Site icon Vistara News

Electric Shock | ನವರಾತ್ರಿಗೆ ಕರೆಂಟ್‌ ಶಾಕ್; ಸರ್ಕಾರಕ್ಕೆ ಎಚ್‌ಡಿಕೆ ಟ್ವೀಟ್ಮೆಂಟ್‌!

hdk power

ಬೆಂಗಳೂರು: ಬಿಜೆಪಿ ಸರ್ಕಾರ ಕೇಂದ್ರದ ಹಾದಿಯನ್ನೇ ಹಿಡಿದಿದೆ. ಜನಪರ ಇಲ್ಲ ಎನ್ನುವುದು ಸತ್ಯವಾಗಿದೆ. ಜಾಗತಿಕ ಪೇಟೆಯಲ್ಲಿ ಕಚ್ಚಾತೈಲದ ಬೆಲೆ ನಿರಂತರ ಇಳಿದರೂ ದೇಶದಲ್ಲಿ ಕೇಂದ್ರ ಸರ್ಕಾರ ತೈಲಬೆಲೆ ಇಳಿಸಿಲ್ಲ. ಈಗ ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿ ವಿದ್ಯುತ್‌ ಉತ್ಪಾದನೆ ಉತ್ತಮ ಸ್ಥಿತಿಯಲ್ಲಿದ್ದರೂ ಖರೀದಿ ಲೆಕ್ಕ ತೋರಿಸುತ್ತಿರುವುದು ಅನುಮಾನ ಹುಟ್ಟಿಸಿದೆ. ಆ ಮೂಲಕ ರಾಜ್ಯ ಸರ್ಕಾರ ಈ ನವರಾತ್ರಿಗೆ ವಿದ್ಯುತ್‌ ಶಾಕ್‌ (Electric Shock) ಕೊಟ್ಟಿದೆ ಎಂದು ಸರಣಿ ಟ್ವೀಟ್‌ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ವಿದ್ಯುತ್‌ ದರ ಏರಿಕೆ ಬಗ್ಗೆ ಟ್ವೀಟ್‌ ಮೂಲಕ ತೀವ್ರ ಆಕ್ರೋಶವನ್ನು ಹೊರಹಾಕಿರುವ ಮಾಜಿ ಸಿಎಂ, ಇಂಧನ ಸಚಿವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ. ನವರಾತ್ರಿಗೆ ಕರೆಂಟ್‌ ಶಾಕ್‌ ಎಂಬ ಹ್ಯಾಷ್‌ಟ್ಯಾಗ್‌ನಡಿ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್‌ ವಿವರವನ್ನು ಈ ಕೆಳಗೆ ನೀಡಲಾಗಿದೆ.

೧. ಇಂಧನ ಸಚಿವರ ಮಾತು ಒಪ್ಪುವಂತಿಲ್ಲ
ಇಂಧನ ಹೊಂದಾಣಿಕೆ ಶುಲ್ಕದ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್‌ ದರ ಏರಿಸಿದೆ. ಕಳೆದ ಜುಲೈನಲ್ಲಿ ಬರೆ ಎಳೆದಿತ್ತು. ಈಗ ಮತ್ತೆ ದರ ಹೆಚ್ಚಿಸಿದೆ. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ವಿದ್ಯುತ್‌ ದರವನ್ನೂ ಏರಿಸಲಾಗುತ್ತಿದೆ ಎಂದು ಇಂಧನ ಸಚಿವರು ಹೇಳುವ ಮಾತು ಒಪ್ಪುವ ರೀತಿ ಇಲ್ಲ.

ಇದನ್ನೂ ಓದಿ | ಮೋದಿ ಅಂಗಳಕ್ಕೆ BMS ಟ್ರಸ್ಟ್‌ ವಿವಾದ: ʼಸಚಿವ ಅಶ್ವತ್ಥನಾರಾಯಣ + ಒಂದು ಕಾಣದ ಕೈʼ ಎಂದ ಕುಮಾರಸ್ವಾಮಿ

೨. ಅವೈಜ್ಞಾನಿಕ, ಅನಪೇಕ್ಷಿತ & ಖಂಡನೀಯ
ವಿಧಾನಮಂಡಲ ಅಧಿವೇಶನ ಮುಂದೂಡಿಕೆಯಾದ ಕೂಡಲೇ ವಿದ್ಯುತ್‌ ದರ ಏರಿಕೆ ಆಗಿದೆ. ಏನೀ ಹುನ್ನಾರ? ನವರಾತ್ರಿಗೆ ಹಬ್ಬದ ಶುಭಾಶಯ ಹೇಳಬೇಕಿದ್ದ ಸರ್ಕಾರ, ಕರೆಂಟ್‌ ಶಾಕ್ ಕೊಟ್ಟು ಜನರು ಕಂಗೆಡುವಂತೆ ಮಾಡಿದೆ.‌ ಪ್ರತಿ ಯೂನಿಟ್‌ಗೆ 24ರಿಂದ 43 ಪೈಸೆ ಹೆಚ್ಚಿಸಿರುವುದು ಅವೈಜ್ಞಾನಿಕ, ಅನಪೇಕ್ಷಿತ & ಖಂಡನೀಯ.

೩. ಎಸ್ಕಾಂಗಳ ಭುಜದ ಮೇಲೆ ಗುಂಡಿಟ್ಟು ಹೊಡೆದರು
ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ವಿದ್ಯುತ್‌ ಉತ್ಪಾದನೆ ಉತ್ತಮವಾಗಿದೆ. ಆದರೂ ಖರೀದಿ ವೆಚ್ಚದಲ್ಲಿ 1,244 ಕೋಟಿ ರೂ. ಹೆಚ್ಚಳ ಆಗಿದೆ ಎನ್ನುವ ಲೆಕ್ಕವನ್ನು ನಂಬುವ ರೀತಿಯಲ್ಲಿ ಇಲ್ಲ. ಇಂಧನ ವಲಯದ ಕೆಲ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಎಸ್ಕಾಂಗಳ ಭುಜದ ಮೇಲೆ ಗುಂಡಿಟ್ಟು, ಜನರಿಗೆ ಹೊಡೆಯುವ ಕೆಲಸ ಆಗುತ್ತಿದೆ.‌

೪. ರಾಜ್ಯ ಬಿಜೆಪಿ ಸರ್ಕಾರ ಜನರ ಪರ ಇಲ್ಲ
ರಾಜ್ಯ ಬಿಜೆಪಿ ಸರ್ಕಾರ ಜನರ ಪರ ಇಲ್ಲ ಎನ್ನುವುದು ಸತ್ಯ. ಜಾಗತಿಕ ಪೇಟೆಯಲ್ಲಿ ಕಚ್ಚಾತೈಲದ ಬೆಲೆ ನಿರಂತರ ಇಳಿದರೂ ದೇಶದಲ್ಲಿ ತೈಲಬೆಲೆ ಇಳಿಸದ ಕೇಂದ್ರದ ಬಿಜೆಪಿ ಸರ್ಕಾರದ ಹಾದಿಯಲ್ಲೇ ರಾಜ್ಯ ಕರ್ನಾಟಕ ಬಿಜೆಪಿ ಸರ್ಕಾರವೂ ಸಾಗಿದೆ. ವಿದ್ಯುತ್‌ ದರದ ನಿರಂತರ ಏರಿಕೆ ಬಗ್ಗೆ ಗಂಭೀರ ಅನುಮಾನಗಳಿವೆ.

೫. ಸರ್ಕಾರ ಅದಕ್ಷತೆಯ ಆಡುಂಬೊಲ
ವಿದ್ಯುತ್‌ ಸೋರಿಕೆ, ಕಳವು ತಡೆಯಲಾಗದ, ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳದ ಬಿಜೆಪಿ ಸರ್ಕಾರ ಅದಕ್ಷತೆಯ ಆಡುಂಬೊಲ. “ಬಡವರನ್ನು ಸುಲಿದು ಬಿಸ್ನೆಸ್‌ ಕ್ಲಾಸಿನ ಜನರ ಜೇಬು ತುಂಬು” ಎನ್ನುವುದು ಬಿಜೆಪಿ ತತ್ತ್ವ. ಅದನ್ನೇ ಕರ್ನಾಟಕದಲ್ಲೂ ಎಗ್ಗಿಲ್ಲದೆ ಮಾಡುತ್ತಿದೆ.

ಇದನ್ನೂ ಓದಿ | PayCM | ಪೇಸಿಎಂ ಪೋಸ್ಟರ್‌ ಪ್ರಕರಣ; ಐವರು ಆರೋಪಿಗಳಿಗೆ ಜಾಮೀನು

Exit mobile version