ವಿವೇಕ ಮಹಾಲೆ, ಶಿವಮೊಗ್ಗ
ತುಂಗಾ ನದಿ ತಟದಲ್ಲಿರುವ ಅಪ್ಪಟ ಮಲೆನಾಡ ಕ್ಷೇತ್ರ ತೀರ್ಥಹಳ್ಳಿ. ಈ ವಿಧಾನಸಭಾ ಕ್ಷೇತ್ರದ್ದು ವಿಭಿನ್ನ ದಾಖಲೆ. ಇಲ್ಲಿ ಗೆದ್ದು ಶಾಸಕರಾದವರು ಸಿಎಂ ಹುದ್ದೆಯಿಂದ ಸ್ಪೀಕರ್ ತನಕ ಎಲ್ಲ ಜವಾಬ್ದಾರಿ ನಿಭಾಯಿಸಿದ್ದಾರೆ. ಮುಖ್ಯಮಂತ್ರಿಯಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ವಿಧಾನಸಭೆಯ ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಹಬ್ಬಿದ ತೀರ್ಥಹಳ್ಳಿಯು ರಾಜ್ಯದ ಅತಿದೊಡ್ಡ ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು. ಈ ಹಿಂದೆ ಹೊಸನಗರ ಕ್ಷೇತ್ರ ರಾಜ್ಯದ ಅತಿ ದೊಡ್ಡ ಕ್ಷೇತ್ರವೆನಿಸಿತ್ತು. ಆದರೆ, 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊಸನಗರ ಕ್ಷೇತ್ರ ಇತಿಹಾಸದ ಪುಟಕ್ಕೆ ಸೇರಿದೆ.
ಚುನಾವಣೆ ಇತಿಹಾಸ
ತೀರ್ಥಹಳ್ಳಿ ಕ್ಷೇತ್ರದಿಂದ ಕಳೆದ 14 ಚುನಾವಣೆಗಳಲ್ಲಿ ಕಾಂಗ್ರೆಸ್ 5 ಬಾರಿ, ಬಿಜೆಪಿ 4 ಬಾರಿ, ಸಮಾಜವಾದಿ ಪಾರ್ಟಿ 3 ಬಾರಿ, ಜನತಾ ಪಕ್ಷ ಮತ್ತು ಜನತಾ ದಳ ತಲಾ ಒಮ್ಮೆ ಜಯಗಳಿಸಿದೆ. ಮೈಸೂರು ರಾಜ್ಯವಿದ್ದಾಗ ಮೊದಲ ವಿಧಾಸಭೆಗೆ ತೀರ್ಥಹಳ್ಳಿಯಿಂದ ಕಡಿದಾಳು ಮಂಜಪ್ಪ ಆಯ್ಕೆಯಾಗಿದ್ದರು. ಕರ್ನಾಟಕ ರಾಜ್ಯ ಉದಯವಾದ ನಂತರ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎ.ಆರ್. ಬದ್ರಿನಾರಾಯಣ ಗೆದ್ದಿದ್ದರು. ಹಾಲಿ ಶಾಸಕರಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ನಾಲ್ಕು ಬಾರಿ ಗೆಲ್ಲುವ ಮೂಲಕ ಅತಿ ಹೆಚ್ಚು ಬಾರಿ ಗೆದ್ದಿರುವ ಶಾಸಕರಾಗಿದ್ದಾರೆ. 1994ರಲ್ಲಿ ಮೊದಲು ಗೆಲುವು ದಾಖಲಿಸಿದ್ದ ಆರಗ ಜ್ಞಾನೇಂದ್ರ ಸತತ ಮೂರು ಚುನಾವಣೆಯಲ್ಲಿ ಜಯಗಳಿಸಿದ್ದರು. ಆದರೆ, 2008 ಮತ್ತು 2013ರಲ್ಲಿ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ ಗೆದ್ದಿದ್ದರು. ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಕಿಮ್ಮನೆ ರತ್ನಾಕರ ಅವರ ಹ್ಯಾಟ್ರಿಕ್ ಸಾಧನೆಯ ಕನಸಿಗೆ 2018ರ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ತಣ್ಣೀರೆರೆಚಿದರು.
ಹಿರಿಯ ಶಾಸಕನಿಗೆ ಕೊನೆಗೂ ಮಂತ್ರಿ ಪಟ್ಟ
ಸುಮಾರು 40 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ್ದ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಕೊನೆಗೂ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಗೃಹಮಂತ್ರಿಯಾಗಿದ್ದಾರೆ. ಒಟ್ಟು 9 ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಜ್ಞಾನೇಂದ್ರ 4 ಬಾರಿ ಗೆಲುವು ಸಾಧಿಸಿದ್ದಾರೆ. 1983ರ ಚುನಾವಣೆಯಲ್ಲಿ ಬಿ. ಎಸ್. ಯಡಿಯೂರಪ್ಪ ಜತೆ ಚುನಾವಣೆಗೆ ಸ್ಪರ್ಧೆ ಮಾಡಿದ ಕೆಲವೇ ನಾಯಕರಲ್ಲಿ ಆರಗ ಜ್ಞಾನೇಂದ್ರ ಸಹ ಒಬ್ಬರು. ಆದರೆ ಜಿಲ್ಲೆಯವರೇ ಆದ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ಲಭಿಸುತ್ತಿದ್ದರಿಂದ ಜಿಲ್ಲೆಯ ಕೋಟಾದಡಿ ಆರಗ ಜ್ಞಾನೇಂದ್ರ ಅವರಿಗೆ ಸಚಿವಗಿರಿ ಕೈತಪ್ಪುತ್ತಿತ್ತು. ಪಕ್ಷನಿಷ್ಠೆ, ಜನಪರ ಹೋರಾಟ, ಸರಳ ಜೀವನ ಶೈಲಿ, ಜನರೊಂದಿಗೆ ಸದಾ ಬೆರೆಯುವ ಆರಗ ಜ್ಞಾನೇಂದ್ರಗೆ ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದಕ್ಕೆ ಈಗ ಸಚಿವ ಸ್ಥಾನ ಸಿಕ್ಕಿದೆ.
ಕಿಮ್ಮನೆ ವರ್ಸಸ್ ಆರ್‌ಎಂಎಂ
ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಗೃಹಸಚಿವ ಆರಗ ಜ್ಞಾನೇಂದ್ರ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮತ್ತು ಜೆಡಿಎಸ್‌ನಿಂದ ವಲಸೆ ಬಂದಿರುವ ಆರ್.ಎಂ. ಮಂಜುನಾಥಗೌಡ ಅವರ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆದಿದೆ. ಇವರಿಬ್ಬರೂ ಹಾವು-ಮುಂಗುಸಿಯಂತೆ ಕ್ಷೇತ್ರದಲ್ಲಿ ವರ್ತಿಸುತ್ತಿರುವುದು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸಿದೆ.
2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ಆರ್.ಎಂ. ಮಂಜುನಾಥಗೌಡ ನಂತರ 2018ರ ಚುನಾವಣೆಗೆ ಟಿಕೆಟ್ ಆಕಾಂಕ್ಷಿತರಾಗಿ ಅಂದು ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಮೂಲಕ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಆದರೆ, ಅಂತಿಮ ಸಮಯದಲ್ಲಿ ಹಾಲಿ ಶಾಸಕರಾಗಿದ್ದ ಕಿಮ್ಮನೆ ರತ್ನಾಕರ ಅವರಿಗೇ ಟಿಕೆಟ್ ಖಾತ್ರಿಯಾದಾಗ ಜೆಡಿಎಸ್‌ನಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಅವರ ಮೂಲಕ ಮತ್ತೊಮ್ಮೆ ಟಿಕೆಟ್ ಆಕಾಂಕ್ಷಿತರಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಕಿಮ್ಮನೆ ರತ್ನಾಕರ ಅವರು ಸಿದ್ದರಾಮಯ್ಯ ಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ. ಮಂಜುನಾಥಗೌಡ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ವೇದಿಕೆ ಸಿಕ್ಕಾಗಲೆಲ್ಲ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರ ಹಾಕುತ್ತಿದ್ದಾರೆ. ಬಹಿರಂಗ ಪತ್ರ ಕೂಡ ಬರೆದಿದ್ದಾರೆ. ಇವರಿಬ್ಬರ ಮುನಿಸು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಇರಿಸುಮುರಿಸು ಉಂಟುಮಾಡಿದೆ. ಟಿಕೆಟ್ ಘೋಷಣೆಯ ನಂತರವೂ ಹೀಗೆಯೇ ಮುಂದುವರಿದರೆ ಲಾಭ ಬಿಜೆಪಿಗೆ ದಕ್ಕಿದರೂ ಆಶ್ಚರ್ಯವಿಲ್ಲ.
ಪಾದಯಾತ್ರೆ ಪಾಲಿಟಿಕ್ಸ್
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕಿಮ್ಮನೆ ರತ್ನಾಕರ ಮತ್ತು ಆರ್.ಎಂ. ಮಂಜುನಾಥ ಗೌಡ ಇಬ್ಬರೂ ಪಾದಯಾತ್ರೆ ಪಾಲಿಟಿಕ್ಸ್ ಆರಂಭಿಸಿದ್ದಾರೆ. ಇಬ್ಬರೂ ಈಗಿನಿಂದಲೇ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪಾದಯಾತ್ರೆ ಹಾಗೂ ಹೋರಾಟಗಳನ್ನು ನಡೆಸುವ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ತಾಲೂಕಿನ ನೆಟ್‌ವರ್ಕ್ ಸಮಸ್ಯೆ, ರೈತರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ, ಗೃಹ ಸಚಿವರ ವೈಫಲ್ಯ ಸೇರಿದಂತೆ ಹಲವು ವಿಷಯಗಳನ್ನಿಟ್ಟುಕೊಂಡು ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸಿದ್ದಾರೆ. ಪಠ್ಯಪುಸ್ತಕ ವಿವಾದ ಹಿನ್ನೆಲೆ ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೂ ಪಾದಯಾತ್ರೆ ನಡೆಸಿದ್ದರು. ಈ ಹಿಂದೆ ಶರಾವತಿ ಮುಳುಗಡೆ ರೈತರ ಸಮಸ್ಯೆ ಪರಿಹರಿಸುವಂತೆ ಪಾದಯಾತ್ರೆ ನಡೆಸಿದ್ದ ಆರ್.ಎಂ.ಮಂಜುನಾಥ ಗೌಡ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಿನಲ್ಲಿ ಪಾದಯಾತ್ರೆ ಆಯೋಜಿಸಿದ್ದರು. ಈ ಪಾದಯಾತ್ರೆ ವಿರೋಧಿಸಿ ಬಹಿರಂಗ ಪತ್ರ ಬರೆದಿದ್ದ ಕಿಮ್ಮನೆ ರತ್ನಾಕರ ಕೂಡ ಇದೀಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಿನಲ್ಲಿ ಪ್ರತ್ಯೇಕ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್‌ಗೆ ಮಂಜುನಾಥ್ ಗೌಡರವರು ಸೇರ್ಪಡೆಯಾದಾಗಿನಿಂದ ತೀರ್ಥಹಳ್ಳಿಯಲ್ಲಿ ಎರಡು ಗುಂಪು ಸೃಷ್ಟಿಯಾಗಿದೆ. ಆದರೆ, ಈ ಕುರಿತು ತುಟಿಪಿಟಕ್ ಎನ್ನದ ಜಿಲ್ಲಾ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷರ ಮೇಲೆ ವಿವಾದದ ಭಾರಹಾಕಿ ಸುಮ್ಮನಾಗಿದ್ದಾರೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಆರಗ ಜ್ಞಾನೇಂದ್ರ (ಬಿಜೆಪಿ)
2. ಕಿಮ್ಮನೆ ರತ್ನಾಕರ, ಆರ್.ಎಂ.ಮಂಜುನಾಥ ಗೌಡ (ಕಾಂಗ್ರೆಸ್)
3. ಯಡ್ಯೂರ್ ರಾಜಾರಾಮ
ಇದನ್ನೂ ಓದಿ | ಎಲೆಕ್ಷನ್ ಹವಾ | ಶಿವಮೊಗ್ಗ ಗ್ರಾಮಾಂತರ | ಹೆಚ್ಚುತ್ತಲೇ ಇದೆ BJP ಗೆಲುವಿನ ಅಂತರ, ಅವಕಾಶಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಕಾತರ