Site icon Vistara News

KRS Dam: ಖಾಲಿಯಾಗಿದೆ ಕೆಆರ್‌ಎಸ್‌! ಕುಡಿಯಲು ನೀರು ಸಿಗುವುದು ಇನ್ನೆಷ್ಟು ದಿನ? ಮಳೆ ಬಾರದೇ ಇದ್ದರೆ ಏನ್‌ ಕಥೆ!

KRS Water Level

ಮಂಡ್ಯ: ರಾಜ್ಯದ ಎಲ್ಲ ಕಡೆ ಮುಂಗಾರು ಮಳೆ ಇನ್ನೂ ಸರಿಯಾಗಿ ಆಗದೇ ಇರುವುದರಿಂದ ಹಲವು ಕಡೆ ನೀರಿಗೆ ಹಾಹಾಕಾರ ಎದುರಾಗಿದೆ. ಅಲ್ಲದೆ, ಕಾವೇರಿ ನದಿ ಪಾತ್ರಗಳಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯೇ ಆಗದಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ಪರಿಣಾಮ ಕೆಆರ್‌ಎಸ್‌ ಡ್ಯಾಂ (KRS Dam) ಡೆಡ್‌ ಸ್ಟೋರೇಜ್‌ನತ್ತ (Dead Storage) ಮುಖ ಮಾಡಿದೆ. ಕೇವಲ 80 ಅಡಿಗೆ ಜಲಾಶಯದ (Reservoir) ನೀರಿನ ಮಟ್ಟ ಕುಸಿದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಭಾರಿ ಜಲ ಸಂಕಷ್ಟ ಎದುರಾಗಲಿದೆ.

ದಿನೇ ದಿನೆ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಸೋಮವಾರ (ಜೂನ್‌ 19) 80.06 ಅಡಿಗೆ ನೀರಿನ ಮಟ್ಟ ತಲುಪಿದೆ. ಒಳಹರಿವು 289 ಕ್ಯೂಸೆಕ್ ಇದ್ದರೆ, ಹೊರಹರಿವು 2943 ಕ್ಯೂಸೆಕ್ ಇದೆ. ಇನ್ನು ಟಿಎಂಸಿ ಲೆಕ್ಕಾಚಾರವನ್ನು ನೋಡುವುದಾದರೆ, 49.452 ಟಿಎಂಸಿ ಗರಿಷ್ಠ ಸಾಮರ್ಥ್ಯವಿದ್ದು, ಸೋಮವಾರಕ್ಕೆ 10.811 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ.

ಕೆಆರ್‌ಎಸ್‌ನಲ್ಲಿ ಕುಸಿದಿರುವ ನೀರಿನ ಮಟ್ಟ

ಇದನ್ನೂ ಓದಿ: Weather Report: ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ; ಬೆಂಗಳೂರು ಆಯ್ತು ಕೂಲ್‌, ಕರಾವಳಿ ಫುಲ್‌ ರೈನ್‌

ಖಾಲಿಯಾಗಿರುವ ಕೆಆರ್‌ಎಸ್‌

ಈ ತಿಂಗಳ ಕೊನೇವರೆಗೆ ಕುಡಿಯಲು ಓಕೆ

ಈಗಿರುವ ನೀರಿನ ಸಂಗ್ರಹವನ್ನು ನೋಡಿದಾಗ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ಈ ಜೂನ್ ತಿಂಗಳ ಕೊನೇವರೆಗೆ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮಳೆ ಸರಿಯಾಗಿ ಆಗದೇ ಇದ್ದರೆ ಭಾರಿ ಸಂಕಷ್ಟ ಎದುರಾಗಲಿದೆ.

ಡೆಡ್‌ ಸ್ಟೋರೇಜ್‌ಗೆ ಸಮೀಪದಲ್ಲಿದೆ

ಡೆಡ್ ಸ್ಟೋರೇಜ್‌ಗೆ 6 ಅಡಿ ಮಾತ್ರವೇ ಬಾಕಿ!

ಕೆಆರ್‌ಎಸ್‌ನ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 124.80 ಅಡಿ ಇದ್ದರೆ, ಹಾಲಿ 80.06 ಅಡಿ ನೀರಿನ ಮಟ್ಟ ತಲುಪಿದೆ. ಈ ಪೈಕಿ ಕೇವಲ ಈಗ ಬಳಕೆ ಮಾಡಲು ಬರುವುದು ಕೇವಲ 4 ಟಿಎಂಸಿ ನೀರು ಮಾತ್ರ ಎನ್ನಲಾಗಿದೆ. ಉಳಿದದ್ದು ಡೆಡ್ ಸ್ಟೋರೇಜ್ ಆಗಿದೆ. ಇದು ಈಗ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಮಳೆ ಸರಿಯಾಗಿ ಆಗದೇ ಇದ್ದರೆ ಕುಡಿಯುವ ನೀರು ಸೇರಿದಂತೆ ಕೃಷಿ ಚಟುವಟಿಕೆಗೆ ಬಹಳವೇ ಸಮಸ್ಯೆ ಎದುರಾಗಲಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹುಬೇಗ ಡೆಡ್ ಸ್ಟೋರೇಜ್ ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗುತ್ತಿದೆ. ಕಾರಣ 74 ಅಡಿಗೆ ಡೆಡ್ ಸ್ಟೋರೇಜ್ ಸಂಗ್ರಹ ಇರಲಿದ್ದು, ಇದಕ್ಕೀಗ ಕೇವಲ 6 ಅಡಿಯಷ್ಟೇ ಬಾಕಿ ಇದೆ.

ಕೆಆರ್‌ಎಸ್‌ ಜಲಾಶಯದ ಮೇಲಿನ ಮುಖ್ಯದ್ವಾರ

ಇದನ್ನೂ ಓದಿ: Free Electricity: ಗೃಹಜ್ಯೋತಿ ಅರ್ಜಿಗೆ ಬಾಲಗ್ರಹ ಪೀಡೆ; 2ನೇ ದಿನವೂ ಡೆಡ್‌ ಆರ್‌ ಸ್ಲೋ!

ಬರಡು ಭೂಮಿಯಂತೆ ಕಂಡು ಬರುತ್ತಿರುವ ಕೆಆರ್‌ಎಸ್‌ ಡ್ಯಾಂನ ಸುತ್ತಮುತ್ತಲ ಪ್ರದೇಶದ ನೋಟ

2016ರಲ್ಲಿ ಡೆಡ್ ಸ್ಟೋರೇಜ್ ತಲುಪಿತ್ತು!

2017ರ ವರೆಗೆ ಕೆಆರ್‌ಎಸ್‌ನಲ್ಲಿ ಹಲವು ಬಾರಿ ನೀರಿನ ಮಟ್ಟದಲ್ಲಿ ಭಾರಿ ಕುಸಿತವಾಗುತ್ತಿತ್ತು. ಆದರೆ, ಆರು ವರ್ಷದಿಂದೀಚೆಗೆ ಉತ್ತಮ ಮಳೆಯಾಗಿ ಯಾವುದೇ ಸಮಸ್ಯೆಯಾಗಿರಲಿಲ್ಲ. 2016ರಲ್ಲಿ ಜಲಾಶಯವು ಡೆಡ್ ಸ್ಟೋರೆಜ್ ತಲುಪಿತ್ತು. ಅದೇ 2017ರಲ್ಲಿ ಮುಂಗಾರು ಅಷ್ಟಾಗಿ ಬಾರದಿದ್ದರೂ ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ಸಮಸ್ಯೆಯಾಗಿರಲಿಲ್ಲ. ಅದೇ 2018ರಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಮೂಲಕ ಪ್ರವಾಹವೇ ಸೃಷ್ಟಿಯಾಗಿತ್ತು. ಹೀಗಾಗಿ ಜಲಾಶಯವೂ ಭರ್ತಿಯಾಗಿತ್ತು. ಕಳೆದ ವರ್ಷವೂ ನವೆಂಬರ್‌ನಲ್ಲಿಯೇ ಜಲಾಶಯ ಭರ್ತಿಯಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version