ಶಿವಮೊಗ್ಗ, ಕರ್ನಾಟಕ: ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದರೆ ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದೆ. ಅಂದರೆ ವರ್ಷಕ್ಕೆ 2 ಲಕ್ಷ ಉದ್ಯೋಗ ಎಂದಾಯಿತು. ಕಾಂಗ್ರೆಸ್‌ನ ಈ ಗ್ಯಾರಂಟಿ ಎಷ್ಟು ಸುಳ್ಳು ಎಂದು ನಾನು ಹೇಳುತ್ತೇನೆ. ಕೇವಲ 3.5 ವರ್ಷ ಆಡಳಿತ ನಡೆಸಿದ ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರವು ಪ್ರತಿ ವರ್ಷ 13 ಲಕ್ಷ ಔಪಚಾರಿಕ ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. ಅದು ಕೊರೊನಾದಂಥ ಸಂಕಟ ಕಾಲದಲ್ಲೂ ಈ ಸಾಧನೆ ಮಾಡಿದೆ. ಈಗ ಗೊತ್ತಾಯಿತು ಅಲ್ವಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೇಗೆ ಕರ್ನಾಟಕವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಶಿವಮೊಗ್ಗದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸುಳ್ಳು ಭರವಸೆಗಳನ್ನು ನೀಡುತ್ತಿರುವ, ಕರ್ನಾಟಕದ ಅಭಿವೃದ್ಧಿಗೆ ಕಂಟಕವಾಗಿರುವ ಕಾಂಗ್ರೆಸ್ ಬಗ್ಗೆ ಬಹಳ ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ಕಾಂಗ್ರೆಸ್‌ನಿಂದ ವಿನಾಶ ಮಾತ್ರ ಸಾಧ್ಯ
ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿರುವ ಹೊಸ ಮತದಾರರಿಗೆ ನನ್ನದೊಂದು ಪ್ರಶ್ನೆ ಇದೆ. ಯಾವಾಗಲೂ ಭ್ರಷ್ಟಾಚಾರ, ತುಷ್ಟೀಕರಣದ ನೀತಿ ಅನುಸರಿಸುವ ಕಾಂಗ್ರೆಸ್‌ನಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ನಿಮ್ಮ ತಂದೆ ತಾಯಿ, ಅಜ್ಜ ಅಜ್ಜಿ ಅನುಭವಿಸಿದ ಸಂಕಟವನ್ನು ನೀವು ಅನುಭವಿಸಲು ಈ ಮೋದಿ ಬಿಡುವುದಿಲ್ಲ. ನಿಮ್ಮ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರತಿ ಎರಡು ದಿನಕ್ಕೆ ಒಂದು ಕಾಲೇಜ್ ನಿರ್ಮಿಸಿದ್ದಾರೆ ಮೋದಿ
ಈ ನಾಡಿನ ಯುವಕರಿಗೆ ಮೋದಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವು ಕಳೆದ 9 ವರ್ಷದಲ್ಲಿ ಸಾಕಷ್ಟು ಕೆಲಸಗಳನ್ನು ಯುವಕರ ಸಬಲೀಕರಣಕ್ಕೆ ಮಾಡಿದೆ. ದೇಶದಲ್ಲಿ ಪ್ರತಿ ಎರಡು ದಿನಕ್ಕೆ ಒಂದು ಕಾಲೇಜ್ ನಿರ್ಮಾಣ ಮಾಡಿದೆ. ಪ್ರತಿ ವಾರಕ್ಕೆ ಒಂದು ವಿಶ್ವವಿದ್ಯಾಲಯ ಆರಂಭಿಸಿದೆ. ದೇಶದಲ್ಲಿ 300ಕ್ಕೂ ಅಧಿಕ ವೈದ್ಯಕೀಯ ಕಾಲೇಜ್ ಆರಂಭಿಸಿದೆ. ಗ್ರೂಪ್ ಡಿ ಮತ್ತು ಸಿ ನೇಮಕಾತಿಯಲ್ಲಿದ್ದ ಸಂದರ್ಶನವನ್ನು ತೆಗೆದು ಹಾಕಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಮುದ್ರಾ ಮೂಲಕ 20 ಲಕ್ಷ ರೂ. ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೇ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಬೆಂಗಳೂರಲ್ಲಿ ಅಭೂತಪೂರ್ವ ಪ್ರತಿಕ್ರಿಯೆ
ಭಾನುವಾರ ಬೆಂಗಳೂರಲ್ಲಿ ಬೆಳಗ್ಗೆ ರೋಡ್ ಶೋ ಮಾಡಿದೆ. ಜನತನಾ ಜನಾರ್ದನ ದರ್ಶನಕ್ಕೆ ಹೋಗಿದ್ದೆ. ಅವರಿಂದ ಅದ್ಭುತವಾದ ಪ್ರತಿಕ್ರಿಯೆ ದೊರೆಯಿತು. ಇದರಿಂದ ಮೂಕ ವಿಸ್ಮಿತನಾಗಿದ್ದೇನೆ. ಕರ್ನಾಟಕ ನೀಡಿರುವ ಪ್ರೀತಿ, ವಿಶ್ವಾಸಕ್ಕೆ ನಾನೇನು ಹೇಳಲಿ. ರೈತ ಬಂಧು ಯಡಿಯೂರಪ್ಪ ಅವರ ನೆಲದಿಂದ ನಿಂತು ಹೇಳುತ್ತಿದ್ದೇನೆ. ನೀವು ಪ್ರೀತಿ, ವಿಶ್ವಾಸಕ್ಕೆ ಪ್ರತಿಯಾಗಿ ನಾನು ಕರ್ನಾಟಕವನ್ನು ಅಭಿವೃದ್ದಿ ಮಾಡುವ ಮೂಲಕ ಬಡ್ಡಿ ಸಮೇತ ವಾಪಸ್ ನೀಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಅಡಕೆ ಬೆಳೆಗಾರರ ನೆರವು ನೀಡಿದ್ದೇನೆ ಎಂದ ಮೋದಿ
ಬಿಜೆಪಿ ಸರ್ಕಾರವು ಅಡಕೆ ಬೆಳೆಗಾರರಿಗೆ ಎಲ್ಲ ರೀತಿಯ ನೆರವು ನೀಡುತ್ತಿದೆ. ಅಡಿಕೆ ಆಮದು ನಿಯಂತ್ರಿಸಿ ಇಲ್ಲಿನ ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. 2014ರಲ್ಲಿ ಪ್ರತಿ ಕೆಜಿಗೆ ಅಡಕೆ ಕನಿಷ್ಠ ಆಮದು ಬೆಲೆ 100 ರೂ. ಇತ್ತು. ಅದನ್ನು ನಾನು 350 ಕೆ.ಜಿ.ಗೆ ಹೆಚ್ಚಿಸಿದ್ದೇನೆ. ಜಗತ್ತಿನಲ್ಲಿ ಯಾರು ಏನೆಂದರೂ ನನಗೆ ಲೆಕ್ಕಕ್ಕಿಲ್ಲ. ನನ್ನ ರೈತರಿಗೆ ಒಳ್ಳೆಯದಾಗಬೇಕು, ಅಡಕೆ ಬೆಳೆಗಾರರಿಗೆ ಒಳ್ಳೆಯದಾಗಬೇಕು. ಎಂಐಪಿ ಹೆಚ್ಚಿಸಿದ್ದರಿಂದ ಕರ್ನಾಟಕದ ರೈತರಿಗೆ, ಅಡಕೆ ಬೆಳೆಗಾರರಿಗೆ ಭಾರಿ ನೆರವು ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಬಿಜೆಪಿ ಸರ್ಕಾರವು ಒಂದೆಡೆ ಆಮದು ಮೇಲೆ ನಿಯಂತ್ರಣ ಹೇರುತ್ತಿದ್ದರೆ ಮತ್ತೊಂದೆಡೆ ಕೃಷಿ ರಫ್ತು ಹೆಚ್ಚಿಸುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಕೃಷಿ ರಫ್ತು ಬಹಳ ಕಡಿಮೆ ಇತ್ತು. ಮೋದಿ ಸರ್ಕಾರದ ಪ್ರಯತ್ನದ ಫಲವಾಗಿ ಈಗ ಭಾರತವು ಕೃಷ್ಟಿ ರಫ್ತು ಮಾಡುವ ಟಾಪ್ 10 ರಾಷ್ಟ್ರಗಳ ಸಾಲಿಗೆ ಸೇರಿಕೊಂಡಿದೆ. ಆ ಮೂಲಕ ಕೃಷ್ಟಿ ರಫ್ತು ಮಾಡುವ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಹೇಳಿದರು.
ಶರಣೆ ಅಕ್ಕ ಮಹಾದೇವಿಯನ್ನು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರ ಸರ್ಕಾರವು ಹೇಗೆ ಮಹಿಳಾ ಸಬಲೀಕರಣ ಮಾಡುತ್ತಿದೆ ಎಂಬುದನ್ನು ವಿವರಿಸಿದರು. ಶಾಲೆಗಳಿಗೆ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದೇವೆ. ಈಗ ಹೆಣ್ಣು ಮಕ್ಕಳೂ ಸೈನಿಕ ಸ್ಕೂಲ್ ಸೇರಬಹುದು. ಮೂರು ಪಡೆಗಳಲ್ಲಿ ಅವರಿಗೆ ಅವಕಾಶ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ನಿರ್ಬಂಧಿಸಲಾಗಿತ್ತು. ನಮ್ಮ ಆಡಳಿತದಲ್ಲಿ ಮಹಿಳೆಯರಿಗೆ ಅಕ್ಕಮಹಾದೇವಿ ಪ್ರೇರಣೆ ಇದೆ, ಆಶೀರ್ವಾದ ದೊರೆತಿದೆ ಎಂದು ಪ್ರಧಾನಿ ಹೇಳಿದರು.
ಯಡಿಯೂರಪ್ಪ, ಈಶ್ವರಪ್ಪ ಭುಜ ತಟ್ಟಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಜನರತ್ತ ಕೈ ಬೀಸಿ, ತಮ್ಮ ಅಕ್ಕಪಕ್ಕದಲ್ಲಿದ್ದ ಬಿ ಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಕೈಗಳನ್ನು ಎತ್ತಿ ಹಿಡಿದು ಒಗ್ಗಟ್ಟು ಸೂಚಿಸಿದರು. ಬಳಿಕ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರನ್ನು ಗಟ್ಟಿಯಾಗಿ ಭುಜ ತಟ್ಟಿದರು. ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಫೋನ್ ಮಾಡಿ ಮಾತನಾಡಿದ್ದರು.