Site icon Vistara News

ಎಚ್‌ಡಿಕೆ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಪಡೆದಿದ್ದರು, ಇದು ಅವರಿಗೆ ಕೊನೇ ಎಚ್ಚರಿಕೆ: ಸಿ.ಪಿ.ಯೋಗೇಶ್ವರ್‌

ಸಿ.ಪಿ.ಯೋಗೇಶ್ವರ್‌

ರಾಮನಗರ: ನಾನು ರಾಜಕೀಯಕ್ಕೆ ಬಂದಾಗ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬನಶಂಕರಿಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆಗ ನಾನು ರಿಯಲ್ ಎಸ್ಟೇಟ್‌ ಪಾಲುದಾರನಾಗಿ ರಾಮನಗರ ಭಾಗದಲ್ಲಿ ಹೆಸರು ಮಾಡಿದ್ದೆ. ನನ್ನ ಭೂಮಿಯನ್ನು ನೈಸ್ ಕಂಪನಿಗೆ ಸ್ವಾಧಿನಪಡಿಸಿಕೊಂಡು, ಖಾತೆ ಇನ್ನಿತರ ಸರ್ಕಾರಿ ದಾಖಲೆ ಮಾಡಿಕೊಡಲು ಬ್ಲ್ಯಾಕ್‌ಮೇಲ್‌ ಮಾಡಿ ಹೆದರಿಸಿ ಹಣ ಪಡೆದಿದ್ದಾರೆ ಎಂದು ಎಚ್‌ಡಿಕೆ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಆರೋಪಿಸಿದ್ದಾರೆ.

ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದವನು, ನೀರಾವರಿ ತಜ್ಞನೇ ಎಂಬ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿ, ನಾನು ಚನ್ನಪಟ್ಟಣದಲ್ಲಿ ಹಲವು ಬಾರಿ ಶಾಸಕನಾಗಿದ್ದಾನೆ. ಅವರು ಪದೇ ಪದೇ ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಮೊದಲೇ ಕುಮಾರಸ್ವಾಮಿಗೆ ಎಚ್ಚರಿಕೆ ಕೊಟ್ಟಿದ್ದೆ, ಇದು ಮುಂದುವರಿದರೆ ನೇರವಾಗಿ ಅವರ ಕಾರು ನಿಲ್ಲಿಸಿಯೇ ಕೇಳಬೇಕಾಗುತ್ತದೆ, ಇದು ಕೊನೆಯ ಎಚ್ಚರಿಕೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ | ಧೂಳು ಹಿಡಿದ ಲೋಕಾಯುಕ್ತ ಕಚೇರಿಯಲ್ಲಿ ಶುರುವಾಯ್ತು ಸ್ವಚ್ಛತಾ ಕಾರ್ಯ, ಬಾಕಿ ಉಳಿದ ದೂರೆಷ್ಟು?

ನನ್ನನ್ನು ನೀರಾವರಿ ತಜ್ಞರೇ ಎಂದು ಟೀಕಿಸಿದ್ದಾರೆ, ಆದರೆ ಅವರನ್ನು ನಾನು ಕೇಳಲು ಇಷ್ಟಪಡುತ್ತೇನೆ. ಎಚ್‌ಡಿಕೆ ಅವರೇ ನೀವು ನೀರಾವರಿ ತಜ್ಞರೇ? ಮಾತುಗಳು ಇತಿಮಿತಿಯಲ್ಲಿರಬೇಕು, ವೈಯಕ್ತಿಕವಾಗಿ ಮಾತನಾಡಬಾರದು. ಮೆಗಾ ಸಿಟಿ ಮಾಡಿ ಜನರಿಗೆ ಟೋಪಿ ಹಾಕಿದ್ದ ವ್ಯಕ್ತಿ ಎಂದು ನನ್ನ ಬಗ್ಗೆ ಹೇಳಿದ್ದಾರೆ, ಮಾಕಳಿ ಏತ ನೀರಾವರಿ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ಆ ಯೋಜನೆ ಏನು ಎಂಬುದೇ ಕುಮಾರಸ್ವಾಮಿಗೆ ಗೊತ್ತಿಲ್ಲ, ಅವರೇನು ನೀರಾವರಿ ತಜ್ಞರಾ, ಸರ್ವಶ್ರೇಷ್ಠ ರಾಜಕಾರಣಿಯೇ ಎಂದು ಕೇಳಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಮೊದಲಿನಿಂದಲೂ ರಾಜಕಾರಣ ಮಾಡುವವರನ್ನು ಮುಳಗಿಸುವ ಎಚ್‌ಡಿಕೆ, ನನ್ನನ್ನು ಹಾಗೂ ಅಶ್ವತ್ಥನಾರಾಯಣ ಅವರನ್ನೂ ತೇಜೋವಧೆ ಮಾಡುತ್ತಿದ್ದಾರೆ. ಒಬ್ಬ ಟೀ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿ ಆಗಿದ್ದಾರೆ. ಆಟೋ ಓಡಿಸುತ್ತಿದ್ದ ವ್ಯಕ್ತಿ ಒಂದು ರಾಜ್ಯದ ಸಿಎಂ ಹಾಗೂ ಬುಡಕಟ್ಟು ಜನಾಂಗದ ಮಹಿಳೆ ರಾಷ್ಟ್ರಪತಿ ಆಗಿದ್ದಾರೆ. ಹೀಗಾಗಿ ಯಾರೊಬ್ಬರ ಬಗ್ಗೆಯೂ ಕೀಳಾಗಿ ಮಾತನಾಡಬಾರದು ಎಂದು ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Amrith Mahotsav | ತ್ರಿವರ್ಣ ಧ್ವಜ ಏಕೆಂದು ಪತ್ರ ಬರೆದಿದ್ದ ಸಿಎಂ; 13 ಪ್ರಶ್ನೆ ಕೇಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ!

Exit mobile version