Site icon Vistara News

ಕಾಫಿ ತೋಟಕ್ಕೆ ಬಂತು ಮುದ್ದಾದ ಆನೆ ಮರಿ,‌ ಅಮ್ಮನಿಂದ ಬೇರಾದರೂ ಭಯವಿಲ್ಲದೆ ಎಲ್ಲರ ಜತೆ ಬೆರೆತ ಕ್ಯೂಟಿ!

A

ಮಡಿಕೇರಿ: ಪ್ರತಿ ಮಗುವೂ ಒಂಥರಾ ಅಬೋಧವೇ.. ಮುಗ್ಧವೇ ಅಂತೇವಲ್ಲ.. ಅದು ನಿಜ! ಇದಕ್ಕೆ ಮನುಷ್ಯರ ಮಕ್ಕಳು, ಪ್ರಾಣಿಗಳ ಮರಿಗಳು ಅನ್ನುವ ಬೇಧವೂ ಇಲ್ಲ ಎನ್ನುವುದಕ್ಕೆ ಇಲ್ಲೊಂದು ಸುಂದರ ನಿದರ್ಶನ ಸಿಕ್ಕಿದೆ. ಅಮ್ಮನಿಂದಲೋ, ಗುಂಪಿನಿಂದಲೋ ಬೇರ್ಪಟ್ಟ ಪುಟ್ಟ ಆನೆ ಮರಿಯೊಂದು ಮನುಷ್ಯರ ಕೈಯಲ್ಲಿ ಮಗುವಾದ ಕಥೆ ಇದು.

ಅದು ಕೊಡಗು ಜಿಲ್ಲೆಯ ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಒಂದು ಕಾಫಿ ತೋಟ. ಕಾಡಂಚಿನಲ್ಲಿರುವ ಈ ಭಾಗದಲ್ಲಿ ಸಣ್ಣಗೆ ಮಳೆ ಸುರಿಯುತ್ತಿತ್ತು. ಆ ತೋಟದ ಮಾಲೀಕನೋ, ಅಥವಾ ಕೆಲಸದವರೋ ಬೆಳ್ಳಂಬೆಳಗ್ಗೆ ಅತ್ತ ಹೋದಾಗ ಒಂದು ಆನೆ ಸಣ್ಣದಾಗಿ ಘೀಳಿಡುವ ಸದ್ದು ಕೇಳಿಬಂತು. ಸ್ವಲ್ಪ ನಿಧಾನವಾಗಿ ಹತ್ತಿರ ಹೋಗಿ ನೋಡಿದರೆ ಕಂಡಿದ್ದು ಕಾಫಿ ಗಿಡಗಳ ನಡುವೆ ಒಂದು ಪುಟ್ಟ ಆನೆ ಮರಿ.

ಎಲ್ಲಿ ಹೋಗುವುದು ಎಂದು ತಿಳಿಯದೆ ಆ ಕಡೆಗೊಮ್ಮೆ, ಈ ಕಡೆಗೊಮ್ಮೆ ಹೋಗುತ್ತಾ ಕಾಫಿ ಗಿಡಗಳಿಗೆ ಮುಖವನ್ನು ತಾಡಿಸುತ್ತಾ ಇದ್ದ ಆನೆ ಮರಿಯನ್ನು ಪ್ರೀತಿಯಿಂದ ಕರೆದು ಹೊರಗೆ ಬಾ ಎನ್ನುತ್ತಾರೆ. ಅಚ್ಚರಿ ಎಂದರೆ ಎತ್ತ ಹೋಗಲೋ ಎಂಬಂತಿದ್ದ ಆನೆ ಮರಿ ಯಾರದೋ ಧ್ವನಿ ಕೇಳಿ ಮೆಲ್ಲಗೆ ಅತ್ತ ಹೊರಳಿ ಹೊರಬರುತ್ತದೆ.

ಅಲ್ಲಿ ಅಮ್ಮನಿಲ್ಲ, ಇರುವವರು ಯಾರೋ ಬೇರೆಯವರು ಎಂದು ಗೊತ್ತಿದ್ದರೂ ಯಾವುದೇ ಭಯವಿಲ್ಲದೆ ಬಂದು ಅವರ ಬಳಿಗೆ ನಿಲ್ಲುತ್ತದೆ ಆ ಆನೆ ಮರಿ. ಕೇವಲ ಕೆಲವೇ ತಿಂಗಳ ಹಿಂದಷ್ಟೇ ಹುಟ್ಟಿದ ಪುಟ್ಟ ಮರಿಯಾಗಿತ್ತು. ಹೊರಜಗತ್ತಿನ ಬಗ್ಗೆ ಹೆಚ್ಚು ಅರಿವಿಲ್ಲದ ಅದು ಅಮ್ಮನೊಂದಿಗೆ ತಿರುಗಾಡಿಕೊಂಡು ಬಂದಿತ್ತು ಅನಿಸುತ್ತದೆ.

ಹಾಗೆ ಕಾಫಿ ತೋಟದೊಳಗಿನ ರಸ್ತೆಗೆ ಬಂದ ಆ ಆನೆ ಮರಿಯನ್ನು ನಿಧಾನಕ್ಕೆ ನಡೆಸಿಕೊಂಡೇ ಪಕ್ಕದಲ್ಲಿರುವ ಮನೆಗೆ ತರಲಾಯಿತು. ಬರುವ ದಾರಿಯಲ್ಲಿ ಅದರ ಮೈ ಪೂಸಿದರೆ ಮೆಲ್ಲಗೆ ಸೊಂಡಿಲೆತ್ತಿ ಯಾರಿದು ಎನ್ನುವಂತೆ ನೋಡಿತು. ಮನೆಗೆ ಬಂದರೆ, ಜಾರುವ ಟೈಲ್ಸ್‌ ನೆಲವಿರುವ ಮನೆಯೊಳಗೆ ಯಾವುದೇ ಆತಂಕವಿಲ್ಲದೆ ಅದು ಓಡಾಡಿತು. ಮನೆಯೊಳಗೆ ಏನಿದೆ ಅಂತಾನೋ, ನನ್ನಮ್ಮ ಇಲ್ಲಿರಬಹುದಾ ಅಂತಾನೋ ಮನೆಯೊಳಗೆ ಅತ್ತಿಂದಿತ್ತ ಹುಡುಕಾಡಿತು… ನಡು ನಡುವೆ ಸಣ್ಣದೊಂದು ಘೀಳು. ಹಾಗಂತ, ಆತಂಕವೇನೂ ಇರಲಿಲ್ಲ.

ಈ ನಡುವೆ, ಅದರ ಬಾಯಿಗೆ ಮನೆಯವರು ಸಣ್ಣದೊಂದು ಸೇಬಿನ ತುಂಡು ಇಟ್ಟರೆ ಅದನ್ನು ಸರಿಯಾಗಿ ತಿನ್ನಲಾಗದೆ ಬಾಯಿಯಿಂದ ಹೊರಬಿತ್ತು. ಮತ್ತೆ ನೀಡಿದರೆ ಮೆಲ್ಲನೆ ಜಗಿದು ತಿಂದು ಅತ್ತಿತ್ತ ನೋಡಿತು. ಮನೆಯ ಮಕ್ಕಳು ಕುತೂಹಲದಿಂದ ಮಾತನಾಡಿಕೊಂಡರೆ ʻಯಾರದು ಅಲ್ಲಿʼ ಅನ್ನೋ ತರ ಅತ್ತ ನೋಡಿತು. ತನ್ನ ಸೊಂಡಿಲನ್ನು ಅತ್ತಿತ್ತ ಆಡಿಸುತ್ತಾ, ಒಮ್ಮೊಮ್ಮೆ ಗೋಡೆಗೆ ತಾಡಿಸುತ್ತಾ ಓಡಾಡಿತು.

ಆನೆ ಮರಿ ಸಿಕ್ಕಿರುವ ಸ್ಥಳಕ್ಕೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ, ಅರಣ್ಯಾಧಿಕಾರಿ ಶಂಕರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶ್ರೀಮಂಗಲ ವಲಯದ ಡಾ.ಬಿ.ಜಿ.ಗಿರೀಶ್ ಅವರು ಪ್ರಥಮ ಚಿಕಿತ್ಸೆ‌ ನೀಡಿದ್ದಾರೆ. ಎಲ್ಲದಕ್ಕೂ ಅದು ಯಾವುದೆ ಭಯವಿಲ್ಲದೆ ಪ್ರತಿಕ್ರಿಯಿಸಿದೆ.

ಮುಂದೇನು?
ಸದ್ಯದ ಮಾಹಿತಿ ಪ್ರಕಾರ ಆನೆ ಮರಿಯನ್ನು ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ರವಾನೆ ಮಾಡಲಾಗುತ್ತದೆ. ಈಗ ಉಳಿದುಕೊಳ್ಳುವ ಪ್ರಶ್ನೆ ಏನೆಂದರೆ ಮರಿಯನ್ನು ಕಳೆದುಕೊಂಡ ತಾಯಿ ಆನೆ ಎಲ್ಲಿರಬಹುದು? ಕಾಡು ಬೆಟ್ಟಗಳಲ್ಲಿ, ಕಾಫಿ ತೋಟಗಳಲ್ಲಿ ಮಗುವನ್ನು ಹುಡುಕುತ್ತಾ ಅಲೆಯುತ್ತಿರಬಹುದಾ? ಅದು ಮತ್ತೆ ಮರಿಯನ್ನು ಹುಡುಕಿ ಶ್ರೀಮಂಗಲದ ಅದೇ ತೋಟಕ್ಕೆ ಬರುತ್ತದಾ? ಈ ಮನೆಗೆ ಹೋಗಿದೆ ಎಂದು ಅಲ್ಲಿಗೇ ಬರುತ್ತದಾ? ಕಾಡಾನೆಗಳ ದಂಡನ್ನೇ ಕಟ್ಟಿಕೊಂಡು ಬರುತ್ತದಾ? ಗೊತ್ತಿಲ್ಲ. ಏನೇ ಇದ್ದರೂ ಅಮ್ಮನನ್ನು ಕಂಡ ಕೂಡಲೇ ಓಡಿ ಬಂದು ತೆಕ್ಕೆ ಬೀಳುವುದು ಖಂಡಿತ.

ಇದನ್ನೂ ಓದಿ| ಆನೆ ದಾಳಿಗೆ ಮಹಿಳೆ ಬಲಿ, ಹಾಲು ಕರೆಯಲು ಹೋದಾಗ ಎದುರೇ ನಿಂತಿತ್ತು ಸಲಗದ ಹಿಂಡು

Exit mobile version