Site icon Vistara News

Election 2023 | 12 ವರ್ಷದ ನಂತರ ರಾಜಕೀಯಕ್ಕೆ ಜನಾರ್ದನ ರೆಡ್ಡಿ ಎಂಟ್ರಿ ಕೊಡ್ತಾರಾ?

OMC Mining Case

ಶಶಿಧರ ಮೇಟಿ, ಬಳ್ಳಾರಿ
ಗಣಿಗಾರಿಕೆ ಆರೋಪದಿಂದಾಗಿ ರಾಜಕೀಯ ಚಟುವಟಿಕೆಯಿಂದದ ಅಂತರ ಕಾಯ್ದುಕೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Election 2023) ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಕೊಡುತ್ತಾರೆಂಬ ಸುದ್ದಿಯು ದಟ್ಟವಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದ ನಂತರದಲ್ಲಿ ಜನಾರ್ದನ ರೆಡ್ಡಿ ದೃಢ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಪಾಳೆಯದಲ್ಲಿ ರೆಡ್ಡಿ ತಂತ್ರಗಾರಿಕೆಯ ಮೇಲೆ ಹೆಚ್ಚಿನ ಭರವಸೆ ಇದೆ. ಇವರ ಪ್ರವೇಶವಾದರೆ ಎದುರಾಳಿಗಳಿಗೆ ನಡುಕ ಉಂಟಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರ ಪ್ರಾರಂಭವಾಗಿದೆ.

ರೆಡ್ಡಿ ಗಂಗಾವತಿಯಲ್ಲಿ ವಾಸ್ತವ್ಯ?
ಜನಾರ್ದನ ರೆಡ್ಡಿಗೆ ನ.೬ರವರೆಗೆ ಬಳ್ಳಾರಿಯಲ್ಲಿ ಇರಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ನಂತರದಲ್ಲಿ ನ್ಯಾಯಾಲಯದ ನಿರ್ಧಾರ ಮೇಲೆ ರೆಡ್ಡಿಯವರ ನಡೆ ನಿರ್ಧಾರವಾಗಲಿದೆ. ರೆಡ್ಡಿಯವರು ಬಳ್ಳಾರಿ ಬಿಟ್ಟರೂ ಬೆಂಗಳೂರಿಗೆ ಹೋಗದೆ ಬಳ್ಳಾರಿಗೆ ಅನತಿ ದೂರದಲ್ಲಿರುವ ಗಂಗಾವತಿಯಲ್ಲಿ ವಾಸ್ತವ್ಯ ಹೂಡುವ ಬಗ್ಗೆ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿದರೆ, ಮುಂದಿನ ಚುನಾವಣೆಯಲ್ಲಿ ರೆಡ್ಡಿಯವರು ಬಳ್ಳಾರಿಯಲ್ಲಿ ಇಲ್ಲದಿದ್ದರೂ ಅವರು ರೂಪಿಸುವ ಕಾರ್ಯತಂತ್ರ ಆಪ್ತರಿಗೆ ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ಚಿಂತನೆಗಳು ನಡೆದಿವೆ ಎಂಬ ಮಾತುಗಳು ಅವರ ಆಪ್ತವಲಯದಲ್ಲಿ ಹರಿದಾಡುತ್ತಿದೆ.

ಅಂದಿನ ಬಿಜೆಪಿಗೆ ಇವರೇ ಕಾರಣಕರ್ತರು?
೨೦೦೮ರ ವಿಧಾನಸಭೆಯ ಚುನಾವಣೆಯಲ್ಲಿ ಮಾತ್ರ ಅಂದಿನ ಅವಿಭಜಿತ ಬಳ್ಳಾರಿ ಜಿಲ್ಲೆಯ ೯ ಕ್ಷೇತ್ರಗಳ ಪೈಕಿ ೮ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ರಾಜ್ಯದಲ್ಲಿ ಅಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರೀರಾಮುಲು ರೆಡ್ಡಿ ಸಹೋದರರು ಕಾರಣ ಎಂದು ಬಿಜೆಪಿ ಕೆಲವು ರಾಜಕಾರಣಿಗಳು ಬಹಿರಂಗವಾಗಿಯೇ ಹೇಳಿದ್ದಾರೆ. ಕಾಂಗ್ರೆಸ್‌ನ ಭದ್ರ ಕೋಟೆಯಲ್ಲಿ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಪ್ರಭಾವದಿಂದ ಗಣಿನಾಡಿನಲ್ಲಿ ಕಮಲ ಅರಳಿತ್ತು. ನಂತರದಲ್ಲಿ ನಡೆದ ಬೆಳವಣಿಗೆಯಲ್ಲಿ ಗಣಿಗಾರಿಕೆ ಆರೋಪದಿಂದ ಜನಾರ್ದನ ರೆಡ್ಡಿ ಅನಿವಾರ್ಯವಾಗಿ ಅಂತರ ಕಾಯ್ದುಕೊಳ್ಳುವಂತಾಗಿತ್ತು.

ಇದನ್ನೂ ಓದಿ | ಕವಿ ಸಮ್ಮೇಳನ | ಅ.21ರಿಂದ ಬಳ್ಳಾರಿಯಲ್ಲಿ ಸಂಗಂ ವಿಶ್ವ ಕವಿ ಸಮ್ಮೇಳನ, 17 ದೇಶಗಳ ಕವಿಗಳು ಭಾಗಿ, ಸಂಗಂ ಪುರಸ್ಕಾರ ಪ್ರದಾನ

ಸುಳಿವು ಕೊಟ್ಟರೂ, ನಡೆ ಮಾತ್ರ ನಿಗೂಢ
ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ಹೊರಗೆ ಕಾಣಿಸಿಕೊಳ್ಳುತ್ತಿರುವುದು, ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೆ, ಕೃಷ್ಣಾನಗರ ಕ್ಯಾಂಪಿನಲ್ಲಿ ಅವರ ಅಭಿಮಾನಿಗಳು ರೆಡ್ಡಿಯವರ ತುಲಾಭಾರ ಮಾಡಿದ್ದರು. ನಂತರದಲ್ಲಿ ಕುರುಗೋಡು ತಾಲೂಕಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿ ಬಹಿರಂಗವಾಗಿ ಆಡಿರುವ ಕೆಲವೊಂದು ಮಾತುಗಳು ಜನಾರ್ದನ ರೆಡ್ಡಿಯವರು ರಾಜಕೀಯ ಪ್ರವೇಶ ಪಡೆಯುತ್ತಾರೆಂಬ ಮಾತುಗಳಿಗೆ ಇಂಬು ನೀಡುವಂತಿದೆ. ಆದರೆ, ಅವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿರುವುದು ಸಹ ಗೊಂದಲಕ್ಕೆ ಕಾರಣವಾಗಿದೆ.

ಬಳ್ಳಾರಿ ಗ್ರಾಮೀಣದ ಮೇಲೆ ಪ್ರಭಾವ ಸಾಧ್ಯತೆ:
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮುಂದಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ರೆಡ್ಡಿ ಸಹೋದರರು ಮತ್ತು ಸಚಿವ ಶ್ರೀರಾಮುಲು ಅವರಿಗೆ ಬಲ ಬರಲಿದೆ. ಅವರ ಮಧ್ಯೆ ಸಮತೋಲನ ಕಾಯ್ದುಕೊಂಡು ಬಿಜೆಪಿ ಮುಖಂಡರೊಂದಿಗೆ ಬಾಂಧವ್ಯ ಹೊಂದಿದ್ದೇ ಆದಲ್ಲಿ, ಚುನಾವಣೆ ತಂತ್ರಗಾರಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಪಕ್ಷದಲ್ಲಿ ಅಸಮಾಧಾನವನ್ನು ಹತ್ತಿಕ್ಕುವ ಶಕ್ತಿಯು ರೆಡ್ಡಿಯ ತಂತ್ರಗಾರಿಕೆಯಲ್ಲಿ ಅಡಗಿದೆ ಎಂಬುದು ಈ ಹಿಂದೆ ಸಾಬೀತಾಗಿದೆ. ರೆಡ್ಡಿಯು ಚುನಾವಣೆಯ ತಂತ್ರಗಾರಿಕೆ ನಡೆಸುವಲ್ಲಿ ಸಿದ್ದಹಸ್ತರೆಂಬುದು ಪ್ರತಿಪಕ್ಷಗಳು ಈ ಹಿಂದಿನ ಒಂದರೆಡು ಚುನಾವಣೆಯಲ್ಲಿ ನೋಡಿದ್ದಾರೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಎಂಟ್ರಿಯ ಮೇಲೆ ಎದುರಾಳಿಗಳ ದೃಷ್ಟಿಯು ನೆಟ್ಟಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೇಲೂ ರೆಡ್ಡಿ ತಂತ್ರಗಾರಿಕೆ ಪ್ರಭಾವ ಬೀಳುವುದನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಿದೆ ರಾಜಕೀಯ ವಲಯದ ವಿಶ್ಲೇಷಣೆ.

ಈಗಾಗಲೇ ೧೨ ವರ್ಷದಿಂದ ರಾಜಕೀಯದಿಂದ ದೂರು ಉಳಿದು ಹೆಚ್ಚಾಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಆದರೆ, ಈಗ ಚುನಾವಣೆ ಸನಿಹವಾಗುತ್ತಿರುವುದರಿಂದ ಗಂಗಾವತಿ ಅಥವಾ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಜಿಲ್ಲೆಗಳಲ್ಲಿ ಉಳಿದುಕೊಳ್ಳುವ ಲೆಕ್ಕಾಚಾರದಲ್ಲಿ ಜನಾರ್ದನ ರೆಡ್ಡಿ ಇದ್ದು, ಇದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಇದಕ್ಕೆ ಮುಂದಿನ ಕೆಲ ದಿನಗಳವರೆಗೆ ಕಾದು ನೋಡಬೇಕಾಗಿದೆ.

ಇದನ್ನೂ ಓದಿ | ಗಣಿನಾಡಿಂದ ಬೆಂಗಳೂರು, ಹೈದರಾಬಾದ್‌ಗೆ ಮತ್ತೆ ಹಾರಲಿದೆ ವಿಮಾನ, ಅ. 30ರಿಂದ ಅಲಯನ್ಸ್‌ ಏರ್‌ ಹಾರಾಟ

Exit mobile version