ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸ್ಪರ್ಧೆಗೆ ಟಿಕೆಟ್ ಸಿಗುವ ವಿಶ್ವಾಸ ಹೊಂದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಆಘಾತವಾಗಿದ್ದು, ಟಿಕೆಟ್ ಕೈತಪ್ಪಿದೆ. ತಮ್ಮ ಅಸಮಾಧಾನವನ್ನು ಅವರು ಬಹಿರಂಗವಾಗಿ ಹೊರಹಾಕಿದ್ದು, ಇಂದು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗುವುದಾಗಿ ತಿಳಿಸಿದ್ದಾರೆ.
ಈ ಕುರಿತು ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದಾರೆ. ರಾಜಕೀಯ ನಿವೃತ್ತಿಯ ಬಗ್ಗೆಯೂ ಮೊದಲ ಬಾರಿಗೆ ಮಾತನಾಡಿದ್ದಾರೆ. ʼʼರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದೇನೆ. ನನಗೆ ಸಕಾರಾತ್ಮಕ ಸ್ಪಂದನೆ ಸಿಗುವ ಭರವಸೆ ಇದೆ. ನಿನ್ನೆ ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದೇನೆ. ಟಿಕೆಟ್ ವಿಚಾರವಾಗಿ ನನಗೆ ವರಿಷ್ಠರು ಸ್ಪಷ್ಟತೆಯನ್ನು ತಿಳಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಬಂದ ಮೇಲೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆʼʼ ಎಂದಿದ್ದಾರೆ.
ಒಬ್ಬ ಶಾಸಕನಾಗಿ ಎರಡು ವರ್ಷಗಳಿಂದ ಯಾವುದೇ ಸ್ಥಾನಮಾನ ಇಲ್ಲದೇ ಅಭಿವೃದ್ದಿ ಕೆಲಸಗಳನ್ನ ಮಾಡಿದ್ದೇನೆ. ಸಚಿವ ಸ್ಥಾನ ಇಲ್ಲದೇನೂ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ನಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಯಾರೇ ಆಗಲಿ ಗೌರವಯುತವಾಗಿ ಚುನಾವಣಾ ರಾಜಕೀಯದಿಂದ ಹೊರ ಹೋಗಬೇಕು. ಈ ರೀತಿ ಹೊರ ಹೋಗುವುದು ಸರಿಯಲ್ಲ. ಬೆಂಬಲಿಗರ ಸಾಫ್ಟ್ ಕಾರ್ನರ್ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ: BJP Ticket: ಬಿಜೆಪಿಗೆ ಹಲವು ಕಡೆ ಬಂಡಾಯದ ಬಿಸಿ, ಸವದಿಗೆ ಕಾಂಗ್ರೆಸ್ ಗಾಳ, ಶೆಟ್ಟರ್ ನಡೆ ಏನು?
ಮೊದಲ ಬಾರಿಗೆ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರುವ ಅವರು, ʼʼನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ. ನಾನು ಯಾವುದೇ ಸಂದರ್ಭದಲ್ಲಾದರೂ ರಾಜಕೀಯ ನಿವೃತ್ತಿ ಪಡೆದುಕೊಳ್ಳಬಹುದುʼʼ ಎಂದರು.
ʼʼಸೀನಿಯರ್ಸ್ ಅಂದ್ರೆ ಯಾರು? ವಯಸ್ಸೋ ಅಥವಾ ರಾಜಕಾರಣದಲ್ಲಿ ಸೀನಿಯರ್ಸೋ? ಟಿಕೆಟ್ ಸಿಕ್ಕವರಲ್ಲಿ 75, 76 ವರ್ಷದವರೂ ಇದ್ದಾರೆ. ಅವರಿಗೆ ಸೀನಿಯರ್ಸ್ ಅನ್ನೋದಿಲ್ವಾ ನೀವು?ʼʼ ಎಂದು ಅವರು ಪ್ರಶ್ನೆ ಎಸೆದಿದ್ದಾರೆ.
ಸದ್ಯ ಶೆಟ್ಟರ್ ಹೇಳಿಕೆಗಳು ಕುತೂಹಲ ಕೆರಳಿಸಿವೆ. ಹುಬ್ಬಳ್ಳಿಯ ಮಧುರಾ ಕಾಲನಿ ನಿವಾಸದಿಂದ ಶೆಟ್ಟರ್ ದೆಹಲಿಯತ್ತ ಇಂದು ಪ್ರಯಾಣ ಬೆಳೆಸಿದ್ದಾರೆ. ಟಿಕೆಟ್ ಮಿಸ್ ಆಗಿರುವುದಕ್ಕೆ ತೀವ್ರ ಅಸಮಾಧಾನ ಹೊರ ಹಾಕಿರುವ ಶೆಟ್ಟರ್ ಅವರಿಗೆ ನಿನ್ನೆ ಪಕ್ಷದ ರಾಷ್ಟ್ರೀಯ ನಾಯಕರಿಂದ ಬುಲಾವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗುತ್ತಿದ್ದಾರೆ. ಅವರ ನಿರ್ಧಾರವು ಹುಬ್ಬಳ್ಳಿ ಭಾಗದಲ್ಲಿ ಬಿಜೆಪಿ ಚುನಾವಣಾ ಸಾಧನೆಯ ಮೇಲೆ ಪರಿಣಾಮ ಬೀರಲಿದೆ.