ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ವತಿಯಿಂದ ಈ ಬಾರಿ ವಿಧಾನಸಭೆ ಚುನಾವಣೆಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚಿನವರು ಅರ್ಜಿ ಪಡೆದಿದ್ದಾರೆ. ಸುಮಾರು ನಾಲ್ಕು ನೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾಗಿ ಇತ್ತೀಚೆಗಷ್ಟೆ ತಿಳಿಸಿದ್ದ ಕೋಲಾರ ಕ್ಷೇತ್ರಕ್ಕೆ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅರ್ಜಿ ಪಡೆದಿರುವುದು ವಿಶೇಷ.
ಉಳಿದಂತೆ ರಾಜ್ಯದ ವಿವಿಧೆಡೆ, ರಾಜಕೀಯ ಹಿನ್ನೆಲೆಯ ಕುಟುಂಬದವರು ಅರ್ಜಿ ಪಡೆದಿದ್ದಾರೆ. ಒಂದೇ ಕ್ಷೇತ್ರಕ್ಕೆ 2-3 ಅರ್ಜಿಗಳನ್ನು ಪಡೆಯಲಾಗಿದೆ.
ಅರ್ಜಿ ಸಲ್ಲಿಸಲು ಇಂದು ಕೊನೆ ದಿನವಾಗಿದ್ದರೂ ಇನ್ನರೂ ಆರು ನೂರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ದಿನಾಂಕವನ್ನು ವಿಸ್ತರಣೆ ಮಾಡುವ ಸಾಧ್ಯತೆಯಿದೆ. ಈವರೆಗೂ 30 ಶಾಸಕರು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಅನೇಕ ಶಾಸಕರು, ಟಿಕೆಟ್ ಆಕಾಂಕ್ಷಿಗಳು ಸಲ್ಲಿಸುವವರು ಇದ್ದಾರೆ.
ಕೋಲಾರ ಕ್ಷೇತ್ರಕ್ಕೆ ಮಾಜಿ ಸಭಾಪತಿ ವಿ.ಆರ್ ಸುದರ್ಶನ ಅರ್ಜಿ ಪಡೆದಿದ್ದಾರೆ. ಆದರೆ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾದ ಬಳಿಕ ಅರ್ಜಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ. ವಿ.ಆರ್. ಸುದರ್ಶನ ಜತೆಗೆ ಗೋವಿಂದೇಗೌಡ, ಶ್ರೀನಿವಾಸ್ ಎಂಬುವವರು ಅರ್ಜಿ ಪಡೆದಿದ್ದಾರೆ.
ಸಿದ್ದರಾಮಯ್ಯ ಪುತ್ರ ಯತೀಂದ್ರ ಶಾಸಕರಾಗಿರುವ ವರುಣ ಹಾಗೂ ಕಳೆದ ಬಾರಿ ಸಿದ್ದರಾಮಯ್ಯ ಸೋಲುಂಡಿದ್ದ ಚಾಮುಂಡೇಶ್ವರಿ ಕ್ಷೇತ್ರದಿಂದ ಈವರೆಗೂ ಅರ್ಜಿ ಸಲ್ಲಿಕೆಯಾಗಿಲ್ಲ. ನಂಜನಗೂಡು ಕ್ಷೇತ್ರಕ್ಕೆ ಮಾಜಿ ಸಚಿವ ಎಚ್. ಸಿ. ಮಹದೇವಪ್ಪ , ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್ ಅರ್ಜಿ ಸಲ್ಲಿಸಿದ್ದಾರೆ.
ಪುಲಕೇಶಿ ನಗರದ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಇರುವಾಗಲೇ ಮಾಜಿ ಶಾಸಕ ಪ್ರಸನ್ನ ಕುಮಾರ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಖಂಡ ಶ್ರೀನಿವಾಸ್ ಮೂರ್ತಿ ಅರ್ಜಿ ಸಲ್ಲಿಕೆ ಮಾಡಬೇಕಿದೆ.
ಮೂಡಿಗೆರೆ ಕ್ಷೇತ್ರಕ್ಕೆ ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಪುತ್ರಿ ನಯನ ಅರ್ಜಿ ಸಲ್ಲಿಸಿದ್ದಾರೆ. ನಯನ ಮೊಟ್ಟಮ್ಮ ಜತೆಗೆ ನಾಗರತ್ನ, ಬಿನ್ನಾಡಿ ಪ್ರಭಾಕರ್ ಎಂಬುವವರು ಸಲ್ಲಿಕೆ ಮಾಡಿದ್ದಾರೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಮಹದೇವಪುರ ಕ್ಷೇತ್ರ ಹಾಗೂ ಸಕಲೇಶಪುರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕನಕಗಿರಿ ಕ್ಷೇತ್ರಕ್ಕೆ ಮಾಜಿ ಸಚಿವ ಶಿವರಾಜ್ ತಂಗಡಗಿ ಅರ್ಜಿ ಸಲ್ಲಿಸಿದ್ದಾರೆ, ನರಸೀಪುರ ಕ್ಷೇತ್ರಕ್ಕೆ ಡಾ. ಎಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್ ಅರ್ಜಿ ಸಲ್ಲಿಸಿದ್ದಾರೆ. ಎಚ್. ಡಿ.ಕೋಟೆಗೆ ಹಾಲಿ ಶಾಸಕ ಅನಿಲ್ ಚಿಕ್ಕಮಾದು, ಮಂಗಳೂರು ದಕ್ಷಿಣಕ್ಕೆ ಐವನ್ ಡಿಸೋಜ, ಮಂಗಳೂರು ಉತ್ತರಕ್ಕೆ ಮೋಯ್ದಿನ್ ಭಾವ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಒಂದೇ ಕುಟುಂಬದ ಮೂವರ ಅರ್ಜಿ
ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರಕ್ಕೆ ಒಂದೇ ಕುಟುಂಬದ ಮೂವರಿಂದ ಟಿಕೆಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಕಾಗೋಡು ತಿಮ್ಮಪ್ಪ, ಕಾಗೋಡು ಪುತ್ರಿ ಡಾ. ರಾಜನಂದಿನಿ, ಸಂಬಂಧಿ ಬೇಳೂರು ಗೋಪಾಲಕೃಷ್ಣರಿಂದ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದರ ಜತೆಗೆ ಬಿ. ಆರ್. ಜಯಂತ್, ರತ್ನಾಕರ್ ಹೊನಗೋಡು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್‌ಗಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡ ಇಬ್ಬರಿಂದಲೂ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಇದನ್ನೂ ಓದಿ | Congress Election plan | ಡಿಸೆಂಬರ್ ಒಳಗೆ 150 ಟಿಕೆಟ್ ಫೈನಲ್, 150 ಕ್ಷೇತ್ರ ಗೆಲ್ಲುವ ಗುರಿ: ಸಲೀಂ ಅಹಮದ್