Site icon Vistara News

Amit Shah | ಮುಂದಿನ 3 ವರ್ಷದಲ್ಲಿ ದೇಶದ ಎಲ್ಲ ಪಂಚಾಯಿತಿಗಳಲ್ಲಿ ಡೇರಿ ಸ್ಥಾಪನೆ: ಸಚಿವ ಅಮಿತ್ ಶಾ ಭರವಸೆ

Amit Shah Naxal Free

ಮಂಡ್ಯ: ಮುಂದಿನ ಮೂರು ವರ್ಷದಲ್ಲಿ ದೇಶದ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಒಂದು ಪ್ರಾಥಮಿಕ ಡೇರಿಯನ್ನು ಸ್ಥಾಪನೆ ಮಾಡಲಾಗುವುದು. ಅದಕ್ಕೆ ಬೇಕಾಗಿರುವ ಎಲ್ಲ ತಯಾರಿಯನ್ನು ಮಾಡಿಕೊಳ್ಳಲಾಗಿದೆ ಎಂದು ಸಹಕಾರ ಸಚಿವರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (amit shah) ಅವರು ಹೇಳಿದರು.

ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಮೆಗಾ ಡೇರಿಯನ್ನು (Mega Dairy) ಉದ್ಘಾಟಿಸಿ ಮಾತನಾಡಿದ ಶಾ ಅವರು, ಕರ್ನಾಟಕದ ನಂದಿನಿ ಮತ್ತು ಗುಜರಾತ್‌ನ ಅಮೂಲ್ ಜತೆಗೂಡಿ ಕೆಲಸ ಮಾಡಿದರೆ, ದೇಶದ ಹಾಲು ಉತ್ಪಾದಕರ ಕಲ್ಯಾಣ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ಸ್ವಾತಂತ್ರ್ಯದ ಬಳಿಕ ಕೃಷಿ ಇಲಾಖೆಯಿಂದ ಸಹಕಾರ ಇಲಾಖೆಯನ್ನು ಪ್ರತ್ಯೇಕಗೊಳಿಸಬೇಕೆಂಬ ಬೇಡಿಕೆ ರೈತರು ಮತ್ತು ಸಹಕಾರಿಗಳು ಮುಂದಿಟ್ಟಿದ್ದರು. ಆದರೆ, ಅಂದು ಅದು ಸಾಧ್ಯವಾಗಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕ ಸಹಕಾರ ಇಲಾಖೆಯನ್ನು ಆರಂಭಿಸುವ ಮೂಲಕ ರೈತರು ಮತ್ತು ಹಾಲು ಉತ್ಪಾದಕರ ಕಲ್ಯಾಣಕ್ಕೆ ನಾಂದಿ ಹಾಡಿದ್ದಾರೆ ಎಂದು ಶಾ ಅವರು ಹೇಳಿದರು.

ಈ ಮಂಡ್ಯ ಜಿಲ್ಲೆಯ ಮೆಗಾ ಡೇರಿಯ ವೇದಿಕೆಯಿಂದ ನಾನು ದೇಶದ ಸಹಕಾರಿಗಳು, ರೈತರಿಗೆ ಭರವಸೆ ನೀಡುತ್ತೇನೆ. ಇನ್ನು ಮುಂದೆ ಯಾವುದೇ ರೀತಿಯಲ್ಲಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಇದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದರು.

ಮಂಡ್ಯದ ಗೆಜ್ಜಲಗೆರೆಯಲ್ಲಿ ಒಟ್ಟು 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮೆಗಾ ಡೇರಿಯಲ್ಲಿ ನಿತ್ಯ 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಅಲ್ಲದೇ ಇಲ್ಲಿ ಮುಂಬರುವ ದಿನಗಳಲ್ಲಿ ನಿತ್ಯ 14 ಲಕ್ಷ ಲೀಟರ್ ಹಾಲು ಸಂಸ್ಕರಣೆಯ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಇದರಿಂದ ಈ ಭಾಗದ ರೈತರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ಹಾಲು ಉತ್ಪಾದನಾ ಸಹಕಾರಿ ಸಂಘಗಳು ಬಹಳ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸದ್ಯ ಕರ್ನಾಟಕದಲ್ಲಿ 15210 ಹಳ್ಳಿಗಳಲ್ಲಿ ಪ್ರಾಥಮಿಕ ಡೇರಿಗಳಿವೆ. ಇದರಲ್ಲಿ ಲಕ್ಷಾಂತರ ರೈತರು ಪಾಲ್ಗೊಂಡಿದ್ದಾರೆ. ಹಾಗೆಯೇ 16 ಜಿಲ್ಲಾ ಮಟ್ಟದ ಡೇರಿಗಳ ಮೂಲಕ ಹಾಲು ಉತ್ಪಾದನೆಯಲ್ಲಿ ಕರ್ನಾಟಕವು ಉತ್ಕೃಷ್ಟತೆಯನ್ನು ಸಾಧಿಸಿದೆ ಎಂದು ಅವರು ತಿಳಿಸಿದರು. ಅಲ್ಲದೇ, ಕರ್ನಾಟಕ 1975ರಿಂದ 2022ರವರೆಗೆ ಡೇರಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗುಜರಾತ್‌ನ ಅಮೂಲ್ ಮತ್ತು ಕರ್ನಾಟಕದ ನಂದಿನಿ ಎರಡೂ ಕೂಡಿ ಕೆಲಸ ಮಾಡಿದರೆ, ಮೂರು ವರ್ಷದಲ್ಲಿ ದೇಶದ ಎಲ್ಲ ಕಡೆಯೂ ಡೇರಿಗಳ ತಲೆ ಎತ್ತಲಿವೆ. ಎಲ್ಲ ಹಳ್ಳಿಗಳಲ್ಲಿ ನಾವು ಪ್ರಾಥಮಿಕ ಡೇರಿಯನ್ನು ತೆರೆಯಲು ಸಾಧ್ಯವಾಗಲಿದೆ. ಮುಂದಿನ ಮೂರು ವರ್ಷದಲ್ಲಿ ಒಟ್ಟು 2 ಲಕ್ಷ ಪ್ರೈಮರಿ ಡೇರಿಗಳನ್ನು ಆರಂಭಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.

ಕರ್ನಾಟಕ ಹಾಲು ಒಕ್ಕೂಟ ಸಂಘಕ್ಕೆ ಬೇಕಾಗುವ ಎಲ್ಲ ತಾಂತ್ರಿಕ ನೆರವು, ಸಹಕಾರದ ಬೆಂಬಲ ಹಾಗೂ ಅಮೂಲ್ ಕಾರ್ಯ ವಿಧಾನದ ಮಾಹಿತಿಯನ್ನು ನೀಡಲಾಗುವುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಯಾವೆಲ್ಲ ನೆರವು ಬೇಕೋ ಅದನ್ನೆಲ್ಲ ನೀಡಲಾಗುವುದು. ಗುಜರಾತ್ ಮತ್ತು ಕರ್ನಾಟಕ ಎರಡೂ ಸೇರಿ ಹಾಲು ಉತ್ಪಾದನೆಯಲ್ಲಿ ಉತ್ತಮ ಕೆಲಸ ಮಾಡಬಹುದು ಎಂದು ತಿಳಿಸಿದರು.

ಇದನ್ನೂ ಓದಿ | CM Basavaraj Boomai | ಶೀಘ್ರ ಮೈಶುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ: ಸಿಎಂ ಬೊಮ್ಮಾಯಿ ಭರವಸೆ

Exit mobile version