ಬೆಂಗಳೂರು: ೨೦೨೩ರ ವಿಧಾನಸಭಾ ಚುನಾವಣೆ (Election 2023) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಯು ಗರಿಗೆದರುತ್ತಿದೆ. ಇನ್ನು ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಇನ್ನಿತರ ಹುದ್ದೆಗಳ ಭರ್ತಿಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಉಳಿಕೆ ಇರುವ ೫೦ಕ್ಕೂ ಹೆಚ್ಚು ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಚುರುಕುಗೊಂಡಿದ್ದು, ಇನ್ನೊಂದು ವಾರದ ಒಳಗೆ ಆದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಆರೇಳು ತಿಂಗಳಿಂದ ನೇಮಕ ಮಾಡದೇ ಮೌನ ವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಕ್ಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಚುನಾವಣೆ ಸಮಯದಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಸಿಎಂ ಬೊಮ್ಮಾಯಿ ಈಗಾಗಲೇ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಬಿಎಸ್‌ವೈ, ಚುನಾವಣೆ ಸಮಯ ಬಂದಿದೆ. ಆದರೆ, ಕಾರ್ಯಕರ್ತರಿಗೆ ಏಕೆ ಇನ್ನೂ ಅಧಿಕಾರವನ್ನು ನೀಡಿಲ್ಲ. ನಿಗಮ-ಮಂಡಳಿಗಳಿಗೆ ನೇಮಕ ಮಾಡಲು ವಿಳಂಬ ನೀತಿ ಏಕೆ? ಎಂದು ಪ್ರಶ್ನಿಸಿರುವ ಅವರು, ಕಾರ್ಯಕರ್ತರಿಗೆ ಅವಕಾಶಗಳನ್ನು ನೀಡಿ ಎಂದು ಸೂಚಿಸಿದ್ದರು ಎನ್ನಲಾಗಿದೆ.
ಕಾರ್ಯಕರ್ತರಿಂದ ಹೆಚ್ಚಿದ್ದ ಒತ್ತಡ
ಚುನಾವಣೆ ಹಿನ್ನೆಲೆಯಲ್ಲಿ ಬಾಕಿ ನಿಗಮ-ಮಂಡಳಿಗೆ ನೇಮಕ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ವೇಳೆ ಕಾರ್ಯಕರ್ತರಿಂದ ತೀವ್ರ ಒತ್ತಡಗಳು ಬಂದಿತ್ತು. ಸಾಕಷ್ಟು ಮನವಿಗಳು ಕೇಳಿಬಂದಿದ್ದವು. ಅಲ್ಲದೆ, ಕೆಲವು ನಾಯಕರೂ ಸಹ ಚುನಾವಣೆ ಹಿತದೃಷ್ಟಿಯಿಂದ ಶೀಘ್ರದಲ್ಲಿ ನೇಮಕ ಮಾಡಬೇಕೆಂಬ ಆಗ್ರಹವನ್ನೂ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅಶೋಕ್ ಕಶ್ಯಪ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರೆ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ರಾಜು ಎಂ. ತಳ್ಳೂರು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು.
ವಾರದೊಳಗೆ ನೇಮಕ
ಬಿಜೆಪಿ ರಾಜ್ಯಾಧ್ಯಕ್ಷರಿಂದಲೂ ಸಿಎಂ ಪಟ್ಟಿ ಪಡೆದುಕೊಂಡಿದ್ದಾರೆ. ಪಕ್ಷ ನಿಷ್ಠ ಕಾರ್ಯಕರ್ತರು, ವಲಯವಾರು, ಜಿಲ್ಲಾವಾರು ಪ್ರಾತಿನಿಧ್ಯವನ್ನು ಆಧರಿಸಿ ನೇಮಕ ಮಾಡಲು ಮುಂದಾಗಿದ್ದಾರೆನ್ನಲಾಗಿದೆ. ರಾಜ್ಯದಲ್ಲಿ ಒಂದು ಹಂತದ ನಿರ್ಧಾರಕ್ಕೆ ಬಂದು ಬಳಿಕ ವರಿಷ್ಠರ ಗಮನಕ್ಕೆ ತಂದು ನಿಗಮ-ಮಂಡಳಿ ಅಧ್ಯಕ್ಷರ ನೇಮಕವನ್ನು ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಒಂದು ವಾರದೊಳಗೆ ಉಳಿದ ೫೦ಕ್ಕೂ ಹೆಚ್ಚು ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕವನ್ನು ಸಿಎಂ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಮಾಧ್ಯಮಗಳು ಜನರ ಆಶೋತ್ತರ ಗಮನದಲ್ಲಿರಿಸಿ ಕೆಲಸ ಮಾಡಲಿ: ಸಿಎಂ ಬೊಮ್ಮಾಯಿ ಆಶಯ