Site icon Vistara News

Election 2023 | ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿಗೆ ಸೇರ್ಪಡೆ ಮುಹೂರ್ತ ಫಿಕ್ಸ್‌

muddahanumegowda 1

ತುಮಕೂರು: ಇತ್ತೀಚೆಗೆ ಕಾಂಗ್ರೆಸ್‌ ತೊರೆದಿದ್ದ ಮಾಜಿ ಸಂಸದ, ಹಿರಿಯ ರಾಜಕಾರಣಿ ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಇದೇ ನವೆಂಬರ್‌ ೩ರಂದು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ (Election 2023) ಕುಣಿಗಲ್‌ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಪಕ್ಷದಿಂದ ಕುಣಿಗಲ್‌ನಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದ ಮುದ್ದಾಹನುಮೇಗೌಡ, ಒಂದು ಬಾರಿ ಲೋಕಸಭೆಗೂ ಪ್ರವೇಶ ಪಡೆದಿದ್ದರು. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುನಃ ಕುಣಿಗಲ್‌ನಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರಿಗೆ ಕಾಂಗ್ರೆಸ್‌ನಿಂದ ಸೂಕ್ತ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದರು. ಪಕ್ಷ ತೊರೆಯುವ ವೇಳೆ ಮುಂದಿನ ನಡೆ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳದ ಮುದ್ದಹನುಮೇಗೌಡ ಅವರು, ಬಿಜೆಪಿಗೆ ಸಂಬಂಧಪಟ್ಟ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಅಕ್ಟೋಬರ್‌ ೧೧ರಂದು ತುಮಕೂರಿನಲ್ಲಿ ನಡೆದಿದ್ದ ಮಾಜಿ ಶಾಸಕ ಸುರೇಶ್‌ ಗೌಡ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇವರು, ಬಿಜೆಪಿ ಹಾಗೂ ಸುರೇಶ್‌ ಗೌಡ ಅವರ ಬಗ್ಗೆ ಹಾಡಿಹೊಗಳಿದ್ದರು. ಆಗಲೇ ಅವರು ಬಿಜೆಪಿ ಸೇರುವುದು ಖಚಿತ ಎಂದು ಹೇಳಲಾಗಿತ್ತು. ಈಗ ದಿನಾಂಕವೂ ನಿಗದಿಯಾದಂತಾಗಿದೆ.

ನವೆಂಬರ್‌ ೩ರಂದು ಬಿಜೆಪಿ ಸೇರ್ಪಡೆ
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇದೇ ನವೆಂಬರ್‌ ೩ರಂದು ಬೆಳಗ್ಗೆ ೮.೩೦ಕ್ಕೆ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ತಮ್ಮ ಅಪಾರ ಬೆಂಬಲಿಗರ ಜತೆಗೆ ಮುದ್ದಹನುಮೇಗೌಡ ಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.

ಇದನ್ನೂ ಓದಿ | ಬೊಮ್ಮಾಯಿಗೆ ಕುರುಬರ ಮೇಲೆ ಪ್ರೀತಿ ಇದ್ದರೆ ಎಸ್‌ಟಿಗೆ ಸೇರಿಸಲಿ, ಈಶ್ವರಪ್ಪರನ್ನು ಸಿಎಂ ಮಾಡಲಿ: ಸಿದ್ದು ಸವಾಲು

ದೇಶದ ಕಾಂಗ್ರೆಸ್‌ ಸಂಸದರ ಪೈಕಿ ಟಿಕೆಟ್‌ ತಪ್ಪಿದ್ದ ಏಕೈಕ ಸಂಸದ
೨೦೧೯ರ ಲೋಕಸಭಾ ಚುನಾವಣೆ ವೇಳೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಸಹ ಕೆಲವು ಹೊಂದಾಣಿಕೆಯನ್ನು ಮಾಡಿಕೊಳ್ಳಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಮೊಮ್ಮಗನಿಗೆ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ದೇವೇಗೌಡ ಅವರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಗೆಲುವಿಗೆ ಸುಲಭವಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ ತುಮಕೂರಿನಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂಬ ತೀರ್ಮಾನವನ್ನು ಪ್ರಕಟಿಸಿತು. ಇದರಿಂದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದ ಆಗಿನ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಸ್ಪರ್ಧೆಯಿಂದ ವಂಚಿತರಾದರು. ಈ ಮೂಲಕ ಇಡೀ ದೇಶದಲ್ಲಿ ಆಯ್ಕೆಯಾಗಿದ್ದ ಕಾಂಗ್ರೆಸ್‌ ಸಂಸದ ಪೈಕಿ ಟಿಕೆಟ್‌ ತಪ್ಪಿದ ಏಕೈಕ ವ್ಯಕ್ತಿ ಎಂಬ ಅಪಖ್ಯಾತಿಗೂ ಮುದ್ದಹನುಮೇಗೌಡ ಗುರಿಯಾದರು.

ಚುನಾವಣೆ ಬಳಿಕ ನಿರ್ಲಕ್ಷ್ಯ ಆರೋಪ
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಸೂಕ್ತ ಸ್ಥಾನಮಾನ ಕೊಡುವ ಭರವಸೆಯನ್ನು ಕಾಂಗ್ರೆಸ್‌ ವರಿಷ್ಠರು ನೀಡಿದ್ದರು. ಆದರೆ, ಅದನ್ನೂ ಸಹ ಈಡೇರಿಸಲಿಲ್ಲ, ನನಗೆ ಭೇಟಿ ಮಾಡಿ ಚರ್ಚೆ ನಡೆಸಲೂ ಅವಕಾಶ ನೀಡಿಲ್ಲ ಎಂದು ಮುದ್ದಹನುಮೇಗೌಡ ಆಕ್ರೋಶವನ್ನು ಹಲವು ಬಾರಿ ಹೊರಹಾಕಿದ್ದರು. ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಅಲ್ಲೂ ನಿರಾಸೆ ಕಾದಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್‌ನಿಂದ ಎಂಎಲ್ಎ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಟಿಕೆಟ್ ಸಿಗುವ ಯಾವುದೇ ಭರವಸೆ ಸಿಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಜಿ ಸಂಸದರು ಅಸಮಾಧಾನಗೊಂಡಿದ್ದರು.

ಟಿಕೆಟ್‌ ಕೊಟ್ಟರೆ ಮಾತ್ರ ಪಕ್ಷದಲ್ಲಿ ಉಳಿಯುವ ಷರತ್ತು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದ ಸಂದರ್ಭದಲ್ಲಿ ತಮಗೆ ಕುಣಿಗಲ್‌ ಕ್ಷೇತ್ರದಲ್ಲಿ ಟಿಕೆಟ್‌ ಕೊಡುವುದಾದರೆ ಮಾತ್ರ ಪಕ್ಷದಲ್ಲಿ ಉಳಿಯುತ್ತೇನೆ. ಇಲ್ಲವಾದರೆ ಪಕ್ಷ ತೊರೆಯುತ್ತೇನೆ ಎಂದು ಮುದ್ದಹನುಮೇಗೌಡ ಪಟ್ಟುಹಿಡಿದಿದ್ದರು. ಆದರೆ, ಉಭಯ ನಾಯಕರಿಂದ ಈ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲವಾಗಿದ್ದರಿಂದ ಕಾಂಗ್ರೆಸ್‌ ಅನ್ನು ತೊರೆದಿದ್ದರು.

ಹೈಕಮಾಂಡ್‌ ಹೇಳಿದರೂ ಹಿಂದೆ ಸರಿಯಲಾರೆ
2019ರಲ್ಲಿ ಯಾರಿಂದ ಟಿಕೆಟ್ ತಪ್ಪಿತು ಎಂಬುದನ್ನು ನಾನು ಹಲವು ಬಾರಿ ಹೇಳಿದ್ದೇನೆ. 1989ರಿಂದಲೂ ಪಕ್ಷದಲ್ಲಿ ನನಗೆ ಅನ್ಯಾಯವಾಗಿದೆ. ಹೀಗಾಗಿ ಮುಂದುವರಿಯಬಾರದು ಎಂದು ನಿರ್ಧಾರ ಮಾಡಿದ್ದೇನೆ. ಒಮ್ಮೆ ನಾನು ನಿರ್ಧಾರ ತೆಗೆದುಕೊಂಡ ಬಳಿಕ ಹೈಕಮಾಂಡ್‌ನಿಂದ ಕರೆ ಬಂದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಕ್ಷ ನನಗೆ ಹಲವು ಸ್ಥಾನ ಕೊಟ್ಟಿದೆ. ಅದಕ್ಕಿಂತಲೂ ಹೆಚ್ಚು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ನಾನು ಯಾರ ವಿರುದ್ಧವೂ ಮಾತನಾಡಲಾರೆ. ಅದು ನನ್ನ ಸ್ವಭಾವವೂ ಅಲ್ಲ ಎಂದು ಅವರು ಕಾಂಗ್ರೆಸ್‌ ತೊರೆಯುವ ದಿನ ಹೇಳಿಕೆ ನೀಡಿದ್ದರು. ಈಗ ನವೆಂಬರ್‌ ೩ರಂದು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ.

ಮುದ್ದಹನುಮೇಗೌಡ ಅವರು ಈಗ ಕುಣಿಗಲ್‌ ವಿಧಾನಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿಯಿಂದ ಕುಣಿಗಲ್‌ ಕ್ಷೇತ್ರದ ಟಿಕೆಟ್‌ ಲಭ್ಯವಾಗುವುದೇ ಎಂಬುದು ಸದ್ಯದ ಕುತೂಹಲವಾಗಿದೆ.

ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ಜೋಕರ್‌: ಸಿದ್ದರಾಮಯ್ಯ

Exit mobile version