Site icon Vistara News

Elephant Arjuna: ದಸರಾ ಆನೆ ಅರ್ಜುನ ಸಮಾಧಿ ವಿರೂಪ; ಎಚ್.ಡಿ. ಕೋಟೆಯ ನವೀನ್ ವಿರುದ್ಧ ಎಫ್‌ಐಆರ್

Elephant Arjuna’s Memorial

ಹಾಸನ: ದಸರಾ ಆನೆ ಅರ್ಜುನ ಸಮಾಧಿ ವಿರೂಪ ಪ್ರಕರಣದಲ್ಲಿ (Elephant Arjuna) ಅತಿಕ್ರಮ ಪ್ರವೇಶ ಹಾಗೂ ಸಮಾಧಿ ಬಗೆದ ಆರೋಪದಲ್ಲಿ ಎಚ್.ಡಿ. ಕೋಟೆಯ ನವೀನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತಾವು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದ ನವೀನ್ ಮತ್ತು ಇತರರು, ಮೀಸಲು ಅರಣ್ಯ ದೊಳಗೆ ಅತಿಕ್ರಮ ಪ್ರವೇಶ ಮಾಡಿ ಸಮಾಧಿಯ ಮಣ್ಣು ಬಗೆದ ಆರೋಪ ಕೇಳಿಬಂದಿತ್ತು. ಹೀಗಾಗಿ ನವೀನ್‌ ವಿರುದ್ಧ ಸಕಲೇಶಪುರ ತಾಲೂಕಿನ ಯಸಳೂರು ವಲಯ ಅರಣ್ಯಾಧಿಕಾರಿ ಎಫ್‌ಐಆರ್ ದಾಖಲಿಸಿದ್ದಾರೆ.

ಸ್ಮಾರಕ ನಿರ್ಮಾಣಕ್ಕೆ ನಟ ದರ್ಶನ್ ಅವರು ಕಲ್ಲು ಕಳಿಸಿದ್ದಾರೆಂದು ಅಭಿಮಾನಿಗಳು ವಿಡಿಯೊ ಮಾಡಿ ಹಂಚಿಕೊಂಡಿದ್ದರು. ಅಲ್ಲದೇ ಸರ್ಕಾರ, ಅರಣ್ಯ ಇಲಾಖೆ ಅನುಮತಿ ಇಲ್ಲದೆ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಆಕ್ಷೇಪ ವ್ಯಕ್ತವಾಗಿತ್ತು. ಅನಧಿಕೃತವಾಗಿ ಜನರಿಂದ ಹಣ ವಸೂಲಿ ಮಾಡಿ ಸಮಾಧಿ ಬಗೆದು ವಿರೂಪಗೊಳಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಜನರ ಪ್ರಶ್ನೆ ಬಳಿಕ ಅರಣ್ಯ ಇಲಾಖೆಯು ಸೋಮವಾರ ಕೇಸ್ ದಾಖಲಿಸಿಕೊಂಡಿದೆ.

ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷೆನ್ 33 ಹಾಗೂ ಕರ್ನಾಟಕ ಅರಣ್ಯ ನಿಯಮ 1969 ರ ನಿಯಮ 25-43 ರಡಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ | Suspicious Death : ಕೊಪ್ಪಳದಲ್ಲಿ ತಾಯಿ, ಮಗಳು, ಮೊಮ್ಮಗನ ಅನುಮಾನಾಸ್ಪದ ಸಾವು

ಅರ್ಜುನ ಸ್ಮಾರಕಕ್ಕಾಗಿ ಹಣ ಸಂಗ್ರಹಿಸಿ ಪೇಚಿಗೆ ಸಿಲುಕಿದ ಯುವಕರು

ಮೈಸೂರು: ದಸರಾ ಆನೆ ಅರ್ಜುನ ಸ್ಮಾರಕ ನಿರ್ಮಾಣ ವಿವಾದದ ನಡುವೆ ಅರ್ಜುನ ಸ್ಮಾರಕಕ್ಕಾಗಿ ಹಣ ಸಂಗ್ರಹಿಸಿದ್ದ ಯುವಕರು ಇದೀಗ ಪೇಚಿಗೆ ಸಿಲುಕಿದ್ದಾರೆ. ವಿವಾದದ ಬಗ್ಗೆ ಎಚ್.ಡಿ.ಕೋಟೆ ತಾಲೂಕಿನ ಎಚ್.ಎನ್.ನವೀನ್, ಸಿದ್ದಪ್ಪಾಜಿ, ಚೇತನ್ ಸುದ್ದಿಗೋಷ್ಠಿ ನಡೆಸಿದ್ದು, ನಾವು ನಟ ದರ್ಶನ್, ಅರ್ಜುನ ಆನೆ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡಿಲ್ಲ. ನಾವು ಕಳ್ಳರಲ್ಲ, ಅರ್ಜುನನ ಅಭಿಮಾನಿಗಳು ಎಂದು ಹೇಳಿದ್ದಾರೆ.

ಅರ್ಜುನ ಪಡೆ ವಾಟ್ಸ್‌ಆ್ಯಪ್‌ ಗ್ರೂಪ್ ಅಡ್ಮಿನ್ ಎಚ್.ಎನ್.ನವೀನ್ ಮಾತನಾಡಿ, ನಾವು ಅರ್ಜುನ ಆನೆ ಅಭಿಮಾನಿಗಳು. ಮಳೆಗಾಲದ ಆರಂಭದಲ್ಲೇ ಸ್ಮಾರಕ ಆಗಬೇಕು ಎಂಬುದು ನಮ್ಮ ಉದ್ದೇಶ ಆಗಿತ್ತು. ಅದಕ್ಕಾಗಿ ಮೇ 1ರಂದು ‘ಅರ್ಜುನ ಪಡೆ’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್ ಕ್ರಿಯೇಟ್ ಮಾಡಿದ್ದೆವು. ಅದರಲ್ಲಿ ಸುಮಾರು 900 ಸದಸ್ಯರು ಇದ್ದಾರೆ. ನಟ ದರ್ಶನ್ ಅವರು ಸ್ಮಾರಕ ನಿರ್ಮಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ನಾನು ಯಾರ ಬಳಿಯೂ ದುಡ್ಡು ಕೇಳಿಲ್ಲ. ಅರ್ಜುನನ ಮೇಲಿನ ಅಭಿಮಾನಕ್ಕೆ ಅರ್ಜುನ ಪಡೆ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿರುವವರು ನನ್ನ ಅಕೌಂಟ್‌ಗೆ ಹಣ ಹಾಕಿದ್ದಾರೆ. ಸುಮಾರು 50 ಸಾವಿರ ರೂ. ಕಲೆಕ್ಟ್ ಆಗಿದೆ ಎಂದು ತಿಳಿಸಿದ್ದಾರೆ.

ನಟ ದರ್ಶನ್ ಕಡೆಯವರಾದ ಸಂಪತ್ ಕಲ್ಲು ಕೊಡಿಸಿದರು. ತಾತ್ಕಾಲಿಕವಾಗಿ ಸ್ಮಾರಕ ನಿರ್ಮಿಸಲು ಎಸಿಎಫ್ ಮೌಖಿಕವಾಗಿ ಅನುಮತಿ ಕೊಟ್ಟಿದ್ದರು. ಕೆಲಸ ಮಾಡಲು ಹೋದಾಗ ಆರ್‌ಎಫ್‌ಒ ತಡೆದರು. ಡಿಸಿಎಫ್ ಜತೆ ಮಾತನಾಡಿ ಅರಣ್ಯ ಇಲಾಖೆಯೇ ಸ್ಮಾರಕ ನಿರ್ಮಿಸುತ್ತೆ ಅಂತ ಹೇಳಿದರು. ಕಲ್ಲು ವಾಪಸ್ ತೆಗೆದುಕೊಂಡು ಹೋಗಿ ಅಂತ ಹೇಳಿದರು. ಸಾಮಾಜಿಕ ಜಾಲತಾಣದಲ್ಲಿ ವಿವಾದವಾದ ಬಳಿಕ ಅರಣ್ಯ ಇಲಾಖೆಯವರು ತರಾತುರಿಯಲ್ಲಿ ತಾತ್ಕಾಲಿಕವಾಗಿ ಸ್ಮಾರಕ ನಿರ್ಮಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆರ್‌ಎಫ್‌ಒ 30 ಸಾವಿರ ರೂ. ಕಲ್ಲಿನ ಹಣವನ್ನು ನನ್ನ ಅಕೌಂಟ್‌ಗೆ ಹಣ ಹಾಕಿದ್ದಾರೆ. ನಾವು ನಟ ದರ್ಶನ್, ಅರ್ಜುನ ಆನೆ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡಿಲ್ಲ. ಮಲೆನಾಡು ರಕ್ಷಣಾ ವೇದಿಕೆಯ ಸಾಗರ್ ಪ್ರಚಾರಕ್ಕಾಗಿ ವಿಡಿಯೋದಲ್ಲಿ ಏನೇನೋ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಅನುಮತಿ ಕೊಟ್ಟು ಇದೀಗ ಅರಣ್ಯಾಧಿಕಾರಿಗಳು ಉಲ್ಟಾ ಹೊಡೆದ್ರಾ?

ಮೈಸೂರು: ಅರ್ಜುನ ತಾತ್ಕಾಲಿಕ ಸ್ಮಾರಕ‌ ನಿರ್ಮಾಣ ಮಾಡಲು ಮುಂದಾದ ಯುವಕರ‌ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದರಿಂದ ಮೊದಲು ಅನುಮತಿ ಕೊಟ್ಟು ಇದೀಗ ಅರಣ್ಯಾಧಿಕಾರಿಗಳು ಉಲ್ಟಾ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೊದಲಿಗೆ ಮೌಖಿಕವಾಗಿ ಅರಣ್ಯಧಿಕಾರಿಗಳು ಅನುಮತಿ ಕೊಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ವೀಡಿಯೋ ಸಾಕ್ಷಿ ಇಟ್ಟುಕೊಂಡಿರುವ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದ‌ ಯುವಕರು, ಫೋನ್ ಮೂಲಕ ಪ್ರೊಬೇಷನರಿ ಅಧಿಕಾರಿ ನೇಹಾ ಮತ್ತು ಎಸಿಎಫ್ ಮಹದೇವ್ ಜತೆ ಮಾತನಾಡಿದ್ದಾರೆ ಎನ್ನ‌ಲಾದ ಆಡಿಯೋ, ವೀಡಿಯೋ ಇದೆ.

ಇದನ್ನೂ ಓದಿ | Assault Case : ರೊಚ್ಚಿಗೆದ್ದ ಸ್ಥಳೀಯರು; ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ

ಸಿಮೆಂಟ್ ಬಳಸದೆ ಕಲ್ಲಿನಲ್ಲಿ ಕಟ್ಟಲು ಅನುಮತಿ ಕೊಟ್ಟಿರುವುದಾಗಿ ಆಡಿಯೋ ಸಂಭಾಷಣೆಯಲ್ಲಿದೆ. ಈ ಬಗ್ಗೆ ಇಬ್ಬರು ಅಧಿಕಾರಿಗಳ ಜತೆ ನವೀನ್ ಮಾತನಾಡಿದ್ದರು. ಇದಕ್ಕೂ ಮುನ್ನ ತಾತ್ಕಾಲಿಕ ಸ್ಮಾರಕ ನಿರ್ಮಾಣಕ್ಕೆ ಅನುಮತಿ ಕೋರಿ ಯುವಕರು ಮನವಿ ಪತ್ರ ನೀಡಿದ್ದರು. ಅರ್ಜುನ ಪಡೆ ಕರ್ನಾಟಕ ಹೆಸರಿನಲ್ಲಿ ಮನವಿ ಪತ್ರವನ್ನು ಹಾಸನದ ಯಳಸೂರು ವಲಯ ಅರಣ್ಯಧಿಕಾರಿಗೆ ನೀಡಲಾಗಿತ್ತು.

Exit mobile version