ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿವೆ. ಹೀಗಾಗಿ ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಈ ನಡುವೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.29ರಿಂದ ಈವರೆಗೆ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ನಗದು ಸೇರಿ ವಿವಿಧ ವಸ್ತುಗಳ ಮೌಲ್ಯ 100 ಕೋಟಿ ರೂಪಾಯಿ ಗಡಿ ದಾಡಿದೆ.
ಚುನಾವಣಾ ಆಯೋಗದ ಮಾಹಿತಿಯಂತೆ ಏ.9ರವರೆಗೆ 11 ದಿನಗಳಲ್ಲಿ ಬರೋಬ್ಬರಿ 99.18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ ಸೋಮವಾರ ಕೂಡ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದ ಜಪ್ತಿ ಮಾಡಿರುವ ವಸ್ತುಗಳ ಮೌಲ್ಯ ಸುಮಾರು 100 ಕೋಟಿ ರೂಪಾಯಿ ಮೀರಿದೆ.
ಒಟ್ಟು 11 ದಿನಗಳಲ್ಲಿ 36.8 ಕೋಟಿ ರೂಪಾಯಿ ನಗದು, 15.46 ಕೋಟಿ ರೂ. ಮೌಲ್ಯದ ಉಡುಗೊರೆಗಳು, 30 ಕೋಟಿ ರೂಪಾಯಿ ಮೌಲ್ಯದ 5.2 ಲಕ್ಷ ಲೀಟರ್ ಮದ್ಯ, 15 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ 2.5 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ಸೇರಿ ಒಟ್ಟು 99.18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಶಕ್ಕೆ ಪಡೆಯಲಾಗಿದೆ ಎಂದು ಭಾನುವಾರ ಚುನಾವಣಾ ಆಯೋಗ ಮಾಹಿತಿ ನೀಡಿತ್ತು.
ಇದನ್ನೂ ಓದಿ | Bangalore Airport: ಮಲೇಶಿಯಾ ಪ್ರಯಾಣಿಕರ ಒಳಉಡುಪಿನಲ್ಲಿತ್ತು ಫಳ ಫಳ ಹೊಳೆಯುವ ಚಿನ್ನ!
ದಾಖಲೆ ಇಲ್ಲದ 2.1 ಕೋಟಿ ರೂಪಾಯಿ ವಶಕ್ಕೆ
ಬಾಗಲಕೋಟೆ: ಜಮಖಂಡಿ ತಾಲೂಕಿನ ಹುನ್ನೂರು ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.1 ಕೋಟಿ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಧೋಳದಿಂದ ಹಿಪ್ಪರಗಿ-ಅಥಣಿ ಮಾರ್ಗದಲ್ಲಿ ಸಹಕಾರಿ ಬ್ಯಾಂಕಿನ ಹಣ ಬೇರೆ ಬೇರೆ ಶಾಖೆಗೆ ಹಂಚಲು ಸಿಬ್ಬಂದಿ ಹೋಗುತ್ತಿದ್ದರು ಎನ್ನಲಾಗಿದೆ. ಆದರೆ, ಸೂಕ್ತ ದಾಖಲೆ ಇಲ್ಲದ ಕಾರಣ ಬೊಲೆರೋ ವಾಹನದಲ್ಲಿ ಸಾಗಣೆ ಮಾಡುತ್ತಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚನ್ನಪಟ್ಟಣದಲ್ಲಿ 38 ಲಕ್ಷ ರೂಪಾಯಿ ಜಪ್ತಿ
ರಾಮನಗರ: ಚನ್ನಪಟ್ಟಣ ತಾಲೂಕಿನ ಜಗದಾಪುರ ಚೆಕ್‌ಪೋಸ್ಟ್‌ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 38 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮಳವಳ್ಳಿ ಕಡೆಯಿಂದ ಹಲಗೂರು ಮಾರ್ಗವಾಗಿ ಬರುತ್ತಿದ್ದ ಕಾರಿನಿಂದ ಪೊಲೀಸರು ಹಣ ವಶಕ್ಕೆ ಪಡೆದಿದ್ದು, ರಾಮನಗರ ಐಟಿ ಅಧಿಕಾರಿಗಳಿಂದ ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಹಣದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ಬಸ್‌ನಲ್ಲಿ ಸಾಗಿಸುತ್ತಿದ್ದ 12.73 ಲಕ್ಷ ರೂಪಾಯಿ ವಶಕ್ಕೆ
ಯಾದಗಿರಿ: ನಗರದ ಗಂಜ್ ಪ್ರದೇಶದಲ್ಲಿ ಬಸ್‌ನಲ್ಲಿ ಸಾಗಿಸುತ್ತಿದ್ದ 12.73 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಯಾದಗಿರಿ ನಗರ ಠಾಣೆ ಪಿಎಸ್‌ಐ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಚಂದಪ್ಪ ಚವ್ಹಾಣ ಎಂಬುವವರ ಬಳಿಯಿಂದ ಹಣ ಜಪ್ತಿ ಮಾಡಲಾಗಿದೆ.
ಅಂಕೋಲಾದಲ್ಲಿ ಚರಂಡಿಯೊಳಗೆ ಬಚ್ಚಿಟ್ಟಿದ್ದ 2.4 ಲಕ್ಷ ರೂ. ಮೌಲ್ಯದ ಮದ್ಯ
ಕಾರವಾರ: ಚರಂಡಿ ಕಾಲುವೆಯೊಳಗೆ ಅಕ್ರಮವಾಗಿ ಬಚ್ಚಿಟ್ಟಿದ್ದ ಸುಮಾರು 2.4 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ. ತಾಲೂಕಿನ ಹಾರವಾಡ ಗ್ರಾಮದ ಸೀಬರ್ಡ್ ಕಾಲೊನಿಯಲ್ಲಿ ಅಕ್ರಮ ಗೋವಾ ಮದ್ಯ ಪತ್ತೆಯಾಗಿದ್ದು, 345 ಲೀಟರ್ ಗೋವಾ ಮದ್ಯ ಮತ್ತು 80 ಲೀಟರ್ ಗೋವಾ ಫೆನ್ನಿಯನ್ನು ಅಬಕಾರಿ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ವಶಕ್ಕೆ ಪಡೆದ ವಸ್ತುಗಳ ಒಟ್ಟೂ ಮೌಲ್ಯ 2,42,080 ರೂಪಾಯಿ ಆಗಿದ್ದು, ಪ್ರಕರಣ ಸಂಬಂಧ ಆರೋಪಿ ಯಾರೆಂದು ಪತ್ತೆಯಾಗಿಲ್ಲ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ನಿರೀಕ್ಷಕ ರಾಹುಲ್ ನಾಯಕ ನೇತೃತ್ವದಲ್ಲಿ ದಾಳಿ ನಡೆಸಿದ ತಂಡದಲ್ಲಿ ಈರಣ್ಣ ಕುರುಬೇಟ್, ಶ್ರೀಶೈಲ್ ಹಡಪ, ಗಿರೀಶ ಅರೆವಾಳೆ, ವಿನಾಯಕ ನಾಯ್ಕ ಇದ್ದರು. ಅಬಕಾರಿ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Dog thieves In Bengaluru: ಶ್ವಾನ ಮಾಲೀಕರೇ Be Alert; ಬೆಂಗಳೂರಲ್ಲಿ ಹೆಚ್ಚಾಯ್ತು ನಾಯಿ ಕಳ್ಳರ ಹಾವಳಿ
ಎಟಿಎಂಗಳಿಗೆ ಸಾಗಿಸುತ್ತಿದ್ದ 2.22 ಕೋಟಿ ರೂಪಾಯಿ ಜಪ್ತಿ
ಕೊಪ್ಪಳ: ನಿಯಮ ಪಾಲಿಸದೆ ಎಟಿಎಂಗಳಿಗೆ ಭರ್ತಿ ಮಾಡಲು ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ ಒಟ್ಟು 2.22 ಕೋಟಿ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಂದು ವಾಹನದಲ್ಲಿದ್ದ 1.66 ಕೋಟಿ ರೂಪಾಯಿ ಹಾಗೂ ಇನ್ನೊಂದು ವಾಹನದಲ್ಲಿದ್ದ 56 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗನ್ ಮ್ಯಾನ್, ಭದ್ರತಾ ಸಿಬ್ಬಂದಿ ಇಲ್ಲದೆ ವಾಹನಗಳಲ್ಲಿ ಹಣ ಸಾಗಿಸುತ್ತಿದ್ದರಿಂದ ಹಣವನ್ನು ವಶಕ್ಕೆ ಪಡೆಯಲಾಗಿದೆ.