Site icon Vistara News

Election 2023 | ಕನಕಪುರದಿಂದ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ ಡಿ.ಕೆ ಶಿವಕುಮಾರ್‌, ನಿಯಮ ಪಾಲಿಸಿದ ಕೆಪಿಸಿಸಿ ಅಧ್ಯಕ್ಷ

DKS application

ಬೆಂಗಳೂರು: ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರು ಕೆಪಿಸಿಸಿಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವನ್ನು ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೇ ಪಾಲಿಸುವ ಮೂಲಕ ಮೇಲ್ಪಂಕ್ತಿ ಹಾಕಿದ್ದಾರೆ.

ಚುನಾವಣೆ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ನವೆಂಬರ್‌ ೧೫ ಕೊನೆಯ ದಿನವಾಗಿತ್ತು. ಅವಧಿಯೊಳಗೆ ಸಾವಿರಕ್ಕೂ ಅಧಿಕ ಮಂದಿ ಅರ್ಜಿಗಳನ್ನು ಪಡೆದಿದ್ದರಾದರೂ ಮರಳಿ ಸಲ್ಲಿಕೆಯಾಗಿದ್ದು ೪೦೦ ಅರ್ಜಿ ಮಾತ್ರ. ಹಾಲಿ ಶಾಸಕರ ಪೈಕಿ ಕೇವಲ ೩೦ ಮಂದಿಯಷ್ಟೇ ಅರ್ಜಿ ಸಲ್ಲಿಸಿದ್ದರು. ಇಷ್ಟರ ನಡುವೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರೇ ಅರ್ಜಿ ಸಲ್ಲಿಸಿರಲಿಲ್ಲ. ವಿಸ್ತಾರ ನ್ಯೂಸ್‌ ಈ ಬಗ್ಗೆ ಪ್ರಶ್ನೆ ಮಾಡಿದ್ದರಿಂದ ಎಚ್ಚೆತ್ತ ಡಿ.ಕೆ. ಶಿವಕುಮಾರ್‌ ದಿನ ಅಂತ್ಯಗೊಳ್ಳುವ ಮೊದಲೇ ಅರ್ಜಿ ಸಲ್ಲಿಸಿದ್ದಾರೆ.

ಡಿಕೆ ಶಿವಕುಮಾರ್‌ ಪರವಾಗಿ ಅರ್ಜಿ ಸಲ್ಲಿಸಿದ ಅವರ ಆಪ್ತರು.

ಡಿ.ಕೆ. ಶಿವಕುಮಾರ್‌ ಅವರು ಪ್ರಸಕ್ತ ಇ.ಡಿ ವಿಚಾರಣೆಗಾಗಿ ದಿಲ್ಲಿಯಲ್ಲಿದ್ದಾರೆ. ಆದರೂ ವಿಸ್ತಾರ ನ್ಯೂಸ್‌ ವರದಿ ಗಮನಿಸಿ ತಕ್ಷಣವೇ ತಮ್ಮ ಆಪ್ತರ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಿಸಿದ್ದಾರೆ. ಡಿಕೆಶಿ ಪರವಾಗಿ ಪರಿಷತ್ ಸದಸ್ಯ ಎಸ್. ರವಿ, ಕನಕಪುರ ಬ್ಲಾಕ್ ಅಧ್ಯಕ್ಷರುಗಳಾದ ವಿಜಯ್ ದೇವ್ ಮತ್ತು ಮುೂರ್ತಿ, ಕೆಪಿಸಿಸಿ ಮಾಧ್ಯಮ ವಿಭಾಗದ ಸಂಯೋಜಕ ಜಿ.ಸಿ ರಾಜು ಅರ್ಜಿ ಸಲ್ಲಿಸಿದರು. ಕನಕಪುರ ಕ್ಷೇತ್ರದಿಂದ ಅವರು ಸ್ಪರ್ಧಿಸಲು ಅರ್ಜಿ ಸಲ್ಲಿಸಿದರು.

ದಿನಾಂಕ ವಿಸ್ತರಣೆ
ಈ ನಡುವೆ ಕೆಪಿಸಿಸಿ ಕಾಂಗ್ರೆಸ್‌ ಟಿಕೆಟ್‌ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ನವೆಂಬರ್‌ ೨೧ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿದಂತೆ ಹಲವು ಶಾಸಕರು ಇನ್ನೂ ಅರ್ಜಿ ಹಾಕದೆ ಇರುವುದರಿಂದ ಅವರಿಗೆ ಅವಕಾಶವಾಗುವಂತೆ ಸಮಯಾವಕಾಶ ನೀಡಲಾಗಿದೆ.

ಕೊನೆಯ ದಿನ ಹಲವು ಅಚ್ಚರಿ
ಅರ್ಜಿ ಸಲ್ಲಿಸಲು ಈ ಹಿಂದೆ ನಿಗದಿಪಡಿಸಲಾಗಿದ್ದ ದಿನವಾದ ಬುಧವಾರದಂದು ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾಗಿ ಇತ್ತೀಚೆಗಷ್ಟೆ ತಿಳಿಸಿದ್ದ ಕೋಲಾರ ಕ್ಷೇತ್ರಕ್ಕೆ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ಅರ್ಜಿ ಪಡೆದಿರುವುದು ವಿಶೇಷ. ಯಶವಂತಪುರ ಕ್ಷೇತ್ರದಿಂದ ಚಿತ್ರ ನಟಿ ಭಾವನಾ ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗದ ಸಾಗರ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಅವರ ಪುತ್ರಿ ನಂದಿನಿ ಅವರು ಸ್ಪರ್ಧೆಯ ಆಕಾಂಕ್ಷೆ ತೋರಿಸಿದ್ದಾರೆ.

ಇದನ್ನೂ ಓದಿ | Election 2023 | ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಯಶವಂತಪುರಕ್ಕೆ ಭಾವನಾ ಅರ್ಜಿ

Exit mobile version