ವಿಜಯಪುರ: ದಸರಾ ಮುಗಿದ ತಕ್ಷಣವೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ನಾನು ರಾಜ್ಯಾದ್ಯಂತ ಜಂಟಿ ಪ್ರವಾಸ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಮೂಲಕ ಚುನಾವಣಾ (Election 2023) ತಯಾರಿಗೆ ಇನ್ನಷ್ಟು ವೇಗ ನೀಡುವ ಸೂಚನೆಯನ್ನು ನೀಡಿದರು.
ಆಲಮಟ್ಟಿ ಅಣೆಕಟ್ಟೆಗೆ ಬಾಗಿನ ಅರ್ಪಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯಾದ್ಯಂತ ಪ್ರವಾಸವನ್ನು ಆರಂಭಿಸುವುದಾಗಿ ಸುದ್ದಿಗಾರರ ಪ್ರಶ್ನೆಗೆ ತಿಳಿಸಿದರು. ಅಲ್ಲದೆ, ಸಂಪುಟ ವಿಸ್ತರಣೆಯನ್ನೂ ಆದಷ್ಟು ಶೀಘ್ರದಲ್ಲಿಯೇ ಮಾಡುತ್ತಿದ್ದು, ಈ ಸಂಬಂಧ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಇನ್ನು ಅಭಿವೃದ್ಧಿ ವಿಚಾರವಾಗಿ ಹೇಳಬೇಕೆಂದರೆ ಈ ವರ್ಷ ನೀರಾವರಿಗಾಗಿ ೧೦ ಸಾವಿರ ಕೋಟಿ ರೂಪಾಯಿಯನ್ನು ವಿನಿಯೋಗ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಭಾರತ ಜೋಡೋಗೆ ವ್ಯಂಗ್ಯ
ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಹಿಂದೆ ಕಾಂಗ್ರೆಸ್ ಎರಡು ದೇಶಗಳನ್ನು ಬೇರ್ಪಡಿಸುವ ಮೂಲಕ ಭಾರತ್ ತೋಡೋ ಮಾಡಿತ್ತು. ಈಗ ಜೋಡೋ ಯಾತ್ರೆ ಮಾಡಲು ಹೊರಟಿರುವುದು ವಿಪರ್ಯಾಸ. ಭಾರತವನ್ನು ಇಬ್ಭಾಗ ಮಾಡುವ ಮೂಲಕ ಸಮಾಜದಲ್ಲಿ ಕಾಂಗ್ರೆಸ್ ಕ್ಷೋಭೆ ಉಂಟು ಮಾಡಿದೆ. ರಾಜಕಾರಣಕ್ಕಾಗಿ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ಯಾತ್ರೆಯನ್ನು ಮಾಡುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಇಬ್ರಾಹಿಂಗೆ ತಿರುಗೇಟು
ಪಿಎಫ್‌ಐ ಬ್ಯಾನ್ ವಿಚಾರವಾಗಿ ಐದು ವರ್ಷ ಡಿವೋರ್ಸ್ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಇಬ್ರಾಹಿಂ ಬರೀ ಮದುವೆ ಮಾಡೋದು, ಡಿವೋರ್ಸ್ ಮಾಡಿಸುವುದರಲ್ಲೇ ಎಕ್ಸ್‌ಪರ್ಟ್. ಇದು ಗಂಭೀರ ವಿಚಾರವಾಗಿದೆ. ಪಿಎಫ್‌ಐ ಬಗ್ಗೆ ಗಮನಿಸಿಯೇ ಕೇಂದ್ರ ಸರ್ಕಾರ ಕ್ರಮ ಜರುಗಿಸಿದೆ. ತಮ್ಮ ಶಾಸಕನ ಮೇಲೆ ಕೊಲೆಗೆ ಯತ್ನಿಸಿದ ಸಂಘಟನೆಯ ಕೇಸ್‌ಗಳನ್ನೇ ಕಾಂಗ್ರೆಸ್ ವಾಪಸ್ ಪಡೆದುಕೊಂಡಿದೆ. ಇದಕ್ಕಿಂತ ಹೆಚ್ಚಿನ ತುಷ್ಟೀಕರಣ ರಾಜಕಾರಣ ಬೇರೆ ಇಲ್ಲ. ಇಂಥ ರಾಜಕಾರಣದಿಂದಲೇ ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳನ್ನು ಹುಟ್ಟುಹಾಕಿವೆ. ಇಂಥ ಸಂಘಟನೆಗಳನ್ನು ಧಮನಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ | Anganwadi | ರಾಜ್ಯದಲ್ಲಿ 4000 ಅಂಗನವಾಡಿ ನಿರ್ಮಾಣಕ್ಕೆ ಕ್ರಮ: ಸಿಎಂ ಬೊಮ್ಮಾಯಿ ಭರವಸೆ