ಚನ್ನಪಟ್ಟಣ: ಕಾಡಾನೆಗಳ ಹಿಂಡು ನಾಡಿಗೆ ಬಂದು ಪ್ರಾಣ ಹಿಂಡುವ ವಿದ್ಯಮಾನಗಳು ದಿನೇದಿನೆ ಹೆಚ್ಚುತ್ತಿವೆ. ಮಂಗಳವಾರ ಮುಂಜಾನೆಯೇ ರಾಮ ನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಿನ್ನಗನ ಹೊಸಳ್ಳಿ ಗ್ರಾಮದಲ್ಲಿ ಆನೆಗಳ ಗುಂಪು ಒಬ್ಬ ಮಹಿಳೆಯನ್ನು ಬಲಿ ಪಡೆದಿದೆ.
೫೫ ವರ್ಷದ ಚೆನ್ನಮ್ಮ ಅವರೇ ಆನೆಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡವರು. ಇವರು ತೋಟದ ಮನೆಯಲ್ಲಿ ವಾಸವಿದ್ದು, ಬೆಳಗ್ಗೆ ಹಾಲು ಕರೆಯಲೆಂದು ಕೊಟ್ಟಿಗೆಯ ಕಡೆಗೆ ಹೋಗಿದ್ದ ವೇಳೆ ಆನೆಗಳು ಲಗ್ಗೆ ಇಟ್ಟಿವೆ. ಆನೆಗಳು ಮಹಿಳೆಯನ್ನು ಓಡಿಸಿ ಕೊಂದು ಹಾಕಿವೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಚನ್ನಮ್ಮ ಅವರ ಕೂಗು ಕೇಳಿ ಮನೆಯವರು ಓಡಿ ಬಂದರೂ ಆನೆಗಳು ಬಿಡದೆ ಬೆನ್ನಟ್ಟಿ ಸಾಯಿಸಿವೆ ಎನ್ನಲಾಗಿದೆ.
ಒಂಬತ್ತು ಕಾಡಾನೆಗಳಿದ್ದವು
ಮಹಿಳೆಯ ಮೇಲೆ ದಾಳಿ ಮಾಡಿದ ಆನೆಗಳ ಹಿಂಡಿನಲ್ಲಿ ಒಟ್ಟು ೯ ಕಾಡಾನೆಗಳಿದ್ದವು ಎಂದು ಹೇಳಲಾಗಿದೆ. ಈ ಆನೆಗಳು ಇದಕ್ಕೆ ಮೊದಲು ಬಿ.ವಿ. ಹಳ್ಳಿಯಲ್ಲಿ ಸಾಕಷ್ಟು ನಾಶ-ನಷ್ಟ ಮಾಡಿಯೇ ಇತ್ತ ಬಂದಿದ್ದವು. ಬಿ.ವಿ. ಹಳ್ಳಿಯ ಹಲವು ರೈತರ ಜಮೀನಿನಲ್ಲಿನ ಬೆಳೆ ನಾಶಪಡಿಸಿರುವುದು ಕಂಡುಬಂದಿವೆ. ಅಲ್ಲೆಲ್ಲ ನಾಶ ಮಾಡಿ ಈ ತೋಟದ ಮನೆಯತ್ತ ಬಂದಿದ್ದವು. ಆದರೆ, ಮಹಿಳೆಗೆ ಕತ್ತಲೆಯಲ್ಲಿ ಆನೆ ಹಿಂಡು ಕಾಣಿಸಲಿಲ್ಲ ಎಂದು ಭಾವಿಸಲಾಗಿದೆ.
ಸೋಮವಾರ ಸಕಲೇಶಪುರದಲ್ಲಿ
ಸೋಮವಾರ ಬೆಳಗ್ಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಮೇಲಕೆರೆ ಗ್ರಾಮದಲ್ಲಿ ಆನೆಯೊಂದು ರೈತರೊಬ್ಬರ ಮೇಲೆ ದಾಳಿ ಮಾಡಿತ್ತು. ಬೆಳಗ್ಗೆ ಗದ್ದೆ ಕೆಲಸಕ್ಕೆ ಹೋಗಿದ್ದಾಗ ಮಂಜುನಾಥ್ (50) ಎಂಬುವವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ.
ಇದನ್ನೂ ಓದಿ| Elephant Attack | ಕಾಡಾನೆ ದಾಳಿಗೆ ಸಕಲೇಶಪುರದಲ್ಲಿ ಮತ್ತೊಬ್ಬ ರೈತ ಬಲಿ!