ ಬೈ ಎ‌ಲೆಕ್ಷನ್, ವಿಜಯಪುರ ಪಾಲಿಕೆ ಗೆಲುವು ಮುಂದಿನ ಚುನಾವಣೆಗೆ ದಿಕ್ಸೂಚಿ: ಸಿಎಂ

BJP OBC

ಬೆಂಗಳೂರು: ಕೊಳ್ಳೇಗಾಲ ನಗರಸಭೆ ಉಪ ಚುನಾವಣೆ ಹಾಗೂ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಯಶಸ್ಸು ಕಂಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದು, ಇದು ಮುಂದಿನ ವಿಧಾನಸಭಾ ಚುನಾವಣೆಗೆ (Election 2023) ದಿಕ್ಸೂಚಿ ಎಂದು ಬಣ್ಣಿಸಿದ್ದಾರೆ.

ಕೊಳ್ಳೇಗಾಲದಲ್ಲಿ ನಗರಸಭೆಯ ಏಳು ಸ್ಥಾನಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಆರು ಸ್ಥಾನಗಳನ್ನು ಪಡೆದುಕೊಂಡಿತ್ತು. ಇದು ಬಿಎಸ್‌ಪಿ ಬಾಹುಳ್ಯ ಇರುವ ಕ್ಷೇತ್ರವಾಗಿತ್ತು. ಈ ಹಿಂದೆ ಶಾಸಕ ಎನ್‌. ಮಹೇಶ್‌ ಅವರು ಬಿಎಸ್‌ಪಿ ಶಾಸಕರಾಗಿದ್ದಾಗ ಅವರ ಬೆಂಬಲಿಗರು ಆರಿಸಿಬಂದಿದ್ದರು. ಬಳಿಕ ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಮಹೇಶ್‌ ಬಿಜೆಪಿ ಸೇರಿದ್ದರು. ಇನ್ನು ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಅಡ್ಡ ಮತದಾನ ಹಿನ್ನೆಲೆಯಲ್ಲಿ ಏಳು ಮಂದಿಯನ್ನು ಬಿಎಸ್‌ಪಿ ಉಚ್ಚಾಟನೆ ಮಾಡಿತ್ತು. ಇದರಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆದರೆ, ತಮ್ಮ ಏಳೂ ಬೆಂಬಲಿಗರಿಗೆ ಬಿಜೆಪಿ ಟಿಕೆಟ್‌ ಕೊಡಿಸಿ ಅವರಲ್ಲಿ ಆರು ಮಂದಿಯನ್ನು ಗೆಲ್ಲಿಸುವಲ್ಲಿ ಶಾಸಕ ಮಹೇಶ್‌ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಸಿಎಂ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿದೆ. ಈ ಫಲಿತಾಂಶ ಮುಂಬರುವ ಚುನಾವಣೆಯಲ್ಲಿ ಕರ್ನಾಟದೆಲ್ಲೆಡೆ ಕಮಲ ಅರಳುವ ಮುನ್ಸೂಚನೆಯನ್ನು ನೀಡಿದೆ ಎಂದು ಬೊಮ್ಮಾಯಿ ಟ್ವೀಟ್‌ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ೩೫ ಸ್ಥಾನದಲ್ಲಿ ೧೭ ಬಿಜೆಪಿಗೆ
ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದ ವಿಜಯಪುರದಲ್ಲಿ ಮೂರೂವರೆ ವರ್ಷಗಳ ಬಳಿಕ ಪಾಲಿಕೆ ಚುನಾವಣೆ ನಡೆದಿದೆ. ಇಲ್ಲಿ ಒಟ್ಟು ೩೫ ಸ್ಥಾನಗಳ ಪೈಕಿ ಬಿಜೆಪಿಗೆ ೧೭ ಸ್ಥಾನಗಳು ಲಭ್ಯವಾಗಿವೆ. ಬಹುಮತಕ್ಕೆ ೧೮ ಸ್ಥಾನಗಳು ಬೇಕಿರುವುದರಿಂದ ಒಂದು ಸ್ಥಾನದ ಕೊರತೆ ಇದೆ. ಆದರೆ, ಐವರು ಪಕ್ಷೇತರರು ಗೆಲುವು ಸಾಧಿಸಿರುವುದರಿಂದ ಸುಲಭವಾಗಿ ಅಧಿಕಾರ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಶ್ರಮಿಸಿದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನೂ ಸಿಎಂ ಬೊಮ್ಮಾಯಿ ಅಭಿನಂದಿಸಿದ್ದಾರೆ. ಅಲ್ಲದೆ, ಆಯ್ಕೆ ಮಾಡಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ | Corporation Election | ವಿಜಯಪುರ ಪಾಲಿಕೆ ಫಲಿತಾಂಶ ಅತಂತ್ರ; ಬಿಜೆಪಿಗೆ ಬೇಕು ಇನ್ನೊಂದೇ ಸೀಟು!

Exit mobile version