ಬೆಂಗಳೂರು: 2006ರಿಂದಲೂ ಇಲ್ಲಿಯವರೆಗೂ ನಡೆದ ಎಲ್ಲ ನೇಮಕಾತಿಗಳ ತನಿಖೆಯಾಗಲಿ. ನ್ಯಾಯಾಂಗ ತನಿಖೆಯನ್ನು ಸರ್ಕಾರ ಮಾಡಲಿ. ನಾವೇನೂ ಹೆದರುವುದಿಲ್ಲ. ಯಾಕೆಂದರೆ, ನಮ್ಮ ಕಾಲದಲ್ಲಿ ನಡೆದ ನೇಮಕಾತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಅಸಲಿಗೆ, ಸುಪ್ರೀಂ ಕೋರ್ಟ್ ಹಾಗೂ ಫಿಕ್ಕಿ (ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ)ಗಳಿಂದ ಪ್ರಶಂಸೆ ಕೂಡ ಸಿಕ್ಕಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ವಿಧಾನ ಮಂಡಲ ಅಧಿವೇಶನ ಮುಕ್ತಾಯವಾದ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಆಡಳಿತದಲ್ಲಿ 34 ಸಾವಿರಕ್ಕೂ ಅಧಿಕ ನೇಮಕ ಮಾಡಿದರೂ ಒಂದೂ ಲೋಪ ನಡೆದಿಲ್ಲ. ತನಿಖೆಗೇನೂ ಹೆದರುವುದಿಲ್ಲ. ನ್ಯಾಯಾಂಗ ತನಿಖೆಯನ್ನು ಕೈಗೊಳ್ಳಿ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗುತ್ತದೆ. ನಾವೇನೂ ಹೆದರುವುದಿಲ್ಲ. ನಿಮಗೆ ಏನಾದರೂ ದಮ್ ಇದ್ದರೆ ನ್ಯಾಯಾಂಗ ತನಿಖೆ ಕೈಗೊಳ್ಳಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.
40% ಪೇಸಿಎಂ ರಾಜ್ಯಾದ್ಯಂತ ವಿಸ್ತರಣೆ
40% ಪೇಸಿಎಂ ಅಭಿಯಾನವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ಖಚಿತಪಡಿಸಿದರು. ತನಿಖೆ ನಡೆದರೆ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಎಂಬ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ಕಟೀಲ್‌ಗೆ ಕಾನೂನು ಜ್ಞಾನವಿಲ್ಲ. ಜೈಲಿಗೆ ಕಳುಹಿಸುವ ಮುನ್ನ ತನಿಖೆಯಾಗಬೇಕು ತಾನೇ? ಅದಕ್ಕಾದರೂ ನ್ಯಾಯಾಂಗ ತನಿಖೆಯನ್ನು ಕೈಗೊಳ್ಳಲಿ ಎಂದು ಹೇಳಿದರು.
ಇದನ್ನೂ ಓದಿ | PayCM | ಪೇಸಿಎಂ ಅಭಿಯಾನ ರಾಜ್ಯ ಮಟ್ಟಕ್ಕೆ ವಿಸ್ತರಣೆ; ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಲನೆ?