ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಹೆಬ್ಬನಹಳ್ಳಿಯಲ್ಲಿ ಮಂಗಳವಾರ ಮುಂಜಾನೆ ಕಾಡಾನೆ ದಾಳಿಗೆ ಮನು ಎಂಬ ೩೪ರ ಯುವಕ ಮೃತಪಟ್ಟಿದ್ದರು. ಪದೇಪದೆ ಆನೆ ದಾಳಿಯಿಂದ ಕಂಗಾಲಾಗಿರುವ ಜನರು ಈ ಬಾರಿ ಮೃತದೇಹವನ್ನೂ ತೆಗೆಯಲು ಬಿಡದೆ, ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದರು. ಗ್ರಾಮಸ್ಥರ ಈ ಪ್ರತಿಭಟನೆಗೆ ಮಣಿದ ಸರಕಾರ ಕೊನೆಗೂ ಮಧ್ಯ ರಾತ್ರಿಯ ಹೊತ್ತಿಗೆ ಉಸ್ತುವಾರಿ ಸಚಿವ ಗೋಪಾಲಯ್ಯ ಅವರನ್ನು ಸ್ಥಳಕ್ಕೆ ಕಳುಹಿಸಿದೆ. ಸ್ಥಳಕ್ಕೆ ಆಗಮಿಸಿದ ಗೋಪಾಲಯ್ಯ ಅವರ ಮೇಲೆ ಗ್ರಾಮಸ್ಥರು ಹರಿಹಾಯ್ದರಾದರೂ ಅಂತಿಮವಾಗಿ ನವೆಂಬರ್ ೩ಕ್ಕೆ ಸಭೆಯೊಂದನ್ನು ನಡೆಸುವ ತೀರ್ಮಾನಕ್ಕೆ ಬರಲಾಗಿದೆ. ಆನೆ ದಾಳಿಗೆ ಶಾಶ್ವತವಾದ ಪರಿಹಾರವೊಂದನ್ನು ಹುಡುಕುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವ ಭರವಸೆಯೊಂದಿಗೆ ಮಧ್ಯರಾತ್ರಿಯ ಬಳಿಕ ಮೃತದೇಹವನ್ನು ತೆಗೆಯಲು ಗ್ರಾಮಸ್ಥರು ಒಪ್ಪಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಸಮೀಪ ಮಂಗಳವಾರ ಬೆಳಗ್ಗೆ ದೇವಾಲಯದ ಪೂಜೆಗೆಂದು ಹೋಗಿದ್ದ 34 ವರ್ಷ ಮನು ಎಂಬಾತನನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ. ಇತ್ತೀಚೆಗಷ್ಟೇ ಮದುವೆಯಾಗಿ ಪುಟ್ಟ ಮಗುವನ್ನು ಹೊಂದಿರುವ ಈ ವ್ಯಕ್ತಿಯ ಸಾವು ಜನರನ್ನು ಕೆರಳಿಸಿತ್ತು. ಇಲ್ಲಿನ ಜನರೇ ಹೇಳುವಂತೆ ಈ ಭಾಗದಲ್ಲಿ ಆನೆಗಳು ೮೭ಕ್ಕಿಂತಲೂ ಹೆಚ್ಚು ಜನರನ್ನು ಸಾಯಿಸಿವೆ.
ಬೆಳಗ್ಗೆಯೇ ಸ್ಥಳದಲ್ಲಿ ಸೇರಿದ ಜನ ತಮಗೆ ರಕ್ಷಣೆ ಇಲ್ಲವೇ ಎಂದು ಕೇಳಿದ್ದರು. ತಾವು ಕಾಡಿನಲ್ಲಿ ವಾಸಿಸುತ್ತಿಲ್ಲ. ಹಿಡುವಳಿ ಭೂಮಿಗೆ ಬಂದು ದಾಳಿ ನಡೆಸುವ ಆನೆಗಳಿಂದ ಮುಕ್ತಿ ಒದಗಿಸಲು ಸರಕಾರ ಉತ್ಸುಕವಾಗಿಲ್ಲ. ಹೀಗಾಗಿ ಬದುಕುವುದೇ ಕಷ್ಟವಾಗುತ್ತಿದೆ ಎಂದು ಹೇಳಿದ್ದರು.
ಒಂದು ಹಂತದಲ್ಲಿ ಸ್ಥಳಕ್ಕೆ ಮುಖ್ಯಮಂತ್ರಿಗಳೇ ಬರಬೇಕು, ಇಲ್ಲದಿದ್ದರೆ ಹೆಣವನ್ನೂ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಗ್ರಾಮಸ್ಥರು ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು ಬರಲೇಬೇಕು. ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದರು.
ಸಾವು ಸಂಭವಿಸಿದ ಸ್ಥಳದಲ್ಲೇ ನೂರಾರು ಜನರು ಪ್ರತಿಭಟನೆ ನಡೆಸುತ್ತಿದ್ದರು. ಎಷ್ಟು ರಾತ್ರಿಯಾದರೂ ಸರಿ, ನಾಳೆ ಬೆಳಗ್ಗೆ ಆದರೂ ಸರಿ ಉಸ್ತುವಾರಿ ಸಚಿವರು ಬರಲೇಬೇಕು ಎಂದು ಹಠ ಹಿಡಿದಿದ್ದರು. ಅವರು ಕುಳಿತ ಪ್ರದೇಶದ ಸ್ವಲ್ಪ ದೂರದಲ್ಲೇ ೨೦ಕ್ಕೂ ಹೆಚ್ಚು ಆನೆಗಳ ಹಿಂಡು ಇದ್ದರೂ ಭಯಪಡದೆ ಕುಳಿತಿದ್ದರು.
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೆಲ್ಲಾ ಪ್ರತಿಭಟನೆಯನ್ನು ಹಿಂಪಡೆಯುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಬಗ್ಗದ ಪ್ರತಿಭಟನಾಕಾರರು ಅಹೋರಾತ್ರಿ ಧರಣಿ ಮುಂದುವರಿಸಿದರು.
ಬೆಳಗ್ಗೆ ಕನ್ನಡ ರಾಜ್ಯೋತ್ಸವ ನಿಮಿತ್ತ ಹಾಸನಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ವಿಷಯ ತಿಳಿದೂ ಕೂಡಾ ತುರ್ತು ಕಾರ್ಯಕ್ರಮದ ನಿಮಿತ್ತ ಸ್ಥಳಕ್ಕೆ ಭೇಟಿ ನೀಡದೇ ಬೆಂಗಳೂರಿಗೆ ವಾಪಸ್ಸು ಹೋಗಿದ್ದು ಪ್ರತಿಭಟನಾಕಾರರನ್ನು ಇನ್ನಷ್ಟು ಸಿಟ್ಟಿಗೆಬ್ಬಿಸಿತ್ತು.
ಹಾಸನ ಜಿಲ್ಲೆಯಲ್ಲಿದ್ದೂ, ವಿಚಾರ ತಿಳಿದರೂ ಸ್ಥಳಕ್ಕೆ ಉಸ್ತುವಾರಿ ಸಚಿವರು ಬರಲಿಲ್ಲ, ಅವರು ಇಲ್ಲಿಗೆ ಬರೋವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಉಸ್ತುವಾರಿ ಸಚಿವರ ಜೊತೆ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳೂ ಕೂಡಾ ಬರಬೇಕು, ಕಾಡಾನೆಗಳ ಸ್ಥಳಾಂತರದ ಬಗ್ಗೆ ಆದೇಶವೂ ಆಗಬೇಕು ಎಂಬ ಬೇಡಿಕೆ ಮಂಡಿಸಿದ್ದರು.
ಜನರು ತಮ್ಮ ಮನವಿಗೆ ಸ್ಪಂದಿಸದ ಕಾರಣ ಡಿಸಿ, ಎಸ್ಪಿ, ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿಯಾಗುತ್ತಿದ್ದಂತೆಯೇ ಸ್ಥಳದಿಂದ ನಿರ್ಗಮಿಸಿದ್ದರು.
ಮಧ್ಯರಾತ್ರಿ ಬಂದ ಗೋಪಾಲಯ್ಯ
ಈ ನಡುವೆ ವಿಷಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತಲುಪಿದ್ದು, ಅವರು ಕೂಡಲೇ ಸ್ಥಳಕ್ಕೆ ಹೋಗುವಂತೆ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ. ಅದರಂತೆ ಗೋಪಾಲಯ್ಯ ಅವರು ರಾತ್ರಿ ೧೧.೫೦ರ ಹೊತ್ತಿಗೆ ಹೆಬ್ಬನಹಳ್ಳಿಯ ಪ್ರತಿಭಟನಾ ಸ್ಥಳಕ್ಕೆ ತಲುಪಿದರು.
ಸಚಿವ ಗೋಪಾಲಯ್ಯ ಅವರು ಪ್ರತಿಭಟನಾಕಾರರ ಜತೆ ಮಾತನಾಡಿದ್ದಲ್ಲದೆ, ಸ್ವತಃ ಸಿಎಂ ಬೊಮ್ಮಾಯಿ ಅವರು ಕೂಡಾ ಪ್ರತಿಭಟನಾಕಾರರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ್ ಕೂಡಾ ಮಾತನಾಡಿದರು. ನವೆಂಬರ್ ೩ರಂರು ಕಾಡಾನೆ ದಾಳಿ ಸಂಬಂಧ ಸಕಲೇಶಪುರದಲ್ಲಿ ಸಭೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ಮೃತದೇಹದ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿದೆ.