Site icon Vistara News

Mysore Dasara | ಗಜಪಡೆ ಆಗಮನಕ್ಕೆ ಸಕಲ ಸಿದ್ಧತೆ; ಬರಲಿವೆ 14 ಆನೆಗಳು!

Mysore Dasara

ಮೈಸೂರು: ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ದಸರಾ ವೈಭವ (Mysore Dasara) ಕಳೆಗುಂದಿದ್ದು, ವೈಭವಯುತವಾಗಿ ಆಚರಿಸಲು ಈ ಬಾರಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಚುರುಕಿನ ಸಿದ್ಧತಾ ಕಾರ್ಯ ಆರಂಭಗೊಂಡಿದ್ದು, ದಸರಾ ಮಹೋತ್ಸವದಲ್ಲಿ 14 ಆನೆಗಳು ಭಾಗಿಯಾಗಲಿವೆ.

ಇದೇ ಆಗಸ್ಟ್ 7ರಿಂದ ಗಜ ಪಯಣ ಆರಂಭವಾಗಲಿದ್ದು, ಆ.10ರಂದು ಆನೆಗಳು ಅರಮನೆಗೆ ಆಗಮಿಸಲಿವೆ. ಆನೆಗಳ ಆಗಮನಕ್ಕೂ ಮುನ್ನ ಒಂದು ವಾರ ಮುಂಚಿತವಾಗಿಯೇ ಆನೆಗಳಿಗೆ ಶೆಡ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಮಾವುತರು ಹಾಗೂ ಕಾವಾಡಿಗಳು ಸೇರಿ ಒಟ್ಟು 40 ಕುಟುಂಬಗಳಿಗಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಸುಮಾರು 100ಕ್ಕೂ ಅಧಿಕ ಮಾವುತ, ಕಾವಾಡಿಗಳ ಕುಟುಂಬಸ್ಥರು ಆಗಮಿಸಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಮೂಲಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಶೆಡ್ ನಿರ್ಮಾಣ ಮಾಡಲಾಗುತ್ತಿದೆ. ವಸತಿ ಜತೆಗೆ ಮಾವುತ ಹಾಗೂ ಕಾವಾಡಿಗಳ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆ, ವೈದ್ಯಕೀಯ ತಪಾಸಣಾ ಕೇಂದ್ರವನ್ನೂ ಸ್ಥಾಪಿಸಲಾಗುತ್ತಿದೆ.

ಈ ಬಾರಿ ಅಭಿಮನ್ಯುಗೆ ನಾಯಕತ್ವವನ್ನು ವಹಿಸಲಾಗಿದ್ದು, ಅರ್ಜುನನಿಗೆ ವಿಶೇಷ ಗೌರವ ನೀಡಲಾಗುತ್ತದೆ. ಕೆಂದ್ರ ಬಿಂದು ಆಗಿರೋ ಅರ್ಜುನನೇ ಜಂಬೂ ಸವಾರಿಯನ್ನು ಮುನ್ನಡೆಸಲಿದ್ದಾನೆ.

ಇದನ್ನೂ ಓದಿ | Dasara 2022 | ಸಾಂಪ್ರದಾಯಿಕ, ಅದ್ಧೂರಿ, ಅಂತಾರಾಷ್ಟ್ರೀಯ ಮೈಸೂರು ದಸರಾ: ಸಿಎಂ ಸಭೆಯಲ್ಲಿ ತೀರ್ಮಾನ

ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತು ಸುಮಾರು 20 ವರ್ಷದಿಂದ ದಸರಾದಲ್ಲಿ ಪಾಲ್ಗೊಂಡಿರುವ ಮಾಜಿ ನಾಯಕ ಅರ್ಜುನನಿಗೆ ಅರಣ್ಯ ಇಲಾಖೆಯಿಂದ ಗೌರವ ಸಲ್ಲಿಸಲಾಗುತ್ತಿದೆ. ಅರ್ಜುನ ಅತ್ಯಂತ ಬಲಶಾಯಿ ಆನೆ ಎಂದೇ ಪ್ರಸಿದ್ಧಿಯಾಗಿದ್ದು, 60 ವರ್ಷ ಪೂರೈಸಿದ ಹಿನ್ನೆಲೆ 2020ರಲ್ಲಿ ಈ ಹೊಣೆಯಿಂದ ಮುಕ್ತನಾಗಿದ್ದಾನೆ.

ಅರ್ಜುನನ ಬಳಿಕ ಅಂಬಾರಿ ಹೋರುವ ಆನೆಯಾಗಿ ‘ಕೂಂಬಿಂಗ್ ಸೆಷಲಿಸ್ಟ್’ ಅಭಿಮನ್ಯು ಬಡ್ತಿ ಪಡೆದಿದ್ದಾನೆ. ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳ ಆಗಮನವಾಗಲಿದೆ. ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ಆಗಸ್ಟ್ 7ರಂದು ವೀರನಹೊಸಳ್ಳಿಯಲ್ಲಿ ಗಜಪಯಣ ನಡೆಯಲಿದೆ. ಆನೆಗಳ ಮೇವು, ಆಹಾರದ ಟೆಂಡರ್ ಆಗಿದ್ದು, ಯಶಸ್ವಿಯಾಗಿ ದಸರಾ ನಡೆಸುವ ವಿಶ್ವಾಸವಿದೆ ಎಂದು ಡಿಸಿಎಫ್ ಕರಿಕಾಳನ್ ‘ವಿಸ್ತಾರ ನ್ಯೂಸ್‌’ಗೆ ಗಜಪಯಣ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಎರಡು ವರ್ಷಗಳಿಂದ ಮಂಕಾಗಿದ್ದ ದಸರಾ:
ಕೋವಿಡ್‌ನಿಂದಾಗಿ ಸತತ ೨ ವರ್ಷ ಸರಳವಾಗಿ ದಸರಾ ಆಚರಣೆಯನ್ನು ಮಾಡಲಾಗಿತ್ತು. ಹೀಗಾಗಿ ದಸರಾವು ಸೀಮಿತ ಸರ್ಕಾರಿ ಕಾರ್ಯಕ್ರಮ ಹಾಗೂ ಅರಮನೆ ಕಾರ್ಯಕ್ರಮಗಳಿಗೆ ಮಾತ್ರವೇ ಸೀಮಿತವಾಗಿತ್ತು. ಅರಮನೆ ದಸರಾ ಉತ್ಸವಕ್ಕೆ ಕೇವಲ 8 ಆನೆಗಳು ಮಾತ್ರ ಭಾಗಿಯಾಗಿದ್ದವು. ಆದರೆ ಈ ಬಾರಿ ಅದ್ಧೂರಿ ದಸರಾ ಆಚರಣೆ ಹಿನ್ನೆಲೆಯಲ್ಲಿ ಉತ್ಸವದಲ್ಲಿ 14 ಆನೆಗಳು ಭಾಗಿಯಾಗಲಿವೆ.

ಇದನ್ನೂ ಓದಿ| ಈ ಬಾರಿ ಸಾಂಪ್ರದಾಯಿಕ, ಅದ್ಧೂರಿ ದಸರಾ; ಸಿಎಂ ಬಸವರಾಜ ಬೊಮ್ಮಾಯಿ

Exit mobile version