Site icon Vistara News

ಏನೋ ಮಗ ನೀರು ಕೊಡೋ ಅಂದಿದ್ದಕ್ಕೇ ಚಾಲಕನ ಕೊಲೆ: ನನ್ನೇ ಮಗ ಅಂತೀಯಾ ಅಂತ ರೊಚ್ಚಿಗೆದ್ದು ಮರ್ಡರ್‌!

siddique

ಬೆಂಗಳೂರು: ತುಂಬ ಕೆಟ್ಟ ಭಾಷೆಯಲ್ಲಿ ಮಾತನಾಡುವುದು, ಅಶ್ಲೀಲವಾಗಿ ಮಾತನಾಡುವುದು ಈಗೀಗ ಕಾಮನ್‌ ಆಗಿದೆ. ಅದರಲ್ಲೂ ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಇದು ಗ್ರಾಮ್ಯ ಎಂಬ ನೆಲೆಯಲ್ಲಿ ಸ್ವೀಕಾರಾರ್ಹವಾಗುತ್ತದೆ. ಆದರೆ, ಈ ಕೆಟ್ಟ ಮಾತುಗಳು ಯಾವಾಗ ತಿರುಗಿಬೀಳುತ್ತವೆ ಎಂದು ಹೇಳಲಾಗದು.

ಜಾಲಹಳ್ಳಿ ಕ್ರಾಸ್‌ನಲ್ಲಿ ಅಂಥಹುದೇ ಘಟನೆ ನಡೆದಿದೆ. ಸಾಮಾನ್ಯವಾಗಿ ಬಳಸುವ ʻಏನ್‌ ಮಗಾʼ ಎನ್ನುವ ಒಂದು ಮಾತೇ ಕೊಲೆಗೆ ಕಾರಣವಾಗಿದೆ.

ಸಿದ್ದಿಕ್‌ (೨೫) ವೃತ್ತಿಯಲ್ಲಿ ಚಾಲಕ. ನಿನ್ನೆ ರಾತ್ರಿ ಸುಮಾರು ೧೧.೩೦ರ ಹೊತ್ತಿಗೆ ಜಾಲಹಳ್ಳಿ ಕ್ರಾಸ್‌ ಕಡೆಗೆ ಬಂದಿದ್ದಾನೆ. ಅಲ್ಲಿ ಮತ್ತೊಬ್ಬ ಆಟೊ ಚಾಲಕ ಅಜಯ್ ಸಿಕ್ಕಿದ್ದಾನೆ. ಸಿದ್ದಿಕ್‌ಗೆ ಬಾಯಾರಿಕೆಯಾಗಿತ್ತು. ನೀರು ಬೇಕಾಗಿತ್ತು.

ʻʻಏನೋ ಮಗಾ ನೀರು ಇದ್ರೆ ಕೊಡೋʼಅಂತ ಸಿದ್ದಿಕ್‌ ಕೇಳಿದ್ದಾನೆ. ಅದರಿಂದ ಅಜಯ್‌ ಸಿಟ್ಟಿಗೆದ್ದಿದ್ದಾನೆ. ʻʻಏನೋ ಮಗಾ ಅಂತೀಯʼ ಅಂತ ಕೇಳಿ ಚಾಕುವಿನಿಂದ ಸಿದ್ದಿಕ್ ಗೆ ಇರಿದೇ ಬಿಟ್ಟಿದ್ದಾನೆ ಅಜಯ್. ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಯಲಿಲ್ಲ.

ನಿಜವಾಗಿ ಅಜಯ್‌ಗೆ ಮಗಾ ಅನ್ನುವ ಪದವೇ ಸಿಟ್ಟು ತರಿಸಿತೋ? ಅಥವಾ ಅವರಿಬ್ಬರ ಮಧ್ಯೆ ಬೇರೆ ಏನಾದರೂ ಜಗಳಗಳು ಇದ್ದುವಾ ಗೊತ್ತಿಲ್ಲ. ಅಂತೂ ಮಗಾ ಎನ್ನುವ ಪದವೇ ಕಾರಣವಾಗಿ ಕೊಲೆ ನಡೆದಿರುವುದಂತೂ ನಿಜ. ನಾವು ಸಹಜ ಎಂಬಂತೆ ಬಳಸುವ ಪದಗಳು ಯಾವಾಗ ಯಾರನ್ನು ಕೆರಳಿಸಿ ಬಿಡುತ್ತವೆ ಎಂದು ಹೇಳಲಾಗದು. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಜಯ್‌ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ | ಹಳೇ ವೈಷಮ್ಯ, ರೌಡಿಸಂನಲ್ಲಿ ಹವಾ ಮೇಂಟೇನ್ ಮಾಡ್ಬೇಕು ಅಂತ ಕೊಲೆ ಮಾಡಿದ ಪಾಪಿಗಳು!

Exit mobile version