ಬೆಂಗಳೂರು: ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿ ನೀಡುವ ಕಾಯ್ದೆಗೆ ಒಪ್ಪಿಗೆ ನೀಡಿರುವ ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠದ ತೀರ್ಪಿನ ಕುರಿತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಂ. ಕಾಂಬ್ಳೆ, ಮೇಲ್ವರ್ಗದ ಜನರಿಗೆ ಮಾತ್ರ ಅನುಕೂಲವಾಗುವ, ಆರ್ಥಿಕವಾಗಿ ದುರ್ಬಲ ವರ್ಗಗಳ 10% ಮೀಸಲಾತಿಯ ತೀರ್ಪನ್ನು ಸುಪ್ರೀಂಕೋರ್ಟ್ ಮರುಪರಿಶೀಲಿಸಬೇಕು ಎಂದಿದ್ದಾರೆ.
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಕೇಂದ್ರ ಸರ್ಕಾರ ನೀಡಿರುವ 10% ಮೀಸಲಾತಿಯನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್‌ನ ಐದು ಸದಸ್ಯರ ಪೀಠದ ತೀರ್ಪು ಮೀಸಲಾತಿ ನೀತಿಗೆ ವಿರುದ್ಧವಾಗಿದೆ. ಏಕೆಂದರೆ ಇದರ ಪ್ರಯೋಜನ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ SEBCಗಳು, OBC ಗಳು, SCಗಳು ಮತ್ತು STಗಳಿಗೆ ಅನ್ವಯಿಸುವುದಿಲ್ಲ.
ಈ ನೀತಿ ಈಗಾಗಲೇ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಇತರರಿಗಿಂತ ಹಿಂದುಳಿದಿರುವ ಸಮಾಜದ ವಂಚಿತ ವರ್ಗಗಳನ್ನು ಸಾಮಾಜಿಕವಾಗಿ ಮತ್ತಷ್ಟು ಹೊರಗಿಡಲು ಬಲಪಂಥೀಯ ಬಿಜೆಪಿಯು ಜಾರಿಗೆ ತಂದಿರುವ ಮತ್ತೊಂದು ನೀತಿಯಾಗಿದೆ ಎಂದಿದ್ದಾರೆ.
ಉದ್ಯೋಗಗಳು ಮತ್ತು ಸಾರ್ವಜನಿಕ ಉನ್ನತ ಮತ್ತು ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗಕ್ಕೆ ಶೇ.10 ಮೀಸಲಾತಿ ಮಸೂದೆಯನ್ನು 9 ಜನವರಿ 2019 ರಂದು ಸಂವಿಧಾನದ 103ನೇ ತಿದ್ದುಪಡಿಯ ಮೂಲಕ ಜಾರಿಗೊಳಿಸಲಾಯಿತು. ಇದರ ವಿರುದ್ಧ ಸಲ್ಲಿಸಲಾದ ಅರ್ಜಿಯ ಸುಮಾರು 20 ಸಹಿದಾರರಲ್ಲಿ ಎಸ್‌ಡಿಪಿಐ ಕೂಡ ಸೇರಿದೆ. “ಎಸ್‌ಡಿಪಿಐ ಈ ತೀರ್ಪಿಗೆ ತನ್ನ ಆಕ್ಷೇಪಣೆಯನ್ನು ಬಲವಾಗಿ ದಾಖಲಿಸುತ್ತದೆ. ಗೌರವಾನ್ವಿತ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಮರುಪರಿಶೀಲನೆ ಮಾಡಬೇಕು” ಎಂದು ಬಿ.ಎಂ. ಕಾಂಬ್ಳೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | EWS Reservation | ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ಶೇ.10 ಮೀಸಲಾತಿ ಆಶಾಕಿರಣ ಎಂದ ಸಿಎಂ ಬೊಮ್ಮಾಯಿ